ಲಿಖಿತ ಹೇಳಿಕೆ ಸಲ್ಲಿಸದ ಆರೋಪ: ಮಾಜಿ ಜಿಲ್ಲಾ ಸರಕಾರಿ ವಕೀಲರ ವಿರುದ್ಧ ತನಿಖೆ
ಉಡುಪಿ : 2021–23ನೇ ಅವಧಿಯಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾ ಸರಕಾರಿ ವಕೀಲರಾಗಿ ಕಾರ್ಯನಿರ್ವಹಿಸಿದ್ದ ಎ. ಸಂತೋಷ್ ಹೆಬ್ಬಾರ್ ಅವರು ನ್ಯಾಯಾಲಯದ ತನಿಖಾ ಹಂತದಲ್ಲಿದ್ದ ಹಲವು ಪ್ರಕರಣಗಳಲ್ಲಿ ಸರಕಾರದ ಪರವಾಗಿ ಲಿಖಿತ ಹೇಳಿಕೆ ಸಲ್ಲಿಸದೆ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪದ ಕುರಿತು ವಿಚಾರಣೆ ನಡೆಯುತ್ತಿದ್ದು, ವರದಿ ಸ್ವೀಕೃತವಾದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗುರುವಾರ ಉತ್ತರಿಸಿದ ಸಚಿವರು, ಈ ಬಗ್ಗೆ ಉಡುಪಿ ವಕೀಲರ ಸಂಘದ ಅಧ್ಯಕ್ಷರು ಸರಕಾರಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿಸಿದರು. ದೂರಿನ ಸಂಬಂಧ ಉಡುಪಿ ಜಿಲ್ಲಾಧಿಕಾರಿ, ಜಿಲ್ಲಾ ಸರಕಾರಿ ವಕೀಲರು ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ವಿಚಾರಣೆ ನಡೆಯುತ್ತಿದೆ ಎಂದರು.
ಎಷ್ಟು ಪ್ರಕರಣಗಳಲ್ಲಿ ಲಿಖಿತ ಹೇಳಿಕೆ ಸಲ್ಲಿಸದೇ ಇರುವುದು ಹಾಗೂ ಇದರಿಂದ ಸರಕಾರಕ್ಕೆ ಉಂಟಾಗಿರುವ ನಷ್ಟದ ಪ್ರಮಾಣದ ಕುರಿತು ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜ.22ರಂದು ಉಡುಪಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ವಿವರಿಸಿದರು. ಇದೇ ಸಂಬಂಧ ಜಿಲ್ಲಾ ಸರಕಾರಿ ವಕೀಲರು ಹಾಗೂ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅಗತ್ಯ ಮಾಹಿತಿ ಒದಗಿಸುವಂತೆ ಪತ್ರ ಬರೆದಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಬೈಂದೂರು: ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು; ಆಹಾರ ನಿರೀಕ್ಷಕರಿಂದ ದಾಳಿ, 7.14 ಕ್ವಿಂಟಾಲ್ ಅಕ್ಕಿ ಜಪ್ತಿ
ವಿಚಾರಣಾ ವರದಿ ಮತ್ತು ಮಾಹಿತಿ ಸ್ವೀಕೃತವಾದ ಬಳಿಕ ಅದರ ಆಧಾರದಲ್ಲಿ ಹಿಂದಿನ ಜಿಲ್ಲಾ ಸರಕಾರಿ ವಕೀಲರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದರು.



