ಮಣಿಪಾಲದಲ್ಲಿ ರಾಪಿಡೋ–ನಮ್ಮ ಯಾತ್ರಿ ಸೇವೆ : ಆಟೋ ಚಾಲಕರಿಂದ ತೀವ್ರ ವಿರೋಧ, ಬಾಡಿಗೆ ಸ್ಥಗಿತ

Namma Yathri Rapido : ಉಡುಪಿ : ರಾಜ್ಯದ ಮಹಾ ನಗರದಲ್ಲಿ ಆಟೋ ರಿಕ್ಷಾ ಚಾಲಕರು ರಾಪಿಡೋ ಹಾಗೂ ನಮ್ಮ ಯಾತ್ರಿ ಆಪ್ ಆಧಾರಿತ ಆಟೋ ಸೇವೆಗಳಿಗೆ ಒಗ್ಗಿಕೊಂಡು ಜೀವನ ನಿರ್ವಹಣೆ ಕಲಿತಿದ್ದಾರೆ. ಆಗಾಗ ಸಣ್ಣ ಪುಟ್ಟ ವಿರೋಧ ಕೇಳಿ ಬಂದರು ಕೂಡ ಬಹುತೇ ಎಲ್ಲರೂ ನೂತನ ವ್ಯವಸ್ಥೆಗೆ ಒಗ್ಗಿಕೊಂಡು ಹಲವು ವರ್ಷಗಳೆ ಕಳೆದಿವೆ.

ಅದರೆ ಕರಾವಳಿ ಭಾಗಕ್ಕೇ ಇತ್ತೀಚಿನ ದಿನಗಳಲ್ಲಿ ರಾಪಿಡೋ ಹಾಗೂ ನಮ್ಮ ಯಾತ್ರಿ ಆಪ್ ಆಧಾರಿತ ಆಟೋ ಸೇವೆಗಳು ಸದ್ಯ ಪ್ರಾರಂಭಗೊಳ್ಳುತ್ತಿದೆ. ಇದು ರಿಕ್ಷಾ ಚಾಲಕರಲ್ಲಿ ಹೊಸ ಆತಂಕ ಮೂಡಿಸಿದೆ ಹೀಗಾಗಿ ಈ ಹೊಸ ವ್ಯವಸ್ಥೆ ವಿರೋಧಿಸಿ 400ಕ್ಕೂ ಹೆಚ್ಚು ಉಡುಪಿ ಆಟೋ ಚಾಲಕರು ಭಾರೀ ಪ್ರತಿಭಟನೆ ನಡೆಸಿದ್ದಾರೆ.

ಉಡುಪಿ ಜಿಲ್ಲೆಗೆ ಈಗ ಮೊಬೈಲ್‌ ಆಪ್‌ ಆಧರಿಸಿದ ರಿಕ್ಷಾ ಸೇವೆ ಆರಂಭವಾಗಿದೆ. ಇದು ರಿಕ್ಷಾ ಚಾಲಕರಿಗೆ ಹೊಸ ತಲೆ ನೋವಾಗಿದೆ. ರಾಜ್ಯದ ಬಹುತೇಕ ನಗರಗಳಲ್ಲಿ ಆಟೋ ರಿಕ್ಷಾ ಚಾಲಕರು ಈ ಸೇವೆಗೆ ಒಗ್ಗಿಕೊಂಡಿದ್ದಾರೆ.

ಆದರೆ ಉಡುಪಿಯಲ್ಲಿ ರಿಕ್ಷಾ ಚಾಲಕರು ದಿಢೀರ್‌ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಆರಂಭದಲ್ಲಿ ಮಣಿಪಾಲ ನಗರದ ವಿವಿಧ ಆಟೋ ನಿಲ್ದಾಣಗಳಿಂದ ಚಾಲಕರು ಸೇರಿ ಠಾಣೆಯವರೆಗೆ ಮೆರವಣಿಗೆ ನಡೆಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಓ) ಕಚೇರಿ ಮುಂಭಾಗಕ್ಕೂ ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಮಣಿಪಾಲ–ಉಡುಪಿ ನಡುವಿನ ಸಂಚಾರಕ್ಕೆ ತೊಂದರೆಯಾಯಿತು. ಉಡುಪಿಯಲ್ಲಿ ಆಟೋ ಚಾಲಕರು ಹಾಗೂ ಆಟೋ ಮಾಲಕರ ನಡುವಿನ ಜಟಾಪಟಿ ಇತ್ತೀಚಿನ ದಿನಗಳಲ್ಲಿ ತೀವ್ರಗೊಂಡಿದ್ದು, ವಲಯ 1–2 (ಝೋನ್) ವ್ಯವಸ್ಥೆ ವಿಚಾರದಲ್ಲೂ ಗೊಂದಲ ಮುಂದುವರಿದಿದೆ.

ಯೂನಿಯನ್‌ಗಳ ನಡುವಿನ ಅಸಮಾಧಾನ, ಪರಸ್ಪರ ಆರೋಪ – ಪ್ರತ್ಯಾರೋಪಗಳಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಶಾಸಕರು, ಆರ್‌ಟಿಓ ಹಾಗೂ ವಿವಿಧ ಆಟೋ ಯೂನಿಯನ್‌ಗಳೊಂದಿಗೆ ನಡೆದ ಹಲವು ಸಭೆಗಳು ಯಾವುದೇ ಸ್ಪಷ್ಟ ಪರಿಹಾರಕ್ಕೆ ಬರದೇ ವಿಫಲವಾಗಿವೆ ಎಂಬ ಆರೋಪವೂ ಕೇಳಿಬಂದಿದೆ.

ಮಣಿಪಾಲ ಆಟೋ ಯೂನಿಯನ್ ಮುಖಂಡರು ಮಾತನಾಡಿ, ರಾಪಿಡೋ ಹಾಗೂ ನಮ್ಮ ಯಾತ್ರಿ ಸೇರಿದಂತೆ ಆಪ್ ಮೂಲಕ ಆಟೋ ಬುಕ್ಕಿಂಗ್‌ಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಇನ್ನು ಕೆಲ ಆಟೋ ಚಾಲಕರು ಮತ್ತು ಸಂಘಟನೆಗಳ ಸದಸ್ಯರು, ದೇಶಾದ್ಯಂತ ಹಾಗೂ ರಾಜ್ಯಾದ್ಯಂತ ಆಪ್ ಆಧಾರಿತ ಆಟೋ ಸೇವೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಉಡುಪಿ–ಮಣಿಪಾಲ ಮಾತ್ರ ಇದರಿಂದ ಹೊರತಾಗಿರಬೇಕೇ? ಎನ್ನುತ್ತಿದ್ದಾರೆ. ಆಪ್ ಸೇವೆಗಳಿಂದ ಪ್ರಯಾಣಿಕರಿಗೆ ಪಾರದರ್ಶಕ ದರ, ಸುಲಭ ಬುಕ್ಕಿಂಗ್ ಸೌಲಭ್ಯ ದೊರೆಯುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಪ್ರತಿಭಟನೆ ಸ್ಥಳಕ್ಕೆ ಮಧ್ಯಸ್ಥಿಕೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಿ ಆಗಮಿಸಿ ಸಮಸ್ಯೆ ಇತ್ಯರ್ಥ ನಡೆಸುವ ಯತ್ನ ನಡೆಸಿದರು, ಆದರೆ ಆಟೋ ಚಾಲಕರು ತಿರುಗೇಟು ನೀಡಿದ್ದಾರೆ.

ಮೊದಲು ನಿಮ್ಮ ಯೂನಿಯನ್ ಒಳಗಿನ ಬಣ ರಾಜಕಾರಣ ಮತ್ತು ಗಲಾಟೆ ಬಗೆಹರಿಸಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಇನ್ನು ಆಟೋ ಚಾಲಕರ ಏಕಾಏಕಿ ಬಾಡಿಗೆ ಸ್ಥಗಿತದಿಂದ ಮಣಿಪಾಲ ಹಾಗೂ ಉಡುಪಿ ನಗರದಲ್ಲಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ವಿದ್ಯಾರ್ಥಿಗಳು, ಆಸ್ಪತ್ರೆಗಳಿಗೆ ತೆರಳುವ ರೋಗಿಗಳು ಹಾಗೂ ಸಾರ್ವಜನಿಕರು ಪರ್ಯಾಯ ಸಾರಿಗೆ ಹುಡುಕುವಂತಾಗಿದೆ.

ಆಪ್ ಆಧಾರಿತ ಆಟೋ ಸೇವೆ, ವಲಯ ವ್ಯವಸ್ಥೆ ಹಾಗೂ ಯೂನಿಯನ್‌ಗಳ ನಡುವಿನ ಸಂಘರ್ಷಕ್ಕೆ ಸ್ಪಷ್ಟ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಉಡುಪಿ– ಮಣಿಪಾಲ ದಲ್ಲಿ ಆಟೋ ಸೇವೆಗಳ ಕುರಿತು ಗೊಂದಲದ ವಾತಾವರಣ ಇನ್ನೂ ಮುಂದುವರಿದಿದೆ. ಯಾವುದೇ ಪೂರ್ವ ಸೂಚನೆ ಇಲ್ಲದೆ ಆಟೋ ಚಾಲಕರು ಬಾಡಿಗೆ ಸೇವೆಯನ್ನು ಸ್ಥಗಿತಗೊಳಿಸಿ ಮಣಿಪಾಲ ಪೊಲೀಸ್ ಠಾಣೆ ಮುಂಭಾಗದಲ್ಲಿ ಜಮಾಯಿಸಿದರು.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮೊಬೈಲ್‌ ಆಧರಿತ ಆಟೋರಿಕ್ಷಾ ಸೇವೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಹಕರಿಗೆ ಪ್ರಾಮಾಣಿಕ ಸೇವೆ ಸಿಗುತ್ತದೆ ಎನ್ನುವ ಮಾತು ರಿಕ್ಷಾ ಚಾಲಕರ ಬಾಯಿಯಿಂದಲೇ ಕೇಳಿ ಬಂದಿದೆ. ಗ್ರಾಹಕರಿಗೂ ಕೂಡ ಈ ಆಧುನಿಕ ಟಚ್‌ ನ ಅಗತ್ಯತೆ ಇದೇ, ಬದಲಾಗುತ್ತಿರುವ ಪ್ರಪಂಚದ ವೇಗಕ್ಕೆ ರಿಕ್ಷಾ ಚಾಲಕರು ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಇದೆ.

Namma Yathri Rapido Protest Aginst Auto Drivers in Manipal

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories