ಉಡುಪಿ: ಇನ್‌ಸ್ಟಾಗ್ರಾಮ್‌ ವಂಚನೆ- ಆನ್‌ಲೈನ್ ಹೂಡಿಕೆ ಮಹಿಳೆಗೆ ₹4.20 ಲಕ್ಷ ದೋಖಾ

Udupi Instagram Scam: ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವುದಾಗಿ ನಂಬಿಸಿ, ಮಹಿಳೆಗೆ ಬರೋಬ್ಬರಿ ₹4,20,651 ಹಣವನ್ನು ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ 76 ಬಡಗುಬೆಟ್ಟು ನಿವಾಸಿಯಾಗಿರುವ ನಾಝಿಯಾ ( 39 ವರ್ಷ) ಎಂಬವರೇ ವಂಚನೆಗೆ ಒಳಗಾದವರು. ನಾಝಿಯಾ ಅವರು ಆನ್‌ಲೈನ್‌ನಲ್ಲಿ ಕೆಲಸ ಹುಡುಕುತ್ತಿದ್ದಾಗ ಇನ್‌ಸ್ಟಾಗ್ರಾಮ್‌ನಲ್ಲಿ ‘Afreen Halaal Investment’ ಎಂಬ ಪ್ರೊಫೈಲ್‌ನ ಜಾಹೀರಾತು ವೀಕ್ಷಿಸಿದ್ದಾರೆ.

ಈ ಜಾಹೀರಾತಿನಲ್ಲಿ ಹಣ ಹೂಡಿಕೆ ಮಾಡಿ ದೊಡ್ಡ ಲಾಭ ಗಳಿಸಬಹುದು ಎಂದು ಹೇಳಲಾಗಿತ್ತು. ಇದನ್ನು ನಂಬಿದ ನಾಝಿಯಾ ಹಣ ಹೂಡಿಕೆ ಮಾಡುವುದಕ್ಕೆ ಆಸಕ್ತಿ ತೋರಿಸಿದ್ದಾರೆ. ನಂತರ ಆರೋಪಿಯು ತನ್ನ 9477953918 ಮೊಬೈಲ್‌ ಸಂಖ್ಯೆಯಿಂದ ವಾಟ್ಸಾಪ್‌ ಸಂದೇಶ ಕಳುಹಿಸಿದ್ದಾನೆ.

Also Read: ಅಮಾಸೆಬೈಲು: ಗಾಂಧಿ ಜಯಂತಿಯಂದು ಅಕ್ರಮ ಮದ್ಯ ಮಾರಾಟ, ಪ್ರಕರಣ ದಾಖಲು

ಆರೋಪಿ ನೀಡಿದ QR ಕೋಡ್‌ಗೆ ಮೊದಲ ಬಾರಿಗೆ ₹2,000 ಹಣವನ್ನು ವರ್ಗಾಯಿಸಿದ್ದಾರೆ. ಲಾಭದ ಹಣ ಕೇಳಿದಾಗ, ಆರೋಪಿಯು ಇದು ಮೊದಲ ಹೂಡಿಕೆ, ಇದಕ್ಕೆ ಟ್ಯಾಕ್ಸ್ ಚಾರ್ಜ್ ಬೀಳುತ್ತದೆ, ಹೆಚ್ಚು ಹೂಡಿಕೆ ಮಾಡಿದರೆ ಹೆಚ್ಚು ಲಾಭ ಎಂದು ಹೇಳಿ ನಂಬಿಸಿದ್ದಾನೆ.

ಆರೋಪಿಯ ಮಾತನ್ನು ನಂಬಿದ ನಾಝಿಯಾ ಮತ್ತೊಮ್ಮೆ ₹8,055 ಹಣ ವರ್ಗಾವಣೆ ಮಾಡಿದ್ದಾರೆ. ಎರಡನೇ ಬಾರಿಯೂ ಸುಳ್ಳು ಕಥೆ ಹೇಳಿದ್ದಾನೆ. ವಾಲೆಟ್ ಮತ್ತು ಇತರೆ ಚಾರ್ಜ್‌ಗಳಿಗೆ ಹಣ ಕಟ್ಟಬೇಕು, ಆನಂತರ ಲಾಭ ಸಿಗುತ್ತದೆ ಎಂದು ಬ್ರೈನ್‌ ವಾಶ್ ಮಾಡಿ ನಂಬಿಸಿದ್ದಾನೆ.

Also Read: ಉಡುಪಿ: ಅಕ್ರಮ ಮರಳು ಸಾಗಣೆ; ಟೆಂಪೋ ವಶ

ಹೀಗೆ ಹಂತ ಹಂತವಾಗಿ ನಾಝಿಯಾ ಸುಮಾರು ₹4,20,651 ಹಣವನ್ನು ಆರೋಪಿಗೆ ವರ್ಗಾಯಿಸಿದ್ದಾರೆ. ಆದರೆ ಕೊನೆಗೆ ಲಾಭ ಬಿಡಿ, ಹಣವೂ ಸಿಗದೇ ಇದ್ದಾಗ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ.

ಈ ಕುರಿತು ನಾಝಿಯಾ ಅವರು ಉಡುಪಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಆನ್‌ಲೈನ್‌ ವಂಚನೆ : ಸಾರ್ವಜನಿಕರಿಗೆ ಎಚ್ಚರಿಕೆ

ಸಾರ್ವಜನಿಕರು ಆನ್‌ಲೈನ್‌ನಲ್ಲಿ, ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ (Instagram, WhatsApp) ಬರುವ ಸುಲಭ ಮತ್ತು ದೊಡ್ಡ ಲಾಭದ ಹೂಡಿಕೆ ಜಾಹೀರಾತುಗಳನ್ನು ನಂಬಬಾರದು.

ಪರಿಚಯವಿಲ್ಲದ ವ್ಯಕ್ತಿಗಳು ನೀಡುವ QR ಕೋಡ್‌ಗಳು ಅಥವಾ ಖಾತೆಗಳಿಗೆ ಹಣ ವರ್ಗಾಯಿಸುವ ಮುನ್ನ ಎಚ್ಚರಿಕೆ ವಹಿಸಿ. ಯಾವುದೇ ರೀತಿಯ ‘ತೆರಿಗೆ’, ‘ವಾಲೆಟ್ ಶುಲ್ಕ’ ಅಥವಾ ‘ಪೂರ್ವಪಾವತಿ ಶುಲ್ಕ’ ಎಂದು ಹಣ ಕೇಳಿದರೆ ಅದು ವಂಚನೆಯಾಗಿರುವ ಸಾಧ್ಯತೆ ಹೆಚ್ಚು.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories