ಮಹಾನಗರಕ್ಕೆ ಹಾಲಾಡಿ ಮೇಳ: ಜೂನ್ 29ರ ‘ಪಂಜರಪಕ್ಷಿ’ ಯಕ್ಷಗಾನದ ವಿಶೇಷತೆ ಏನು ಗೊತ್ತಾ?
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಲಾಡಿ ಶ್ರೀ ಸ್ವಾಮಿಲಿಂಗಮ್ಮ ದೇವಸ್ಥಾನದ ಜೀರ್ಣೋದ್ದಾರದ ಸಹಾಯಾರ್ಥವಾಗಿ ಈ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ಹಾಲಾಡಿ ಮೇಳದ ಪಂಜರಪಕ್ಷಿ ಪ್ರಸಂಗ ಈ ಬಾರಿ ಡೇರೆ ಮೇಳಗಳನ್ನೂ ಮೀರಿಸುವ ನಿಟ್ಟಿನಲ್ಲಿ ದಾಖಲೆಯ ಪ್ರದರ್ಶನ ಕಂಡಿದೆ.
ಬೆಂಗಳೂರು : ಯಕ್ಷಗಾನ ಲೋಕದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ, ಈ ವರ್ಷದ ಸೂಪರ್ ಹಿಟ್ ಪ್ರಸಂಗ ಪಂಜರಪಕ್ಷಿ ಇದೀಗ ಮಹಾನಗರಿ ಬೆಂಗಳೂರಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ. ಇದೇ ಜೂನ್ 29 ರಂದು ಸೋಮವಾರ ರಾತ್ರಿ 10 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಾಲಾಡಿ ಮೇಳದ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಲಾಡಿ ಶ್ರೀ ಸ್ವಾಮಿಲಿಂಗಮ್ಮ ದೇವಸ್ಥಾನದ ಜೀರ್ಣೋದ್ದಾರದ ಸಹಾಯಾರ್ಥವಾಗಿ ಈ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ಹಾಲಾಡಿ ಮೇಳದ ಪಂಜರಪಕ್ಷಿ ಪ್ರಸಂಗ ಈ ಬಾರಿ ಡೇರೆ ಮೇಳಗಳನ್ನೂ ಮೀರಿಸುವ ನಿಟ್ಟಿನಲ್ಲಿ ದಾಖಲೆಯ ಪ್ರದರ್ಶನ ಕಂಡಿದೆ. ಇದೀಗ ಬೆಂಗಳೂರಿನ ಯಕ್ಷಗಾನ ಪ್ರೇಕ್ಷಕರಿಗಾಗಿಯೇ ಪಂಜರಪಕ್ಷಿ ಪ್ರದರ್ಶನ ಆಯೋಜಿಸಲಾಗಿದೆ.
ಖ್ಯಾತ ಪ್ರಸಂಗಕರ್ತ ಪವನ್ ಕಿರಣ್‌ಕೆರೆ ಅವರ ಪಂಜರಪಕ್ಷಿ ಸೂಪರ್ ಹಿಟ್ ಪ್ರಸಂಗಗಳ ಸಾಲಿಗೆ ಸೇರಿದೆ. ಯಕ್ಷಗಾನ ಪಂಡಿತರಿಂದಲೂ ಪ್ರಸಂಗ ಪ್ರಶಂಸೆಗೆ ಒಳಗಾಗಿದೆ. ಬಯಲಾಟದ ಮೇಳವೊಂದರ ಯಕ್ಷಗಾನ ನೋಡುವುದಕ್ಕೆ ಪ್ರತೀ ಪ್ರದರ್ಶನದಲ್ಲಿಯೂ 3000ಕ್ಕೂ ಮಿಕ್ಕಿದ ಪ್ರಕ್ಷಕರನ್ನು ಕಂಡಿದ್ದು ಇದೇ ಮೊದಲು.
ಶ್ರೀಧರ ಹಾರ್ಸಿಕಟ್ಟೆ, ಗಣೇಶ ಆಚಾರ್ಯ ಬಿಲ್ಲಾಡಿ ಅವರ ಭಾಗವತಿಕೆಯ ಜೊತೆಗೆ ಅಕ್ಷಯ್ ಆಚಾರ್ಯ ಬಿದ್ಕಲ್‌ಕಟ್ಟೆ, ಸುಜನ್ ಹಾಲಾಡಿ, ಕಣ್ಣಿ ಗಣಪತಿ ಭಟ್ ಅವರ ಚಂಡೆ, ಮದ್ದಲೆಯ ಮೋಡಿಗೆ ಮನಸೋಲದಿರಲು ಸಾಧ್ಯವೇ ಇಲ್ಲ.
ಇದನ್ನೂ ಓದಿ : ಸ್ಮಾರ್ಟ್‌ಫೋನ್‌ಗೆ ಕೂಡ ಆಯುಷ್ಯ ಇದೆ! ಅದರ ನಂತರ ಬಳಸಿದರೆ ಅಪಾಯ ಗ್ಯಾರಂಟಿ
ತೊಂಬಟ್ಟು ವಿಶ್ವನಾಥ್ ಆಚಾರ್ಯ ಹಾಗೂ ಸುಧೀರ್ ಸೇರ್ವೆಗಾರ್ ಉಪ್ಪೂರು ಅವರ ಜೋಡಿ ಮೋಡಿ ಮಾಡಿದೆ. ಸ್ತ್ರೀ ವೇಷದಲ್ಲಿ ಸುಕುಮಾರ ನೀರ್ಜೆಡ್ಡು, ಉಮೇಶ್ ಶಂಕರನಾರಾಯಣ, ಶಂಕರ ಉಳ್ಳೂರು ಮತ್ತು ಬಸವರಾಜ್ ಚೌಕುಳ ಮಕ್ಕಿ ಹಾಸ್ಯದ ರಸದೌತಣವನ್ನೇ ಉಣಬಡಿಸಲಿದ್ದಾರೆ.
ವಿಶ್ವನಾಥ್ ಆಚಾರ್ಯ ತೊಂಬಟ್ಟು, ಅಣ್ಣಪ್ಪ ಬೀಜಮಕ್ಕಿ, ರಾಘವ ಆಚಾರ್ಯ ಅಮಾಸೆಬೈಲು, ಶ್ಯಾಮ ಶೃಂಗೇರಿ, ಮಂಜುನಾಥ ಚೌಕುಳಮಕ್ಕಿ, ಅರುಣ ಬಡಾಳ, ಸುಧಾಕರ ಕರಿಮೆ ಅವರಂತಹ ಖ್ಯಾತ ಕಲಾವಿದರನ್ನು ಒಳಗೊಂಡಿದೆ.
ದೇವಸ್ಥಾನದ ಅಭಿವೃದ್ದಿ ಕಾರ್ಯಗಳಿಗಾಗಿ ಆಯೋಜಿಸಲಾಗಿರುವ ಈ ಯಕ್ಷಗಾನ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ, ಸಹಕಾರ ನೀಡುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ರಮೇಶ್ ಕಾಂಚನ್ (9901001457), ಶಿವರಾಮ ಕಾಂಚನ್ (9448707855) ಅವರನ್ನು ಸಂಪರ್ಕಿಸಬಹುದಾಗಿದೆ.
haladi mela panjara pakshi yakshagana june 29 Bengaluru Ravindra kalashektra Kannada News



