ಜಾತಿ ಗಣತಿ ಮುಂದೂಡಿಕೆ, UHID ಐಡಿ ಸಿಗದೆ ಶಿಕ್ಷಕರ ಪರದಾಟ

ಬೆಂಗಳೂರು : ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸರ್ವೆ (Karnataka caste Survey) ಕಾರ್ಯ ಮುಂದೂಡಿಕೆ ಆಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ನಾಳೆ ಈ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಸೆಪ್ಟೆಂಬರ್ 22ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ (Karnataka caste Survey) ಕಾರ್ಯ ನಡೆಯುತ್ತಿದೆ. ಈಗಾಗಲೇ ಶೇಕಡಾ 60ಕ್ಕೂ ಅಧಿಕ ಗಣತಿ ಕಾರ್ಯ ನಡೆದಿದ್ದರೂ ಕೂಡ, ಹಲವರು ಸರ್ವೆ ಕಾರ್ಯಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರಕಾರ ತಮ್ಮ ವೈಯಕ್ತಿಕ ಮಾಹಿತಿಯನ್ನು ಯಾಕೆ ಕೇಳುತ್ತಿದೆ ? ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸರ್ವೆಯಾ ? ಅಥವಾ ಆಸ್ತಿ ಸರ್ವೆಯಾ ಎಂದು ನಾಗರೀಕರು ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಹಲವರು ತಮ್ಮ ದಾಖಲೆಗಳನ್ನು ನೀಡಲು ಹಿಂದೇಟು ಹಾಕಿದ್ದಾರೆ.
ಕರ್ನಾಟಕ ಸರಕಾರ ನಿಗದಿ ಪಡಿಸಿರುವಂತೆ ಸೆಪ್ಟೆಂಬರ್ 22ರಿಂದ ಆರಂಭಗೊಂಡಿರುವ ಸರ್ವೆ ಕಾರ್ಯವು ಅಕ್ಟೋಬರ್ 7ಕ್ಕೆ ಮುಕ್ತಾಯವಾಗಲಿದೆ. ಆದರೆ ಶೇಕಡಾ 30ಕ್ಕೂ ಅಧಿಕ ಮನೆಗಳ ಸರ್ವೆ ಕಾರ್ಯ ಬಾಕಿ ಉಳಿದಿದೆ. ಹೀಗಾಗಿ ಸರ್ವೆ ಕಾರ್ಯ ಮುಂದೂಡಿಕೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸರ್ವೆ ಕಾರ್ಯ ಮುಂದೂಡಿಕೆ ನಾಳೆ ನಿರ್ಧಾರ : ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ವೆ ಕಾರ್ಯ ಮುಂದೂಡಿಕೆಯ ಕುರಿತು ಪ್ರತಿಕ್ರೀಯೆ ನೀಡಿದ್ದಾರೆ. ಕರ್ನಾಟಕ ರಾಜ್ಯದಾದ್ಯಂತ ಒಂದು ಕೋಟಿಗೂ ಅಧಿಕ ಮನೆಗಳ ಸರ್ವೆ ಕಾರ್ಯ ನಡೆದಿದೆ. ಉಳಿದ ಮನೆಗಳ ಕಾರ್ಯ ನಾಳೆ ಮುಗಿಯಲಿದೆ ಎಂಬ ವಿಶ್ವಾಸವಿದೆ. ಒಂದೊಮ್ಮೆ ಬಾಕಿ ಉಳಿದ್ರೆ ನಾಳೆ ಮುಂದೂಂಡಿಕೆಯ ಕುರಿತು ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ದಸರಾ ರೆಜೆ ವಿಸ್ತರಣೆ, ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್
ಅಧಿಕಾರಿಗಳ ಎಡವಟ್ಟು : ಸರ್ವೆಗೆ ಮನೆಗಳು ಸಿಗದೆ ಶಿಕ್ಷಕರ ಪರದಾಟ
ಕರ್ನಾಟಕದಲ್ಲಿ ಸರ್ವೆ ಕಾರ್ಯವನ್ನು ನಡೆಸಲು ಶಿಕ್ಷಕರನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಆರಂಭದಲ್ಲಿ ಪ್ರತಿಯೊಬ್ಬ ಶಿಕ್ಷಕರಿಗೂ ಯಾವ ಮನೆಗಳನ್ನು ಸರ್ವೆ ಮಾಡಬೇಕೋ, ಆ ಮನೆಗಳ ಯುಎಚ್‌ಐಡಿಯನ್ನು ನೀಡಲಾಗಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಚುರುಕಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೊಸ ಆದೇಶ ಹೊರಡಿಸಿದ್ದರು.
ಯಾವ ಶಿಕ್ಷಕರು, ಯಾವ ಪ್ರದೇಶದಲ್ಲಿ ಬೇಕಾದ್ರೂ ಸರ್ವೆ ನಡೆಸಬಹುದು ಅಂತಾ ಜಿಲ್ಲಾಧಿಕಾರಿಗಳು ಸೂಚನೆಯನ್ನು ನೀಡಿದ್ರು. ಇದರಿಂದ ಸರ್ವೆ ಕಾರ್ಯ ಚುರುಕಾಯ್ತು. ಆದರೆ ಶಿಕ್ಷಕರು ತಮಗೆ ನಿಯುಕ್ತಿ ಮಾಡಿದ್ದ ಮನೆಗಳನ್ನು ಬಿಟ್ಟು ಇತರ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಸಿದ್ದಾರೆ. ಆದರೆ ಇದೀಗ ಶಿಕ್ಷಕರು ಯಾವ ಮನೆ ಸರ್ವೆ ಆಗಿದೆ ಅನ್ನೋದನ್ನು ತಿಳಿಯೋದಕ್ಕೆ ಸಾಧ್ಯವಾಗದೇ ನಿತ್ಯವೂ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ : ಜಾತಿಗಣತಿ – ಅಕ್ಟೋಬರ್ 8 ರಿಂದ ಬೆಳಗ್ಗೆ 8 ಗಂಟೆಗೆ ಶಾಲಾರಂಭ
ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಶಿಕ್ಷಕರು ಬಲಿ
ಒಂದು ದಿನವೂ ಬಿಡುವು ಇಲ್ಲದೇ ಶಿಕ್ಷಕರು ಕಳೆದ ಹತ್ತಕ್ಕೂ ಅಧಿಕ ದಿನಗಳಿಂದ ಸರ್ವೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬೆಳಗಾದ್ರೆ ಸಾಕು ಜಿಲ್ಲಾಡಳಿತಗಳು ಒತ್ತಡ, ಬೆದರಿಕೆ ಒಡ್ಡುವ ಮೂಲಕ ಶಿಕ್ಷಕರಿಂದ ಸರ್ವೆ ಕಾರ್ಯವನ್ನು ಮಾಡಿಸಿದೆ. ಬೆಳಗ್ಗೆ 6 ಗಂಟೆಯಿಂದಲೇ ಲಾಗಿನ್ ಆಗಬೇಕು ಅನ್ನೋ ಜಿಲ್ಲಾಡಳಿತ ಪರ್ಮಾನಿಗೆ ಶಿಕ್ಷಕರು ಸುಸ್ತಾಗಿದ್ದಾರೆ.
ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ತಹಶೀಲ್ದಾರ್ ಸೇರಿದಂತೆ ಸರ್ವೆ ಕಾರ್ಯಕ್ಕೆ ನಿಯೋಜನೆ ಮಾಡುವ ಅಧಿಕಾರಿಗಳು ದಿನಕ್ಕೊಂದು ರೂಲ್ಸ್ ಜಾರಿ ಮಾಡ್ತಾ ಇರೋದ್ರಿಂದಾಗಿ ಶಿಕ್ಷಕರು ನೀರು ಕುಡಿಯೋದಕ್ಕೂ ಸಮಯ ಸಿಗದಂತಹ ಸ್ಥಿತಿಯಲ್ಲಿದ್ದಾರೆ. ಶಿಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲು ಹೇಳಿಕೊಳ್ಳುತ್ತಿದ್ದರೂ ಕೂಡ ಜಿಲ್ಲಾಧಿಕಾರಿಗಳು ಕಣ್ಣಿದ್ದು ಕುರುಡರಂತಾಗಿದ್ದಾರೆ.
ಕರ್ನಾಟಕ ಸರಕಾರ ಈ ಬಾರಿ ಸಾಮಾಜಿಕ ಮತ್ತು ಶೈಕ್ಷಣಿಕ ಸರ್ವೆ ಕಾರ್ಯಕ್ಕಾಗಿ ಶಿಕ್ಷಕರನ್ನು ಹೀನಾಯವಾಗಿ ನಡೆಸಿಕೊಂಡಿದೆ. ಸುಡುವ ಬಿಸಿಲಿನಲ್ಲಿಯೇ ಸರ್ವೆ ಕಾರ್ಯ ನಡೆಸಿರುವ ಶಿಕ್ಷಕರು ಸುಸ್ತಾಗಿದ್ದಾರೆ. ಈ ನಡುವಲ್ಲೇ ಅಕ್ಟೋಬರ್ 8ರಿಂದ ಶಾಲೆಗಳು ಪುನರಾರಂಭ ಆಗ್ತಿದ್ದು, ಶಿಕ್ಷಕರು ಶಾಲೆಗೆ ತೆರಳುವ ಅನಿವಾರ್ಯತೆಗೆ ಸಿಲುಕಿದ್ದಾರೆ.



