ರೈಲ್ವೆಯಲ್ಲಿದೆ ಅತಿ ದೊಡ್ಡ ಅವಕಾಶ : 11,813 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

RRB Recruitment 2025: ರೈಲ್ವೆ ನೇಮಕಾತಿ ಮಂಡಳಿಯು ಇತ್ತೀಚೆಗೆ ಎನ್‌ಟಿಪಿಸಿ ಮತ್ತು ಜೂನಿಯರ್‌ ಎಂಜಿನಿಯರ್‌ ಸೇರಿದಂತೆ 4 ಪ್ರಮುಖ ಹುದ್ದೆಗಳಿಗೆ ನೇಮಕಾತಿಯನ್ನು ಘೋಷಿಸಿದೆ.

ಈ ನೇಮಕಾತಿ ಅಡಿಯಲ್ಲಿ ಆರ್‌ಆರ್‌ಬಿ ಒಟ್ಟು 11,813 ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. 2024ರ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಸಹ ಈ ಹೊಸ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಿಬಹುದಾಗಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದರೆ ಯಾವ ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಹಾಗೂ ಮಾನದಂಡಗಳೇನು ಎಂದು ತಿಳಿಯೋಣ.

ಸೆಕ್ಷನ್‌ ಕಂಟ್ರೋಲರ್ ಹುದ್ದೆ

ಮೊದಲನೇಯದಾಗಿ ಆರ್‌ಆರ್‌ಬಿ 368 ಸೆಕ್ಷನ್‌ ಕಂಟ್ರೋಲರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಪ್ರಕ್ರಿಯೆಯು ಸೆಪ್ಟೆಂಬರ್‌ 15 ರಿಂದ ಪ್ರಾರಂಭವಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್‌ 14 ಆಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪದವೀಧರರಾಗಿರಬೇಕು. ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷಗಳು ಹಾಗೂ ಗರಿಷ್ಠ ವಯಸ್ಸು 33 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯಸ್ಸಿನಲ್ಲಿ ಸಡಿಲಿಕೆ ನೀಡಲಾಗುವುದು.

ಪದವಿಪೂರ್ವ ಮಟ್ಟದ ನೇಮಕಾತಿ (UG Level)

ರೈಲ್ವೆ ನೇಮಕಾತಿ ಮಂಡಳಿ (RRB) 3,058 ತಾಂತ್ರಿಕೇತರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪದವಿಪೂರ್ವ ಹಂತದ ಹುದ್ದೆಗಳಲ್ಲಿ ಜೂನಿಯರ್ ಕ್ಲರ್ಕ್, ಅಕೌಂಟ್ಸ್ ಕ್ಲರ್ಕ್, ಟ್ರೈನ್ಸ್ ಕ್ಲರ್ಕ್ ಮತ್ತು ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ ಹುದ್ದೆಗಳು ಸೇರಿವೆ.

ಯುಜಿ ಮಟ್ಟದ ನೇಮಕಾತಿಗೆ ಅರ್ಜಿ ಸಲ್ಲಿಕೆಯು ಅಕ್ಟೋಬರ್ 28, 2025 ರಂದು ಪ್ರಾರಂಭವಾಗಲಿದ್ದು, ನವೆಂಬರ್ 27, 2025 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪಿಯುಸಿ ಅಥವಾ 12ನೇ ತರಗತಿ ಉತ್ತೀರ್ಣರಾಗಿರಬೇಕು.

ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳು ಹಾಗೂ ಗರಿಷ್ಠ ವಯಸ್ಸು 33 ಆಗಿದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಇದನ್ನೂ ಓದಿ: ಅಗ್ನಿವೀರರಾಗಿ ಸೇನೆಯಲ್ಲಿ ಸೇವೆ ಸಲ್ಲಿಸಲು ಸುವರ್ಣಾವಕಾಶ: 46,000 ಹುದ್ದೆಗೆ ಅರ್ಜಿ ಸಲ್ಲಿಸಿ

ತಾಂತ್ರಿಕೇತರ ಪದವಿ ಹುದ್ದೆಗಳು

ಆರ್‌ಆರ್‌ಬಿ 5,817 ಪದವೀಧರ ಮಟ್ಟದ ಹುದ್ದೆಗಳಿಗೆ ನೇಮಕಾತಿ ಘೋಷಿಸಿದೆ. ಇದು ತಾಂತ್ರಿಕೇತರ ನೇಮಕಾತಿಯಾಗಿದ್ದು ಇದರಲ್ಲಿ ಸ್ಟೇಷನ್ ಮಾಸ್ಟರ್‌, ಗೂಡ್ಸ್‌ ರೈಲು ವ್ಯವಸ್ಥಾಪಕ, ಸಂಚಾರ ಸಹಾಯಕ, ಮುಖ್ಯ ವಾಣಿಜ್ಯ ಕಮ್‌ ಟಿಕೆಟ್‌ ಮೇಲ್ವಿಚಾರಕ, ಜೂನಿಯರ್‌ ಖಾತೆ ಸಹಾಯಕ ಮತ್ತು ಹಿರಿಯ ಗುಮಾಸ್ತ ಹುದ್ದೆಗಳು ಸೇರಿವೆ.

ಈ ನೇಮಕಾತಿ ಅರ್ಜಿಗಳನ್ನು ಅಕ್ಟೋಬರ್‌ 21 ರಿಂದ ಸ್ವೀಕರಿಸಲಾಗುತ್ತದೆ ಹಾಗೂ ಕೊನೆಯ ದಿನಾಂಕ ನವೆಂಬರ್‌ 20, 2025 ಆಗಿದೆ. ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು.

ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 36 ವರ್ಷಗಳ ಒಳಗೆ ಇರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯಸ್ಸಿನಲ್ಲಿ ಸಡಿಲಿಕೆಯಿರುತ್ತದೆ.

ಜೂನಿಯರ್‌ ಎಂಜಿನಿಯರ್‌ ಹುದ್ದೆ

ಈ ಹುದ್ದೆಗೆ ಅರ್ಜಿ ಪ್ರಕ್ರಿಯೆಯು ಅಕ್ಟೋಬರ್‌ 31 ರಿಂದ ಪ್ರಾರಂಭವಾಗಲಿದೆ. ಇದರಲ್ಲಿ ಒಟ್ಟ 2570 ಜೂನಿಯರ್ ಎಂಜಿನಿಯರ್‌ಗಳ ನೇಮಕಾತಿ ನಡೆಯಲಿದೆ. ಇದಕ್ಕೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಿವಿಲ್‌, ಮೆಕ್ಯಾನಿಕಲ್, ಎಲೆಕ್ನಿಕಲ್, ಎಲೆಕ್ಟ್ರಾನಿಕ್ಸ್ ಅಥವಾ ದೂರಸಂಪರ್ಕದಲ್ಲಿ ಪದವಿ ಅಥವಾ ಡಿಪ್ಲೊಮಾ ಹೊಂದಿರಬೇಕು.

ಜೆಇ(ಐಟಿ), ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ವಿಶೇಷ ಅರ್ಹತೆಗಳು ಅಗತ್ಯವಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 33 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಇದನ್ನೂ ಓದಿ: 12ನೇ ತರಗತಿ ಪಾಸಾದ ಪುರುಷರಿಗೆ ಗುಡ್ ನ್ಯೂಸ್! 737 ಕಾನ್ಸ್‌ಟೇಬಲ್ ಡ್ರೈವ‌ರ್ ಹುದ್ದೆಗೆ ಅರ್ಜಿ ಸಲ್ಲಿಸಿ

(RRB Recruitment 2025 invites application for 11813 different posts apply immediately)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories