ದೀಪಾವಳಿ 2025 ಯಾವಾಗ? ದಿನಾಂಕ, ತಿಥಿ, ಪೂಜಾ ಸಮಯ ತಿಳಿಯಿರಿ
Deepawali 2025: ಬೆಳಕಿನ ಹಬ್ಬ ದೀಪಾವಳಿ. ಈ ಹಬ್ಬ ಇಡೀ ಭಾರತದಲ್ಲಿ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸುವ ಹಬ್ಬವಾಗಿದೆ. ದೀಪಾವಳಿ ಹಬ್ಬ ಕೇವಲ ಪಟಾಕಿ, ಹಣತೆಗಳನ್ನು ಬೆಳಗಿಸುವ ಹಬ್ಬವಲ್ಲ,.
ಇದು ಜೀವನದಲ್ಲಿ ತುಂಬಿರುವ ಕತ್ತಲೆಯನ್ನು ಹೋಗಲಾಡಿಸಿ, ಬೆಳಕಿನ ಆಶಾಕಿರಣಗಳನ್ನು ಹೊತ್ತು ತರುವ ಹಬ್ಬವಾಗಿದೆ. ಇದು ಕೆಟ್ಟದ್ದರ ಮೇಲೆ ಒಳ್ಳೆಯದ್ದನ್ನು, ಸುಳ್ಳಿನ ಮೇಲೆ ಸತ್ಯದ ವಿಜಯವನ್ನು ಸಂಕೇತಿಸವು ಹಬ್ಬವೂ ಹೌದು.
ಈ ಹಬ್ಬದಲ್ಲಿ ಜನರು ತಮ್ಮ ಮನೆಯನ್ನು ಸ್ವಚ್ಛಗೊಳಿಸಿ, ರಂಗೋಲಿ, ಹೂವುಗಳಿಂದ ಅಲಂಕರಿಸುತ್ತಾರೆ. ದೀಪ ಬೆಳಗಿಸಿ ಸಂಭ್ರಮಿಸುತ್ತಾರೆ. ಕೆಲವು ಭಾಗಗಳಲ್ಲಿ ದೀಪಾವಳಿ ಮೂರು ದಿನದ ಹಬ್ಬವಾದರೆ, ಇನ್ನು ಕೆಲವು ಕಡೆ ದೀಪಾವಳಿಯ ಹಿಂದಿನ ದಿನ ಧನ್ತೇರಸ್ ಹಾಗೂ ಭಾಯಿದೋಜ್ ಸೇರಿ ಒಟ್ಟು 5 ದಿನಗಳ ಹಬ್ಬವಾಗಿದೆ.
ಪ್ರತಿ ದಿನಕ್ಕೂ ಅದರದೇ ಆದ ವಿಶೇಷತೆಯಿದೆ. ದೀಪಾವಳಿಯ ಅಮಾವಾಸ್ಯೆಯಂದು ಆಚರಿಸುವ ಲಕ್ಷ್ಮಿ ಪೂಜೆ ಅತ್ಯಂತ ಪ್ರಾಮುಖ್ಯತೆ ಹೊಂದಿದೆ. ಆ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಹಣದ ಕೊರತೆಯಿರುವುದಿಲ್ಲ ಎಂಬುದು ನಂಬಿಕೆ.
ಈ ವರ್ಷ ಧನ ತ್ರಯೋದಶಿ (ಧನ್ತೇರಸ್), ನರಕ ಚತುರ್ದಶಿ, ಅಮಾವಾಸ್ಯೆ ಲಕ್ಷ್ಮಿ ಪೂಜೆ, ಬಲಿ ಪಾಡ್ಯ ಅಥವಾ ಗೋ ಪಾಡ್ಯ ದಿನಾಂಕ ಮತ್ತು ಪೂಜಾ ಶುಭ ಸಮಯದ ಬಗ್ಗೆ ತಿಳಿಯೋಣ.
ದೀಪಾವಳಿ 2025 ಕ್ಯಾಲೆಂಡರ್
ಧನ ತ್ರಯೋದಶಿ (ಧನ್ತೇರಸ್)
ದೀಪಾವಳಿ ಆರಂಭವನ್ನು ಸೂಚಿಸುವ ದಿನ. ಈ ದಿನ ಲಕ್ಷ್ಮಿ ದೇವಿ ಮತ್ತು ಕುಬೇರನನ್ನು ಪೂಜಿಸಲಾಗುತ್ತದೆ. ಈ ದಿನದಂದು ಜನರು ಚಿನ್ನ ಮತ್ತು ಆಭರಣಗಳನ್ನು ಖರೀದಿಸುತ್ತಾರೆ.
ಈ ವರ್ಷ ಧನ ತ್ರಯೋದಶಿಯನ್ನು ಅಕ್ಟೋಬರ್ 18 ರಂದು ಆಚರಿಸಲಾಗುತ್ತಿದೆ.
ತ್ರಯೋದಶಿ ತಿಥಿ ಆರಂಭ: ಅಕ್ಟೋಬರ್ 18 ರಂದು ಮಧ್ಯಾಹ್ನ 12:18 ಕ್ಕೆ
ತ್ರಯೋದಶಿ ತಿಥಿ ಅಂತ್ಯ: ಅಕ್ಟೋಬರ್ 19 ಮಧ್ಯಾಹ್ನ 1:51 ಕ್ಕೆ
ಧನ ತ್ರಯೋದಶಿ ಪೂಜೆ ಮುಹೂರ್ತ: ಸಂಜೆ 7:16 ರಿಂದ 8:20 ರವರೆಗೆ
ನರಕ ಚತುರ್ದಶಿ
ನರಕಾಸುರನ ಮೇಲೆ ಶ್ರೀಕೃಷ್ಣನು ವಿಜಯ ಸಾಧಿಸಿ ಸಂಕೇತವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಅಭ್ಯಂಜನ ಸ್ನಾನ ವಿಶೇಷವಾಗಿದೆ. ಈ ವರ್ಷ ನರಕ ಚತುರ್ದಶಿಯನ್ನು ಅಕ್ಟೋಬರ್ 20 ರಂದು ಆಚರಿಸಲಾಗುತ್ತದೆ.
ಚತುರ್ದಶಿ ತಿಥಿ ಆರಂಭ: ಅಕ್ಟೋಬರ್ 19 ಮಧ್ಯಾಹ್ನ 1:51 ಕ್ಕೆ
ಚತುರ್ದಶಿ ತಿಥಿ ಅಂತ್ಯ : ಅಕ್ಟೋಬರ್ 20 ಮಧ್ಯಾಹ್ನ 3:44
ಅಮಾವಾಸ್ಯೆ ಲಕ್ಷ್ಮಿ ಪೂಜೆ
ದೀಪಾವಳಿಯಲ್ಲಿ ಅಮಾವಾಸ್ಯೆ ಲಕ್ಷ್ಮಿ ಪೂಜೆಗೆ ಬಹಳಷ್ಟು ಮಹತ್ವ ನೀಡಲಾಗಿದೆ. ಈ ವರ್ಷ ಅಮಾವಾಸ್ಯೆ ಲಕ್ಷ್ಮಿ ಪೂಜೆಯನ್ನು ಅಕ್ಟೋಬರ್ 20 ರಂದೇ ಆಚರಿಸಲಾಗುತ್ತಿದೆ. ಏಕೆಂದರೆ ಅಮಾವಾಸ್ಯೆ ತಿಥಿಯು ಅಕ್ಟೋಬರ್ 21 ರ ಸೂರ್ಯಾಸ್ತದ ಮೊದಲೇ ಕೊನೆಗೊಳ್ಳುತ್ತದೆ.
ಲಕ್ಷ್ಮಿ ಪೂಜೆಯನ್ನು ಪ್ರದೋಷ ಕಾಲದಲ್ಲಿ ಮಾಡುವುದರಿಂದ ಅಕ್ಟೋಬರ್ 20 ರಂದೇ ಲಕ್ಷ್ಮಿ ಪೂಜೆ ನಡೆಸಲಾಗುತ್ತಿದೆ. ಆದರೆ ಅಮಾವಾಸ್ಯೆಯ ದಾನವನ್ನ ಅಕ್ಟೋಬರ್ 21 ರಂದು ಮಾಡಲಾಗುತ್ತದೆ.
ಅಮಾವಾಸ್ಯೆ ತಿಥಿ ಆರಂಭ: ಅಕ್ಟೋಬರ್ 20 ಮಧ್ಯಾಹ್ನ 3:44
ಅಮಾವಾಸ್ಯೆ ತಿಥಿ ಅಂತ್ಯ: ಅಕ್ಟೋಬರ್ 21 ಸಂಜೆ 5:54
ಲಕ್ಷ್ಮಿ ಪೂಜಾ ಮುಹೂರ್ತ: ಅಕ್ಟೋಬರ್ 20 ಸಂಜೆ 7:08 ರಿಂದ 8:18 ರ ವರೆಗೆ
ಬಲಿಪಾಡ್ಯ (ಗೋ ಪಾಡ್ಯ)
ಈ ದಿನವನ್ನು ಶ್ರೀಕೃಷ್ಣನು ಬಲಿ ಚಕ್ರವರ್ತಿಯನ್ನು ಪಾತಾಳ ಲೋಕಕ್ಕೆ ಕಳುಹಿಸಿದ ದಿನವಾಗಿ ಆಚರಿಸುತ್ತಾರೆ. ಅಷ್ಟೇ ಅಲ್ಲದೇ ಶ್ರೀಕೃಷ್ಣನು ಗೋವರ್ಧನ ಪರ್ವತವನ್ನು ಎತ್ತಿ ಹಿಡಿದು ಗೋವುಗಳನ್ನು ರಕ್ಷಣೆ ಮಾಡಿದ್ದರ ಪ್ರತೀಕವಾಗಿ ಗೋ ಪೂಜೆಯನ್ನು ಮಾಡಲಾಗುತ್ತದೆ.
ಆ ದಿನ ಸಂಜೆ ಮನೆಯ ತುಂಬ ಹಣತೆ, ದೀಪಗಳನ್ನು ಬೆಳಗಿಸಿ, ಪಟಾಕಿಗಳನ್ನು ಸಿಡಿಸಿ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ.
ಪಾಡ್ಯ ತಿಥಿಯ ಆರಂಭ: ಅಕ್ಟೋಬರ್ 21 ರಂದು ಸಂಜೆ 5:54
ಪಾಡ್ಯ ತಿಥಿಯ ಅಂತ್ಯ: ಅಕ್ಟೋಬರ್ 22 ರಂದು ರಾತ್ರಿ 8:16
ಇದನ್ನೂ ಓದಿ: ಹಬ್ಬಗಳಲ್ಲಿ ಮನೆಯ ಮುಂಬಾಗಿಲಿಗೆ ಹಾಕಿದ ಮಾವಿನ ತೋರಣ ಯಾವಾಗ ತೆಗೆಯಬೇಕು?
(When is Deepawali 2025 know the full details about Diwali date tithi and puja time)



