Indian student arrested: ಚಲಿಸುತ್ತಿದ್ದ ವಿಮಾನದಲ್ಲಿ ಸಹಪ್ರಯಾಣಿಕರ ಮೇಲೆ ಫೋರ್ಕ್ನಿಂದ ಹಲ್ಲೆ : ಭಾರತೀಯ ವಿದ್ಯಾರ್ಥಿ ಬಂಧನ
Indian student arrested: ಜರ್ಮನಿಯ ಫ್ರಾಂಕ್ಫರ್ಟ್ಗೆ ಅಮೆರಿಕದ ಚಿಕಾಗೋದಿಂದ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರನ್ನು ಲೋಹದ ಫೋರ್ಕ್ನಿಂದ ಇರಿದ ಆರೋಪದ ಅಡಿಯಲ್ಲಿ 28 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತ ವಿದ್ಯಾರ್ಥಿಯನ್ನು ಪ್ರಣೀತ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ವಿಮಾನದಲ್ಲಿದ್ದ ಸಹಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ಜೈಲುಪಾಲಾಗಿದ್ದಾನೆ. ಈ ಘಟನೆ ಬಳಿಕ ವಿಮಾನವನ್ನು ಬೋಸ್ಟನ್ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಪ್ರಣೀತ್ ಕುಮಾರ್ ಉಸಿರಿಪಲ್ಲಿ ಎಂಬಾತ ಊಟವಾದ ಬಳಿಕ ಫೋರ್ಕ್ನಿಂದ 17 ವರ್ಷದ ಇಬ್ಬರು ಯುವಕರನ್ನು ಇರಿದಿದ್ದಾನೆ, ಒಬ್ಬಾತನ ಭುಜಕ್ಕೆ ಹಾಗೂ ಮತ್ತೊಬ್ಬನ ತಲೆಯ ಹಿಂಭಾಗಕ್ಕೆ ಗಾಯ ಮಾಡಿದ್ದಾನೆ.
Also Read: ಗಡಿ ಭದ್ರತಾ ಪಡೆಯಲ್ಲಿ ಭಾರತೀಯ ತಳಿಯ ಶ್ವಾನಗಳ ಪಾರುಪತ್ಯ : ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿಮೆ
ಇದು ಮಾತ್ರವಲ್ಲದೇ ಆರೋಪಿಯು ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾನೆ ಹಾಗೂ ವಿಮಾನದ ಸಿಬ್ಬಂದಿ ಮೇಲೆ ಕಪಾಳಮೋಕ್ಷ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಈ ಎಲ್ಲಾ ಘಟನೆಗಳ ಬಳಿಕ ವಿಮಾನವನ್ನು ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು, ಹಾಗೂ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ದೈಹಿಕ ಹಲ್ಲೆ, ಅಪಾಯಕಾರಿ ಆಯುಧಗಳ ಬಳಕೆ ಆರೋಪಗಳ ಅಡಿಯಲ್ಲಿ ಭಾರತೀಯ ಯುವಕನ ವಿರುದ್ಧ ಅಮೆರಿಕ(America) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಪ್ರಣೀತ್ ಕುಮಾರ್ ವಿದ್ಯಾರ್ಥಿ ವೀಸಾದ ಮೇಲೆ ಅಮೆರಿಕದಲ್ಲಿ ವಾಸವಿದ್ದ ಎನ್ನಲಾಗಿದೆ. ಇತ್ತೀಚಿಗೆ ಆತ ಸ್ನಾತಕೋತ್ತರ ಅಭ್ಯಾಸಕ್ಕೆಂದು ಅಮೆರಿಕಕ್ಕೆ ಬಂದಿದ್ದ ಎನ್ನಲಾಗಿದೆ. ಆದರೆ ಈ ಘಟನೆಯ ಬಳಿಕ ಪ್ರಣೀತ್ಕುಮಾರ್ಗೆ ಇನ್ನು ಅಮೆರಿಕದಲ್ಲಿ ಕಾನೂನುಬದ್ಧ ಸ್ಥಾನಮಾನವಿಲ್ಲ ಎಂದು ಅಮೆರಿಕದ ನ್ಯಾಯಾಲಯ ಹೇಳಿದೆ.
Also read: ಯುದ್ಧಕ್ಕೆ ತಯಾರಾಗುತ್ತಿದೆಯಾ ಚೀನಾ : ಭಾರತೀಯ ಗಡಿ ಬಳಿ ಹೊಸ ವಾಯು ರಕ್ಷಣಾ ತಾಣ ನಿರ್ಮಿಸಿದೆ ಡ್ರ್ಯಾಗನ್ ರಾಷ್ಟ್ರ



