ಕಾರ್ತಿಕ ಮಾಸದ ಮಹತ್ವ ಹಾಗು ವೈಶಿಷ್ಟ್ಯತೆ

ಕಾರ್ತಿಕ ಮಾಸವನ್ನು ಅತ್ಯಂತ ಶುದ್ಧ , ಪವಿತ್ರ ಹಾಗು ಶುಭಕರ ಮಾಸವೆಂದು ಪರಿಗಣಿಸಲಾಗುತ್ತದೆ. ಹಿಂದೂ ಪಂಚಾಂಗದ ಎಂಟನೇ ತಿಂಗಳಾದ ಕಾರ್ತಿಕ ಮಾಸವು ಧಾರ್ಮಿಕ ಆಚರಣೆಗಳಿಗೆ ಅತ್ಯಂತ ಶ್ರೇಷ್ಠವಾದುದು.
ಈ ಮಾಸದಲ್ಲಿ ಶಿವ ಮತ್ತು ವಿಷ್ಣು ಇಬ್ಬರನ್ನೂ ಬಹಳ ಭಕ್ತಪೂರಕವಾಗಿ ಪೂಜಿಸಲಾಗುತ್ತದೆ. ಈ ಮಾಸದಲ್ಲಿ ತುಳಸಿ ಗಿಡವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಇದರಿಂದ ಸೌಭಾಗ್ಯ , ಸಮೃದ್ಧಿ ಹಾಗು ಉತ್ತಮ ಆರೋಗ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ
ಕಾರ್ತಿಕ ಮಾಸದ ಪವಿತ್ರ್ಯತೆಯನ್ನು ದೀಪಾರಾಧನೆ – ದೀಪ ಬೆಳಗುವಿಕೆಯ ಮೂಲಕ ಗುರುತಿಸಲ್ಪಡಲಾಗುತ್ತದೆ.
ಮುಖ್ಯವಾಗಿ ಕಾರ್ತಿಕ ಏಕಾದಶಿ ಹಾಗು ಕಾರ್ತಿಕ ಹುಣ್ಣಿಮೆಯಂದು ಉಪವಾಸ ಕೈಗೊಂಡು ಭಕ್ತಿಯಿಂದ ಶಿವನನ್ನು ಪೂಜಿಸಿದರೆ ನಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ನಂಬಿಕೆ.
ಶಿವನಿಗೆ ಪ್ರಾರ್ಥನೆ ಸಲ್ಲಿಸುವುದು, ರುದ್ರಾಭಿಷೇಕ, ಬಿಲ್ವಪೂಜೆ ಹಾಗು ವಿಷ್ಣು ಸಹಸ್ರನಾಮ ಪಠಿಸುವುದರಿಂದ ನಮ್ಮ ಕರ್ಮಗಳು ಕಳೆದು ನಮ್ಮೆಲ್ಲ ಪಾಪಗಳು ನಿವಾರಣೆಯಾಗುತ್ತದೆ.
ದೀಪೋತ್ಸವ :
ಕಾರ್ತಿಕ ಮಾಸದಲ್ಲಿ ಭಕ್ತಿಯಿಂದ ದೀಪಗಳನ್ನು ಬೆಳಗುವುದೇ ಕಾರ್ತಿಕ ದೀಪೋತ್ಸವ.
ದೀಪವು ನಮ್ಮ ದೇಹವನ್ನು ಸಂಕೇತಿಸಿದರೆ , ಬೆಳಕು ನಮ್ಮ ಆತ್ಮವನ್ನು ಸಂಕೇತಿಸುತ್ತದೆ.
ನಾವು ದೀಪವನ್ನು ಹಚ್ಚಿದಾಗ ಕತ್ತಲೆ ಇಂದ ಬೆಳಕಿನೆಡೆಗೆ ಸಾಗುತ್ತೇವೆ ಹಾಗು ನಮ್ಮಲ್ಲಿರುವ ಅಜ್ಞಾನ, ಕೋಪ , ದುರಾಸೆ , ದ್ವೇಷ, ಕಹಿ , ಅಸಮಾಧಾನ ಇಂತಹ ನಕಾರಾತ್ಮಕಗಳಿಂದ ಮುಕ್ತರಾಗುತ್ತೇವೆ.
ಪವಿತ್ರ ಕಾರ್ತಿಕ ಮಾಸದಲ್ಲಿ ದೀಪಾರಾಧನೆಯಿಂದ ನಮ್ಮ ಕರ್ಮಗಳಿಂದ ಶುದ್ಧರಾಗಿ ಪರಮಾತ್ಮನೋಂದಿಗೆ ಸೇರಲು ದಾರಿ ಮಾಡಿ ಕೊಡುವುದು. ನಿಜವಾದ ಸಂತೋಷವನ್ನು ಅನುಭವಿಸಲು ದೇಹ ಮಾತು ಆತ್ಮಗಳ ಶುದ್ಧತೆ ಮಾಡಿ ನಮ್ಮ ಪ್ರಜ್ಞೆಯ ಮಟ್ಟವನ್ನು ಹೆಚ್ಚಿಸುವುದು ಅತೀ ಮುಖ್ಯ.
ಕಾರ್ತಿಕ ಪೌರ್ಣಮಿ
ಈ ದಿನ ಈಶ್ವರನು ಭೂಮಿಗೆ ಇಳಿದು ಬಂದು ನಮ್ಮನ್ನೆಲ್ಲ ಆಶೀರ್ವದಿಸುತ್ತಾನೆಂದು ನಂಬಿಕೆ ಇದೆ.
ಈ ದಿನ 365 ತುಪ್ಪದ ದೀಪವನ್ನು ಬೆಳಗಿಸಿದರೆ ವರ್ಷದ ಪ್ರತೀ ದಿನ ದೀಪ ಹಚ್ಚುವುದಕ್ಕೆ ಸಮಾನವಾಗಿರುತ್ತದೆ.
ಕಾರ್ತಿಕ ಪೌರ್ಣಮಿಯಂದು ಉಪವಾಸವಿದ್ದು ಅಥವಾ ಸಾತ್ತ್ವಿಕ ಆಹಾರ ಸೇವನೆ ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ ಹಾಗು ಹೊಸ ಶಕ್ತಿ ನಮ್ಮನ್ನು ನವೀಕರಿಸುತ್ತದೆ.
ಕಾರ್ತಿಕ ಮಾಸದಲ್ಲಿ ಓಂ ನಮಃ ಶಿವಾಯ ಈ ಮಂತ್ರ ಬಹಳ ಭಕ್ತಿಯಿಂದ ಪಠಣೆ ಮಾಡಿದರೆ ನಮ್ಮ ಆತ್ಮಗಳಿಗೆ ಒಂದು ಅಸ್ತಿತ್ವ ದೊರೆಯುತ್ತದೆ. ನಮ್ಮ ಮನಸ್ಸು ತಿಳಿಯಾಗುತ್ತದೆ. ಎಲ್ಲರಿಗೂ ಆ ಮಹೇಶ್ವರನು ಒಳ್ಳೆಯದು ಮಾಡಲಿ ಎಂದು ಹಾರೈಸೋಣ.



