Biggest Fraud: ಅಮೇರಿಕಾದಲ್ಲಿ 4,200 ಕೋಟಿ ಪಂಗನಾಮ ಹಾಕಿ ನಾಪತ್ತೆಯಾದ ಬಂಕಿಮ್ ಬ್ರಹ್ಮಭಟ್
ಭಾರತೀಯ ಮೂಲದ ಉದ್ಯಮಿ ಮತ್ತು ದೂರಸಂಪರ್ಕ ಸಂಸ್ಥೆಗಳ ಮುಖ್ಯಸ್ಥರಾದ ಬಂಕಿಮ್ ಬ್ರಹ್ಮಭಟ್ ಅವರು ೪,೨೦೦ ಕೋಟಿ ರೂಪಾಯಿಗಳ ಬೃಹತ್ ಮೊತ್ತದ ಸಾಲ ವಂಚನೆ ಪ್ರಕರಣದ ಕೇಂದ್ರಬಿಂದುವಾಗಿದ್ದಾರೆ. ಈ ಘಟನೆಯು ಅಮೆರಿಕದ ಪ್ರಮುಖ ಹೂಡಿಕೆ ನಿರ್ವಹಣಾ ಸಂಸ್ಥೆಗಳಲ್ಲಿ ಒಂದಾದ ಬ್ಲಾಕ್ರಾಕ್ ಸಂಸ್ಥೆಗೆ ದೊಡ್ಡ ಆರ್ಥಿಕ ನಷ್ಟ ಉಂಟುಮಾಡಿದೆ. ವಂಚನೆಯ ಆರೋಪ ಎದುರಿಸುತ್ತಿರುವ ಬಂಕಿಮ್ ಬ್ರಹ್ಮಭಟ್ ಅವರು ಸದ್ಯ ನಾಪತ್ತೆಯಾಗಿದ್ದಾರೆ.
ವಂಚನೆಯ ರೀತಿ ಮತ್ತು ಸಾಲದ ವಿವರ
ಬಂಕಿಮ್ ಬ್ರಹ್ಮಭಟ್ ಅವರ ಒಡೆತನದ ದೂರಸಂಪರ್ಕ ಸಂಸ್ಥೆಗಳು, ಬ್ಲಾಕ್ರಾಕ್ನಿಂದ ಹಣಕಾಸು ನೆರವು ಪಡೆದ ಎಚ್ಪಿಎಸ್ ಇನ್ವೆಸ್ಟ್ಮೆಂಟ್ ಪಾರ್ಟ್ನರ್ಸ್ ಸೇರಿದಂತೆ ಇತರ ಸಾಲ ನೀಡುವ ಸಂಸ್ಥೆಗಳಿಗೆ ಈ ಹಣವನ್ನು ಮರುಪಾವತಿಸಬೇಕಿದೆ. ಠೇವಣಿದಾರರು ಈ ಸಂಪೂರ್ಣ ವಂಚನೆಯನ್ನು “ಕಲ್ಪನೆಗೂ ನಿಲುಕದ್ದು” ಎಂದು ಬಣ್ಣಿಸಿದ್ದಾರೆ.
ವಂಚನೆ ಬಯಲಾಗಿದ್ದು ಹೇಗೆ?
ಸಾಲ ಪಡೆಯಲು ಬಂಕಿಮ್ ಬ್ರಹ್ಮಭಟ್ ಅವರು ಸುಳ್ಳು ಮಾರ್ಗಗಳನ್ನು ಅನುಸರಿಸಿದ್ದಾರೆ ಎಂದು ಠೇವಣಿದಾರರು ಆರೋಪಿಸಿದ್ದಾರೆ. ತಮ್ಮ ಸಂಸ್ಥೆಗೆ ಗ್ರಾಹಕರಿಂದ ಬರಬೇಕಿದ್ದ ಬಾಕಿ ಹಣದ ದಾಖಲೆಗಳನ್ನು ಮತ್ತು ವ್ಯವಹಾರದ ರಶೀದಿಗಳನ್ನು ನಕಲಿ ಮಾಡಿ ಸೃಷ್ಟಿಸಲಾಗಿದೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಸಾಲಕ್ಕೆ ಆಧಾರವಾಗಿ ನೀಡಲಾದ ಗ್ರಾಹಕರ ಇ-ಮೇಲ್ ವಿಳಾಸಗಳು ಸಹ ನಕಲಿಯಾಗಿದ್ದವು.
ಬಂಕಿಮ್ ಬ್ರಹ್ಮಭಟ್ ಅವರು ಗುಜರಾತ್ ಮೂಲದವರು. ಇವರು ತಮ್ಮ ವೃತ್ತಿಜೀವನವನ್ನು ದೂರಸಂಪರ್ಕ ಎಂಜಿನಿಯರ್ ಆಗಿ ಪ್ರಾರಂಭಿಸಿದ್ದರು.
ಇವರು 1989ರಲ್ಲಿ ಭಾರತದಲ್ಲಿ ಒಂದು ಸಣ್ಣ ಉದ್ಯಮದಿಂದ ತಮ್ಮ ಪಯಣವನ್ನು ಶುರು ಮಾಡಿದರು. ಆರಂಭದಲ್ಲಿ, ಅವರು ಪುಶ್-ಬಟನ್ ದೂರವಾಣಿ ತಯಾರಿಕಾ ಘಟಕವನ್ನು ಸ್ಥಾಪಿಸಿದ್ದರು. ಕಾಲಕ್ರಮೇಣ ಅವರ ವ್ಯಾಪಾರವು ಬೃಹತ್ತಾಗಿ ಬೆಳೆಯಿತು. ಅವರ ಸಂಸ್ಥೆಯು ಉಪಗ್ರಹ ಸಂವಹನ, ದೂರಸಂಪರ್ಕ ಬಿಲ್ಲಿಂಗ್ ಮತ್ತು ಡಿಜಿಟಲ್ ಹಣಕಾಸು ವೇದಿಕೆಗಳಂತಹ ಪ್ರಮುಖ ವಲಯಗಳಿಗೆ ವಿಸ್ತರಿಸಿತು.
ಬ್ರಹ್ಮಭಟ್ ಅವರು ಅಮೆರಿಕ ಮೂಲದ ಬ್ಯಾಂಕೈ ಸಮೂಹದ (Bankai Group) ಸ್ಥಾಪಕ ಮತ್ತು ಮುಖ್ಯಸ್ಥರಾಗಿದ್ದರು. ದೂರಸಂಪರ್ಕ ಕ್ಷೇತ್ರದಲ್ಲಿ ಇವರನ್ನು ಒಬ್ಬ ಪ್ರಭಾವಿ ಮತ್ತು ಗುರುತಿಸಿಕೊಂಡ ವ್ಯಕ್ತಿ ಎಂದು ಪರಿಗಣಿಸಲಾಗಿತ್ತು.
ಈ ಅಕ್ರಮಗಳು ಬೆಳಕಿಗೆ ಬಂದ ನಂತರ, ಮುಖ್ಯಸ್ಥರಾದ ಬಂಕಿಮ್ ಬ್ರಹ್ಮಭಟ್ ಅವರು ಇದ್ದಕ್ಕಿದ್ದಂತೆ ಸಂಪರ್ಕಕ್ಕೆ ಸಿಗುವುದನ್ನು ನಿಲ್ಲಿಸಿದ್ದಾರೆ. ಅವರ ಸಂಸ್ಥೆಗಳ ಕಚೇರಿಗಳು ಮುಚ್ಚಿರುವುದು ಕಂಡುಬಂದಿದೆ. ಸಾಲ ನೀಡಿದವರು, ಬಂಕಿಮ್ ಬ್ರಹ್ಮಭಟ್ ಅವರು ಭಾರತಕ್ಕೆ ತೆರಳಿರಬಹುದು ಎಂದು ಶಂಕಿಸಿದ್ದಾರೆ. ಈಗಾಗಲೇ ಅಮೆರಿಕ ನ್ಯಾಯಾಲಯದಲ್ಲಿ ಅವರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಈ ದೊಡ್ಡ ಮಟ್ಟದ ಆರ್ಥಿಕ ವಂಚನೆಯು ಜಾಗತಿಕ ಹಣಕಾಸು ಕ್ಷೇತ್ರದಲ್ಲಿ ತಲ್ಲಣ ಮೂಡಿಸಿದೆ.



