ಯಕ್ಷಗಾನದ ಖ್ಯಾತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನ

Kandavara Raghuram Shetty : ಕುಂದಾಪುರ: ಬಡಗು ತಿಟ್ಟು ಯಕ್ಷಗಾನ ರಂಗದ ಖ್ಯಾತ ಪ್ರಸಂಗಕರ್ತ, ಅರ್ಥಧಾರಿ ಮತ್ತು ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ ಅವರು ವಿಧಿವಶರಾಗಿದ್ದಾರೆ. 89 ವರ್ಷ ಪ್ರಾಯದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಕುಂದಾಪುರದ ನೂಜಾಡಿಯಲ್ಲಿರುವ ಮನೆಯಲ್ಲಿ ವಿಧಿವಶರಾಗಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ‘ಕಂದಾವರ’ ಎಂದೇ ಪ್ರಸಿದ್ಧರಾಗಿದ್ದ ಇವರು, ಕೇವಲ ಪ್ರಸಂಗಕರ್ತರಾಗಿ ಮಾತ್ರವಲ್ಲದೆ, ಹವ್ಯಾಸಿ ವೇಷಧಾರಿ ಮತ್ತು ಉತ್ತಮ ಅರ್ಥಧಾರಿಯಾಗಿಯೂ ಗುರುತಿಸಿಕೊಂಡಿದ್ದರು.
ಕುಂದಾಪುರ ತಾಲೂಕಿನ ಬಳ್ಕೂರಿನ ಕಂದಾವರದಲ್ಲಿ 1936 ರಲ್ಲಿ ಜನಿಸಿದ ಇವರು, ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 35 ವರ್ಷಗಳ ಕಾಲ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ಅವರು ಸಾಧಿಸಿದ ಸಾಧನೆಗಾಗಿ ‘ಮಾದರಿ ಶಿಕ್ಷಕ’ ಪ್ರಶಸ್ತಿಗೂ ಭಾಜನರಾಗಿದ್ದರು. ‘ಚೆಲುವೆ ಚಿತ್ರಾವತಿ’, ‘ರತಿ ರೇಖಾ’, ‘ಶ್ರೀ ದೇವಿ ಬನಶಂಕರಿ’, ‘ಶೂದ್ರ ತಪಸ್ವಿನಿ’, ‘ವಸುವರಾಂಗಿ’ ಮತ್ತು ‘ಸೀತಾಪಾರಮ್ಯ’ ಮುಂತಾದ ಹಲವು ಪ್ರಸಂಗಗಳು ಹೆಚ್ಚು ಪ್ರಖ್ಯಾತಿಯನ್ನು ಗಳಿಸಿವೆ.
ಇದನ್ನೂ ಓದಿ : ಯಕ್ಷಗಾನದ ವೇಷ ಕಳಚುತ್ತಿದ್ದಾಗ ಹೃದಯಾಘಾತ ; ಮಂದಾರ್ತಿ ಮೇಳದ ಕಲಾವಿದ ಈಶ್ವರ ಗೌಡ ಸಾವು
ಪೆರ್ಡೂರು ಮೇಳಕ್ಕೆ ಸೂಪರ್ ಹಿಟ್ ಪ್ರಸಂಗಗಳನ್ನು ನೀಡಿದ ಖ್ಯಾತಿ ಕಂದಾವರ ರಘುರಾಮ ಶೆಟ್ಟಿ ಅವರಿಗೆ ಸಲ್ಲುತ್ತದೆ. ಅವರ ಪ್ರಸಂಗಗಳಲ್ಲಿ ರಂಗದೃಶ್ಯ, ಹಾಡುಗಾರಿಕೆ, ರಸವೈವಿಧ್ಯ ಮತ್ತು ಪಾತ್ರ ಚಿತ್ರಣಗಳಿಗೆ ಹೆಚ್ಚಿನ ಒತ್ತು ಇರುತ್ತಿತ್ತು.
ಕಂದಾವರ ರಘುರಾಮ ಶೆಟ್ಟಿಯವರ ನಿಧನಕ್ಕೆ ಯಕ್ಷಗಾನ ಮತ್ತು ಸಾಹಿತ್ಯ ವಲಯದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಯಕ್ಷಗಾನಕ್ಕೆ ಇವರು ನೀಡಿದ ಅಮೂಲ್ಯ ಕೊಡುಗೆ ಸ್ಮರಣೀಯ.
Yakshagana narrator Kandavara Raghuram Shetty passes away



