ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಕಿತ್ತಾಟ ನಡೆಯುತ್ತಿರುವ ನಡುವೆಯೇ ಸಿಎಂ ಸಿದ್ದರಾಮಯ್ಯ ಹೊಸ ದಾಖಲೆಯೊಂದನ್ನು ರಾಜ್ಯ ರಾಜಕಾರಣದಲ್ಲಿ ಬರೆದಿದ್ದಾರೆ. ದಿವಂಗತ ದೇವರಾಜ ಅರಸು ಅವರ ದೀರ್ಘಾವದಿ ಸಿಎಂ ದಾಖಲೆಯನ್ನು ಸರಿಗಟ್ಟುವ ಮೂಲಕ ಕರ್ನಾಟಕದ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಕೀರ್ತಿಗೆ ಸಿಎಂ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ.
ದಿವಂಗತ ದೇವರಾಜ ಅರಸು 7 ವರ್ಷ 7 ತಿಂಗಳು 20 ದಿನಗಳ ಕಾಲ ನಾಡಿನ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ಈ ಮೂಲಕ ರಾಜ್ಯದ ದೀರ್ಘಾವಧಿ ಸಿಎಂ ಎನಿಸಿದ್ದರು. ಇದೀಗ ಈ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುರಿದಿದ್ದಾರೆ. 2013ರಲ್ಲಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ 5 ವರ್ಷಗಳ ಸಂಪೂರ್ಣ ಆಡಳಿತ ನೀಡಿದ್ದಾರೆ. 2023ರ ಮೇ 20ರಂದು ಮತ್ತೊಮ್ಮೆ ರಾಜ್ಯದ ಸಿಎಂ ಆಗಿ ಅಧಿಕ್ಕಾರಕ್ಕೆ ಏರಿದ ಸಿದ್ದರಾಮಯ್ಯ ಈ ಅವಧಿಯಲ್ಲಿ 963 ದಿನಗಳನ್ನು ಪೂರೈಸಿದ್ದಾರೆ. ಈ ಮೂಲಕ ಕರ್ನಾಟಕದ ದೀರ್ಘಾವಧಿಯ ಸಿಎಂ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಇನ್ನು ಮೂರನೇ ಸ್ಥಾನದಲ್ಲಿ ಎಸ್. ನಿಜಲಿಂಗಪ್ಪ ಅವರಿದ್ದು 7 ವರ್ಷ 175 ದಿನಗಳ ಕಾಲ ರಾಜ್ಯದ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ರಾಮಕೃಷ್ಣ ಹೆಗಡೆ ಅವರಿದ್ದು 5 ವರ್ಷ 216 ದಿನಗಳ ಕಾಲ ನಾಡಿನ ಮುಖ್ಯಮಂತ್ರಿಗಳಾಗಿ ಹಾಗೂ 5 ವರ್ಷದ 82 ದಿನಗಳ ಕಾಲ ಸಿಎಂ ಆಗಿ ಸೇವೆ ಸಲ್ಲಿಸುವ ಮೂಲಕ ಬಿ.ಎಸ್ ಯಡಿಯೂರಪ್ಪ ಐದನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದ ಸಂಕ್ರಾಂತಿ ಕ್ರಾಂತಿ : ಸಿಎಂ, ಡಿಸಿಎಂಗೆ ದೆಹಲಿಗೆ ಬುಲಾವ್
ಇನ್ನು ಈ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ನನಗೂ ದೇವರಾಜ ಅರಸು ಅವರಿಗೂ ಹೋಲಿಕೆಯೇ ಇಲ್ಲ. ನಾವಿಬ್ಬರೂ ಒಂದೇ ಜಿಲ್ಲೆಯಿಂದ ಬಂದವರು ಎಂದು ಹೇಳಲು ಹೆಮ್ಮೆಯಿದೆ. ದಾಖಲೆ ಮುರಿಯುವುದು ಹಾಗಿರಲಿ, ನಾನು ಎಂದಿಗೂ ಕರ್ನಾಟಕದ ಸಿಎಂ ಆಗಬಲ್ಲೆ ಎಂಬ ಕನಸನ್ನೂ ಕಂಡವನಲ್ಲ ಎಂದಿದ್ದಾರೆ.



