Bigg Boss 12: ಫಿನಾಲೆ ಹೊಸ್ತಿಲಲ್ಲಿ ಧ್ರುವಂತ್ ಔಟ್; ಅಂತಿಮ ಹಣಾಹಣಿಗೆ ಈ 6 ಸ್ಪರ್ಧಿಗಳು!
Bigg Boss 12 Mid Week Elimination: ಕುತೂಹಲದ ಘಟ್ಟ ತಲುಪಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಲ್ಲಿ ಈಗ ಮಹತ್ವದ ತಿರುವು ಸಿಕ್ಕಿದೆ. ಗ್ರ್ಯಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಅನಿರೀಕ್ಷಿತ ‘ಮಿಡ್ ವೀಕ್ ಎಲಿಮಿನೇಷನ್’ ನಡೆದಿದ್ದು, ಮನೆಯ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಧ್ರುವಂತ್ ಅವರು ಆಟದಿಂದ ಹೊರಬಿದ್ದಿದ್ದಾರೆ.
ಅರ್ಧದಲ್ಲೇ ಮುಗಿದ ಧ್ರುವಂತ್ ಪಯಣ
ಫಿನಾಲೆ ವಾರಕ್ಕೆ ಕಾಲಿಟ್ಟಿದ್ದ ಏಳು ಸ್ಪರ್ಧಿಗಳಲ್ಲಿ ಒಬ್ಬರು ವಾರದ ಮಧ್ಯೆಯೇ ಹೊರಹೋಗಲಿದ್ದಾರೆ ಎಂದು ಮೊದಲೇ ಘೋಷಿಸಲಾಗಿತ್ತು. ಅದರಂತೆ 108ನೇ ದಿನದಂದು ಧ್ರುವಂತ್ ಅವರ ಬಿಗ್ ಬಾಸ್ ಜರ್ನಿ ಅಂತ್ಯವಾಗಿದೆ. ಮನೆಯಲ್ಲಿ ಬಹುತೇಕ ಸಮಯ ಯಾರೊಂದಿಗೂ ಗುಂಪುಗಾರಿಕೆ ಮಾಡದೆ, ಒಂಟಿ ಸಲಗನಂತೆ ಆಡುತ್ತಿದ್ದ ಧ್ರುವಂತ್ ಅವರಿಗೆ ಈ ಎಲಿಮಿನೇಷನ್ ದೊಡ್ಡ ಆಘಾತ ನೀಡಿದೆ.
ಒಂದು ಹಂತದಲ್ಲಿ ಮಾನಸಿಕವಾಗಿ ಕುಗ್ಗಿ ಶೋ ಬಿಡುವ ನಿರ್ಧಾರ ಮಾಡಿದ್ದ ಧ್ರುವಂತ್ ಅವರಿಗೆ ಕಿಚ್ಚ ಸುದೀಪ್ ಅವರು ಧೈರ್ಯ ತುಂಬಿದ್ದರು. ಆ ಬಳಿಕ ಪುಟಿದೆದ್ದಿದ್ದ ಅವರು ಫಿನಾಲೆ ಹಂತದವರೆಗೆ ಬಂದಿದ್ದರೂ, ಟ್ರೋಫಿ ಗೆಲ್ಲುವ ಕನಸು ಮಾತ್ರ ನನಸಾಗಲಿಲ್ಲ.
ಫಿನಾಲೆ ರೇಸ್‌ನಲ್ಲಿರುವ ಆರು ಮಂದಿ ಯಾರು?
ಧ್ರುವಂತ್ ನಿರ್ಗಮನದ ನಂತರ ಈಗ ಮನೆಯಲ್ಲಿ ಒಟ್ಟು ಆರು ಜನ ಸ್ಪರ್ಧಿಗಳು ಅಂತಿಮ ಹಣಾಹಣಿಗೆ ಉಳಿದುಕೊಂಡಿದ್ದಾರೆ:
- ಗಿಲ್ಲಿ ನಟ
- ಅಶ್ವಿನಿ ಗೌಡ
- ರಕ್ಷಿತಾ ಶೆಟ್ಟಿ
- ಧನುಷ್
- ಮ್ಯೂಟೆಂಟ್ ರಘು
- ಕಾವ್ಯಾ ಶೈವ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಕ್ರೇಜ್ ಜೋರು, ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಶರಣು!
ಗಿಲ್ಲಿ ನಟನಿಗೆ ಒಲಿಯುವುದೇ ಟ್ರೋಫಿ?
ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಗಿಲ್ಲಿ ನಟ ಅವರಿಗೆ ಪ್ರಬಲ ಜನಬೆಂಬಲ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಪರವಾಗಿ ದೊಡ್ಡ ಮಟ್ಟದ ಅಭಿಯಾನ ನಡೆಯುತ್ತಿದ್ದು, ಉಳಿದ ಸ್ಪರ್ಧಿಗಳಿಗಿಂತ ಅವರೇ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಟ್ರೋಫಿ ಗಿಲ್ಲಿ ನಟ ಪಾಲಾಗುವ ಸಾಧ್ಯತೆ ದಟ್ಟವಾಗಿದೆ ಎಂಬ ಚರ್ಚೆಗಳು ಅಭಿಮಾನಿಗಳ ವಲಯದಲ್ಲಿ ಜೋರಾಗಿವೆ.



