ಬಿಗ್ಬಾಸ್ ಕನ್ನಡ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿ
ಬಿಗ್ಬಾಸ್ ಸೀಸನ್ 12ನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡ ಕರಾವಳಿಯ ಕೃಷ್ಣ ಸುಂದರಿ ರಕ್ಷಿತಾ ಶೆಟ್ಟಿ ಬಿಗ್ಬಾಸ್ ಕನ್ನಡ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಈ ಸೀಸನ್ನ ರನ್ನರ್ ಅಪ್ ಆಗಿ ಹೊರಹೊಮ್ಮುವ ಮೂಲಕ ಬಿಗ್ಬಾಸ್ ಕನ್ನಡ ಇತಿಹಾಸದಲ್ಲಿಯೇ ಮೊದಲ ಮಹಿಳಾ ರನ್ನರ್ ಅಪ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಹಾಗೂ ಫಿನಾಲೆಯಲ್ಲಿ ನಟ ಕಿಚ್ಚ ಸುದೀಪ ಕೈ ಹಿಡಿದ 2ನೇ ಮಹಿಳಾ ಸ್ಫರ್ಧಿ ಎಂಬ ಗರಿಮೆ ಗಳಿಸಿದ್ದಾರೆ.
ರಕ್ಷಿತಾ ಶೆಟ್ಟಿ ಈ ಬಾರಿ ವಿನ್ನರ್ ಆಗಬೇಕು ಎಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿತ್ತು. ಅಂತಯೇ ಘಟಾನುಘಟಿ ಸ್ಪರ್ಧಿಗಳನ್ನೇ ಹಿಂದಿಕ್ಕಿತ ಪಟಾಕಿ ಪೋರಿ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೇರ ನಿಲುವಿನ ಸಾದಾ ಸೀದಾ ಹುಡುಗಿ ರಕ್ಷಿತಾ ಶೆಟ್ಟಿ ತಮ್ಮ ಸರಳತೆಯ ಮೂಲಕವೇ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಮೂಲತಃ ಪಡುಬಿದ್ರೆಯವರಾದ ರಕ್ಷಿತಾ ಶೆಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಸ್ಪಷ್ಟ ಕನ್ನಡ ಬಾರದೇ ಇದ್ದರೂ ತಮ್ಮ ಮುದ್ದು ಮುದ್ದಾದ ಕನ್ನಡ ಭಾಷೆಯ ಮೂಲಕವೇ ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ರಕ್ಷಿತಾ ಯಶಸ್ವಿಯಾಗಿದ್ದರು.
ಇದನ್ನೂ ಓದಿ: ಬಿಗ್ಬಾಸ್ ಸೀಸನ್ 12 ವಿಜೇತನಾಗಿ ಹೊರಹೊಮ್ಮಿದ ಗಿಲ್ಲಿ ನಟ : ಮೊಟ್ಟ ಮೊದಲ ಬಾರಿಗೆ ಸುದೀಪರಿಂದ ವೈಯಕ್ತಿಕ ಬಹುಮಾನ
ರಕ್ಷಿತಾ ಬಿಗ್ಬಾಸ್ ಕನ್ನಡ ಇತಿಹಾಸದ 2ನೇ ಮಹಿಳಾ ವಿನ್ನರ್ ಆಗಬೇಕೆಂದು ಅನೇಕರು ಆಸೆ ಪಟ್ಟಿದ್ದರು. ಆದರೆ ಕೊನೆಯ ಹಂತದಲ್ಲಿ ರಕ್ಷಿತಾ ಬಿಗ್ಬಾಸ್ ಟ್ರೋಫಿಯಿಂದ ವಂಚಿತರಾಗಿದ್ದಾರೆ. ಆದರೆ ಕಿಚ್ಚ ಸುದೀಪರ ಎರಡು ಕೈಗಳಲ್ಲಿ ಒಂದು ಕೈಯನ್ನು ಹಿಡಿದುಕೊಳ್ಳುವಲ್ಲಿ ಯಶಸ್ವಿಯಾದ ರಕ್ಷಿತಾ ಶೆಟ್ಟಿ ಈ ಮೂಲಕ ಕರಾವಳಿಗರ ಗರಿಮೆಯನ್ನು ಹೆಚ್ಚಿಸಿದ್ದಾರೆ.



