ಗಂಗೊಳ್ಳಿ: ರಥಬೀದಿ ಬಳಿ ಮಟ್ಕಾ ಜುಗಾರಿ ಅಡ್ಡೆಗೆ ಪೊಲೀಸರ ದಾಳಿ; ಓರ್ವನ ಬಂಧನ, ನಗದು ಜಪ್ತಿ

Gangolli Police Raid Illegal Matka : ಗಂಗೊಳ್ಳಿ: ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗಂಗೊಳ್ಳಿ ಪೊಲೀಸರು ದಾಳಿ ನಡೆಸಿ ಬಂಧಿಸಿರುವ ಘಟನೆ ಗಂಗೊಳ್ಳಿ ಗ್ರಾಮದ ರಥಬೀದಿ ಬಳಿ ನಡೆದಿದೆ.
ಜನವರಿ 30 ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಪವನ್ ನಾಯಕ್ ಅವರಿಗೆ ಬೀಟ್ ಸಿಬ್ಬಂದಿ ರಾಜು ನಾಯ್ಕ ಅವರು ಮಟ್ಕಾ ಅಕ್ರಮದ ಬಗ್ಗೆ ಖಚಿತ ಮಾಹಿತಿ ನೀಡಿದ್ದರು. ಗಂಗೊಳ್ಳಿ ರಥಬೀದಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಮಟ್ಕಾ ದಂಧೆಯಲ್ಲಿ ತೊಡಗಿದ್ದಾನೆ ಎಂಬ ಮಾಹಿತಿಯ ಮೇರೆಗೆ ಪಿಎಸ್‌ಐ ಮತ್ತು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದರು.
ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆಯಲ್ಲಿ ಓರ್ವ ವ್ಯಕ್ತಿ ಸಾರ್ವಜನಿಕರನ್ನು ಕೂಗಿ ಕರೆಯುತ್ತಾ, “ಒಂದು ರೂಪಾಯಿಗೆ 70 ರೂಪಾಯಿ ನೀಡುವುದಾಗಿ” ಆಮಿಷ ಒಡ್ಡುತ್ತಿದ್ದನು.
Aslo Read : ಸುರತ್ಕಲ್ : ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷನಿಂದ 1 ಕೋಟಿ ರೂಪಾಯಿ ವಂಚನೆ : ದೂರು ದಾಖಲು
ಜನರಿಂದ ಹಣ ಸಂಗ್ರಹಿಸಿ ಚೀಟಿಯಲ್ಲಿ ಸಂಖ್ಯೆಗಳನ್ನು ಬರೆಯುತ್ತಿದ್ದನ್ನು ಖಚಿತಪಡಿಸಿಕೊಂಡ ಪೊಲೀಸರು, ಬೆಳಿಗ್ಗೆ 11:20 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ನಡೆಸಿದರು. ದಾಳಿಯ ವೇಳೆ ಮಟ್ಕಾ ಚೀಟಿ ಬರೆಯುತ್ತಿದ್ದ ಉದಯ ದೇವಾಡಿಗ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಉದಯ ದೇವಾಡಿಗ ಎಂಬಾತನಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಒಟ್ಟು 1,350/- ರೂಪಾಯಿ ನಗದು, ಒಂದು ಮಟ್ಕಾ ಚೀಟಿ ಹಾಗೂ ಒಂದು ಬಾಲ್ ಪೆನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Also Read : ಬೈಂದೂರು: ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು; ಆಹಾರ ನಿರೀಕ್ಷಕರಿಂದ ದಾಳಿ, 7.14 ಕ್ವಿಂಟಾಲ್ ಅಕ್ಕಿ ಜಪ್ತಿ
ಮಟ್ಕಾ ಅಕ್ರಮ ದಂಧೆಗೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದ ಗಂಗೊಳ್ಳಿ ಪೊಲೀಸರು, ಅಪರಾಧ ಕ್ರಮಾಂಕ 06/2026 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ (KP Act) ಕಲಂ: 78(1)(iii) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Gangolli Police Raid Illegal Matka Den Near Rathabeedi One Arrested



