HMC Trophy 2026 : ವಿವಾದದಿಂದ ರದ್ದಾದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ: ನಾಲ್ಕು ತಂಡಗಳಿಗೆ ತಲಾ 5 ಲಕ್ಷ ರೂಪಾಯಿ
ಉಡುಪಿ : ಬ್ರಹ್ಮಾವರದಲ್ಲಿ ಜ.23ರಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಎಚ್.ಎಂ.ಸಿ ಯುನೈಟೆಡ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ವಿವಾದದ ಕಾರಣದಿಂದ ಕೊನೇ ಕ್ಷಣದಲ್ಲಿ ರದ್ದುಗೊಂಡಿತ್ತು. ಇದೀಗ ಫೈನಲ್‌ಗೆ ಪ್ರವೇಶಿಸಿದ್ದ ನಾಲ್ಕು ತಂಡಗಳಿಗೆ ತಲಾ 5 ಲಕ್ಷ ರೂ.ಗಳಂತೆ ಒಟ್ಟು 20 ಲಕ್ಷ ರೂ. ಬಹುಮಾನ ಮೊತ್ತವನ್ನು ವಿತರಿಸಲಾಗಿದೆ.
ಉಡುಪಿಯ ಮಣಿಪಾಲ ಇನ್ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ಖುಷಿ ಅಮರ್ ಪಾಂಚಜನ್ಯ, ಜಯಕರ್ನಾಟಕ ಬೆಂಗಳೂರು, ಇಝಾನ್ ಚೈತನ್ಯ ಫೈರ್ಸ್ ಎಚ್.ಎಂ ಎಕ್ತಾ ಹಾಗೂ ಫ್ರೆಂಡ್ಸ್ ಬೆಂಗಳೂರು ತಂಡಗಳಿಗೆ ಬಹುಮಾನ ನೀಡಲಾಯಿತು.
ಟೆನಿಸ್ ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಬಹುಮಾನ ಮೊತ್ತ ಹೊಂದಿದ್ದ ಈ ಟೂರ್ನಿಯಲ್ಲಿ ಚಾಂಪಿಯನ್‌ಗೆ 25 ಲಕ್ಷ ರೂ. ಹಾಗೂ ರನ್ನರ್ಸ್ ಅಪ್‌ಗೆ 15 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಆದರೆ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉಂಟಾದ ವಿವಾದದಿಂದ ಟೂರ್ನಿಯನ್ನು ರದ್ದುಪಡಿಸಲಾಗಿತ್ತು.ನಂತರ ಟಾಸ್ ಮೂಲಕ ವಿಜೇತ ಮತ್ತು ರನ್ನರ್ಸ್ ತಂಡ ಆಯ್ಕೆ ಮಾಡಲಾಗಿದ್ದು, ಖುಷಿ ಅಮರ್ ಪಾಂಚಜನ್ಯ ತಂಡ ಟ್ರೋಫಿ ವಿಜೇತರಾಗಿದ್ದು, ಜಯಕರ್ನಾಟಕ ಬೆಂಗಳೂರು ತಂಡ ರನ್ನರ್ಸ್ ಅಪ್ ಆಗಿದೆ.
ಇದನ್ನೂ ಓದಿ: ಐಸಿಸಿ ಟಿ20 ವಿಶ್ವಕಪ್ : ಭಾರತದೊಂದಿಗಿನ ಪಂದ್ಯ ಬಹಿಷ್ಕರಿಸಿದ ಪಾಕಿಸ್ತಾನ
ಟೂರ್ನಿ ಆಯೋಜಕ ಶಕೀಲ್ ಹೊನ್ನಾಳ ಅವರು, ಈ ಬಾರಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಮುಂದಿನ ಟೂರ್ನಿಯಲ್ಲಿ ಉಚಿತ ಪ್ರವೇಶ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘಟಕರಾದ ಕೆ.ಪಿ. ಇಬ್ರಾಹಿಂ ಕಟಪಾಡಿ, ಸಂಜೀವ ಕೋಟ್ಯಾನ್, ಶಫೀ ಅಹಮ್ಮದ್ ಉಪಸ್ಥಿತರಿದ್ದರು.



