ಅಗತ್ಯಕ್ಕಿಂತ ಹೆಚ್ಚು ORS ಕುಡಿದರೆ ಏನಾಗುತ್ತೆ ? ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇಲ್ಲಿದೆ
ಅತಿಸಾರ, ವಾಂತಿ, ಬಿಸಿಲಿನಲ್ಲಿ ಅತಿಯಾಗಿ ಬಳಲಿದ ಬಳಿಕ ದೇಹ ದಣಿಯುವುದು ಸರ್ವೇ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಬಹುತೇಕರು ಓಆರ್ಎಸ್ ಮೊರೆ ಹೋಗುತ್ತಾರೆ. ಇದನ್ನು ಕುಡಿಯುವುದರಿಂದ ನಿಮ್ಮ ದೇಹ ಕಳೆದುಕೊಂಡಿರುವ ದ್ರವದ ಅಂಶ, ಎಲೆಕ್ಟ್ರೋಲೈಟ್ಗಳನ್ನು ಪುನಃ ಪಡೆದುಕೊಳ್ಳಲು ಸಾಧ್ಯವಿದೆ. ಜಾಗತಿಕವಾಗಿ ವೈದ್ಯರೇ ಇದನ್ನು ಕುಡಿಯಲು ಅನೇಕ ಬಾರಿ ರೋಗಿಗಳಿಗೆ ಶಿಫಾರಸ್ಸು ಮಾಡುತ್ತಾರೆ.
2018ರ ಸಂಶೋಧನೆಯೊಂದು ಹೇಳಿರುವ ಪ್ರಕಾರ, 2007ರಲ್ಲಿ ಓಆರ್ಎಸ್ನಿಂದಾಗಿ ಅತಿಸಾರದಿಂದ ಮೃತಪಡುತ್ತಿದ್ದ 54 ಮಿಲಿಯನ್ ಸಾವುಗಳನ್ನು ತಡೆಯಲಾಗಿದೆ. ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಹೀಗಾಗಿ ಓಆರ್ಎಸ್ನ ಅತಿಯಾದ ಸೇವನೆಯಿಂದ ಯಾವೆಲ್ಲ ತೊಂದರೆಗಳು ಉಂಟಾಗುತ್ತದೆ ಎಂಬುದನ್ನೂ ನೀವೀಗ ತಿಳಿದುಕೊಳ್ಳಬೇಕು.
ಓಆರ್ಎಸ್ ಸೇವನೆ ಬಳಿಕ ನಿಮ್ಮ ದೇಹದಲ್ಲಿ ಏನಾಗುತ್ತೆ ?
ನಿಮ್ಮ ದೇಹವು ಕಳೆದುಕೊಂಡ ದ್ರವದ ಅಂಶವನ್ನು ಬದಲಿಸುವ ಮೂಲಕ ದೇಹದಲ್ಲಿರುವ ಸೋಡಿಯಂ, ಪೊಟ್ಯಾಸಿಯಂ ಹಾಗೂ ಗ್ಲುಕೋಸ್ನಂತಹ ಎಲೆಕ್ಟ್ರೋಲೈಟ್ಗಳನ್ನು ಸಮತೋಲನಗೊಳಿಸುವ ಕಾರ್ಯವನ್ನು ಒಆರ್ಎಸ್ ಮಾಡುತ್ತದೆ. ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಖಂಡಿತವಾಗಿಯೂ ಒಆರ್ಎಸ್ ಒಂದು ಜೀವರಕ್ಷಕವೇ ಆಗಿದೆ. ಆದರೆ ಸಮತೋಲನ ತಪ್ಪಿದರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ..!
ದೇಹದಲ್ಲಿ ಸೋಡಿಯಂ ಪ್ರಮಾಣ ಮಿತಿಮೀರುವ ಅಪಾಯ ..!
ORSನಲ್ಲಿ ಅಡಗಿರುವ ಪ್ರಮುಖ ಅಂಶಗಳಲ್ಲಿ ಸೋಡಿಯಂ ಕೂಡ ಒಂದು. ದೇಹದಲ್ಲಿ ನರಗಳ ಕಾರ್ಯ, ಸ್ನಾಯುಗಳ ಸಂಕೋಚನ ಹಾಗೂ ದ್ರವ ಸಮತೋಲನಕ್ಕೆ ಸೋಡಿಯಂ ಅತ್ಯಗತ್ಯ. ಆದರೆ ಓಆರ್ಎಸ್ ಅತಿಯಾದ ಸೇವನೆಯಿಂದ ನಿಮ್ಮ ದೇಹದಲ್ಲಿ ಸೋಡಿಯಂ ಅಂಶ ತೀವ್ರವಾಗಿ ಏರಿಕೆ ಕಾಣಬಹುದು. ಇದನ್ನು ಹೈಪರ್ನಾಟ್ರೀಮಿಯಾ ಎಂದು ಕರೆಯಲಾಗುತ್ತದೆ. ಇದರಿಂದ ಕೋಮಾಗೆ ಜಾರುವ ಸಾಧ್ಯತೆ ಕೂಡ ಇರುತ್ತದೆ. ಶಿಶುಗಳಲ್ಲಿ, ನರ ದೌರ್ಬಲ್ಯ ಹೊಂದಿರುವವರು ಹಾಗೂ ವೃದ್ಧರಲ್ಲಿ ಈ ಅಪಾಯ ಜಾಸ್ತಿ ಇರುತ್ತದೆ.
ದೇಹದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ
ORSನಲ್ಲಿ ಗ್ಲುಕೋಸ್ ಅಂಶ ಕೂಡ ಅಡಗಿದೆ. ಇದು ನಿಮ್ಮ ದೇಹವು ನೀರನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿ. ಆದರೆ ನೀವು ಅತಿಯಾಗಿ ORS ಕುಡಿದರೆ ನಿಮ್ಮ ದೇಹದ ಸಕ್ಕರೆ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣಬಹುದು. ನೀವೇನಾದರೂ ಮಧುಮೇಹಿಯಾಗಿದ್ದರಂತೂ ಜೀವಕ್ಕೇ ಅಪಾಯ..! ಮಧುಮೇಹಿಯಲ್ಲದೇ ಹೋದಲ್ಲಿ ನೀವು ಅತಿಸಾರ ಕಡಿಮೆಯಾಗಲಿ ಎಂದು ತೆಗೆದುಕೊಂಡ ಒಆರ್ಎಸ್ನಿಂದಲೇ ಮತ್ತೆ ಅತಿಸಾರ, ಹೊಟ್ಟೆಯುಬ್ಬರ ಅಥವಾ ವಾಕರಿಕೆ ಶುರುವಾಗಬಹುದು.
ಪೋಟ್ಯಾಷಿಯಂ ಅಂಶದಲ್ಲಿ ಅಸಮತೋಲನ
ORSನಲ್ಲಿ ಪೊಟ್ಯಾಶಿಯಂ ಮತ್ತೊಂದು ಪ್ರಮುಖ ಪಾತ್ರ ವಹಿಸುವ ಅಂಶವಾಗಿದೆ. ಹೃದಯದ ಸಮರ್ಪಕ ಕಾರ್ಯ ಮತ್ತು ಸ್ನಾಯುಗಳ ನಿರ್ವಹಣೆಗೆ ಅತ್ಯಗತ್ಯ. ನಿಮ್ಮ ಹೃದಯ ಬಡಿತದ ಮೇಲೆ ನೇರ ಪರಿಣಾಮ ಬೀರುವ ಸಾಮರ್ಥ್ಯ ಇದಕ್ಕಿದೆ. ಇದರ ಅಸಮತೋಲದಿಂದಾಗಿ ನೇರವಾಗಿ ಹೃದಯಕ್ಕೆ ಅಪಾಯ ಉಂಟಾಗಬಹುದು.
ನೀವು ಜಾಸ್ತಿ ಒಆರ್ಎಸ್ ಕುಡಿದಿದ್ದೀರಿ ಎಂದು ಹೇಗೆ ತಿಳಿಯುತ್ತದೆ ?
ನೀವು ಅತಿಯಾಗಿ ಒಆರ್ಎಸ್ ಸೇವನೆ ಮಾಡಿದ್ದೀರಾ ಎಂದು ಹೇಗೆ ತಿಳಿದುಕೊಳ್ಳಬಹುದು. ನಿಮ್ಮ ಕೈ ಹಾಗೂ ಕಾಲುಗಳಲ್ಲಿ ಊತ, ಸ್ನಾಯು ದೌರ್ಬಲ್ಯ, ಅನಿಯಮಿತ ಹೃದಯ ಬಡಿತದಂತಹ ಲಕ್ಷಣಗಳು ಕಂಡುಬಂದರೆ ಎಚ್ಚರಿಕೆ ವಹಿಸಿ. ಕೂಡಲೇ ವೈದ್ಯರನ್ನು ಭೇಟಿ ಮಾಡಿ.
ಇದನ್ನೂ ಓದಿ: ಡೆಂಗ್ಯೂ ಲಸಿಕೆ ಶೀಘ್ರದಲ್ಲೇ ಮಾರುಕಟ್ಟೆಗೆ ತರಲಿದೆ ನಮ್ಮ ಭಾರತ : ಕೊನೆಯ ಹಂತದ ತಯಾರಿ ಮಾತ್ರ ಬಾಕಿ
ಸರಿಯಾದ ಕ್ರಮದಲ್ಲಿ ಓಆರ್ಎಸ್ ಕುಡಿಯುವುದು ಹೇಗೆ ?
ಮಿತಿಯಲ್ಲಿ ಕುಡಿಯುವುದು ಒಳ್ಳೆಯದು. ಪ್ಯಾಕೆಟ್ನಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸಿ. ಸ್ಯಾಚೆಟ್ನಲ್ಲಿರುವ ನಿರ್ದಿಷ್ಠ ಪ್ರಮಾಣದ ಒಆರ್ಎಸ್ಗೆ ಅಲ್ಲಿ ನಮೂದಿಸಲಾದ ನೀರಿನ ಪ್ರಮಾಣವನ್ನೇ ಸೇರಿಸಿ. ಕಡಿಮೆ ನೀರು ಹಾಕುವುದರಿಂದ ಒಆರ್ಎಸ್ ಬಲಗೊಳ್ಳಬಹುದು. ಹೀಗಾಗಿ ಮಾರ್ಗಸೂಚಿಗಳನ್ನು ಪಾಲಿಸಿಯೇ ಓಆರ್ಎಸ್ ಸೇವಿಸಿ.



