ಅಫ್ಘಾನ್ ಮೇಲೆ ಪಾಕ್ ವೈಮಾನಿಕ ದಾಳಿ: ಭಾರತದಿಂದ ತೀವ್ರ ಖಂಡನೆ; ‘ಆಕ್ರಮಣಕಾರಿ ಕೃತ್ಯ’ ಎಂದ ವಿದೇಶಾಂಗ ಇಲಾಖೆ

Pakistan Attack On Afghanistan: ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ನೆರೆಹೊರೆಯ ರಾಷ್ಟ್ರಗಳ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು ಅತಿಮುಖ್ಯ ಎಂದು ಪುನರುಚ್ಚರಿಸಿರುವ ಭಾರತ, ಪಾಕಿಸ್ತಾನವು ತನ್ನ ಹಗೆತನದ ಧೋರಣೆಯನ್ನು ಬಿಡಬೇಕು ಎಂದು ಚಾಟಿ ಬೀಸಿದೆ.

ನವದೆಹಲಿ: ಅಫ್ಘಾನಿಸ್ತಾನದ ಗಡಿ ಭಾಗಗಳಲ್ಲಿ ಪಾಕಿಸ್ತಾನ ಇತ್ತೀಚೆಗೆ ನಡೆಸಿದ ವೈಮಾನಿಕ ದಾಳಿಯನ್ನು (Pakistan Attack On Afghanistan) ಭಾರತವು ಕಠಿಣ ಶಬ್ದಗಳಲ್ಲಿ ಖಂಡಿಸಿದೆ. ಪಾಕಿಸ್ತಾನದ ಈ ಕ್ರಮವನ್ನು ಅಫ್ಘಾನ್ ಸಾರ್ವಭೌಮತ್ವದ ಮೇಲಿನ ‘ನೇರ ಆಕ್ರಮಣಕಾರಿ ಕೃತ್ಯ’ ಎಂದು ಬಣ್ಣಿಸಿರುವ ಭಾರತ, ನಾಗರಿಕರ ಹತ್ಯೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಸಾರ್ವಭೌಮತ್ವಕ್ಕೆ ಧಕ್ಕೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಬಗ್ಗೆ ಶನಿವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, “ಅಫ್ಘಾನಿಸ್ತಾನದ ಭೂಪ್ರದೇಶದ ಮೇಲೆ ಪಾಕಿಸ್ತಾನ ನಡೆಸಿದ ದಾಳಿ ಮತ್ತು ಅಲ್ಲಿನ ನಾಗರಿಕ ಮೂಲಸೌಕರ್ಯಗಳ ನಾಶವನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ. ಅಫ್ಘಾನಿಸ್ತಾನವು ಒಂದು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರ ಎಂಬುದನ್ನು ಪಾಕಿಸ್ತಾನ ಸಹಿಸಿಕೊಳ್ಳುತ್ತಿಲ್ಲ ಎಂಬುದಕ್ಕೆ ಈ ದಾಳಿಗಳೇ ಸಾಕ್ಷಿ,” ಎಂದು ಕಿಡಿಕಾರಿದ್ದಾರೆ.

ಘಟನೆಯ ಹಿನ್ನೆಲೆ
ಪಾಕಿಸ್ತಾನದ ವಾಯುಪಡೆಯು ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿ ನಡೆಸಿದ ಈ ದಾಳಿಯಲ್ಲಿ 16ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಶೇಷವಾಗಿ ಕಾಂದಹಾರ್ ವಿಮಾನ ನಿಲ್ದಾಣದ ಸಮೀಪವಿರುವ ನಾಗರಿಕ ಮತ್ತು ವಿಶ್ವಸಂಸ್ಥೆಯ ವಿಮಾನಗಳಿಗೆ ಬಳಕೆಯಾಗುವ ಇಂಧನ ಡಿಪೋಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು. ಇದು ಅಂತರಾಷ್ಟ್ರೀಯ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಅಫ್ಘಾನ್ ಸರ್ಕಾರ ಕೂಡ ಪಾಕಿಸ್ತಾನದ ವಿರುದ್ಧ ಗುಡುಗಿದೆ.

ಇನ್ನೊಂದು ಯುದ್ಧ ಶುರು? ಉತ್ತರ ಕೊರಿಯಾದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ

ಪ್ರತಿ ದಾಳಿಯ ಎಚ್ಚರಿಕೆ
ಪಾಕಿಸ್ತಾನದ ಈ ಹಠಾತ್ ದಾಳಿಗೆ ಪ್ರತಿಯಾಗಿ ಅಫ್ಘಾನ್ ವಾಯುಪಡೆಯು ಪಾಕಿಸ್ತಾನದ ಗಡಿ ಭಾಗದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಎರಡೂ ದೇಶಗಳ ನಡುವೆ ಈಗ ‘ಮುಕ್ತ ಯುದ್ಧ’ (Open War) ಸನ್ನಿವೇಶ ನಿರ್ಮಾಣವಾಗಿದ್ದು, ಗಡಿ ಭಾಗಗಳಲ್ಲಿ ಉದ್ವಿಗ್ನತೆ ಮಿತಿಮೀರಿದೆ.

ಭಾರತದ ನಿಲುವು
ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ನೆರೆಹೊರೆಯ ರಾಷ್ಟ್ರಗಳ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು ಅತಿಮುಖ್ಯ ಎಂದು ಪುನರುಚ್ಚರಿಸಿರುವ ಭಾರತ, ಪಾಕಿಸ್ತಾನವು ತನ್ನ ಹಗೆತನದ ಧೋರಣೆಯನ್ನು ಬಿಡಬೇಕು ಎಂದು ಚಾಟಿ ಬೀಸಿದೆ.

 

[youtube https://www.youtube.com/watch?v=ApMaJ-7pro4]

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories