ನ್ಯಾಯಾಂಗ ಹೋರಾಟದಲ್ಲಿ ದರ್ಶನ್​ ಪತ್ನಿಗೆ ಗೆಲುವು: ರೇಣುಕಾಸ್ವಾಮಿ ಕೊಲೆಯಾಧಾರಿತ ಬಾಸ್​ ಸಿನಿಮಾಗೆ ಕೋರ್ಟ್ ತಡೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​ ಪತ್ನಿ ವಿಜಯಲಕ್ಷ್ಮೀಗೆ (Actor Darshan Wife Vijayalaxmi) ಕಾನೂನು ಹೋರಾಟದಲ್ಲಿ ಜಯ ದೊರಕಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಥಾಹಂದರವನ್ನೇ ಹೋಲುವಂತಿದ್ದ ಬಾಸ್​ ಸಿನಿಮಾ ಟೀಸರ್​ ಬೆನ್ನಲ್ಲೇ ಕೋರ್ಟ್ ಮೆಟ್ಟಿಲೇರಿದ್ದ ವಿಜಯಲಕ್ಷ್ಮೀ ನ್ಯಾಯಾಂಗ ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ. ಬಾಸ್​ ಸಿನಿಮಾ ರಿಲೀಸ್​ಗೆ ತಡೆ ನೀಡಿ ಕೋರ್ಟ್ ಆದೇಶಿಸಿದೆ.

ಬಾಸ್​ ಸಿನಿಮಾ ಟೀಸರ್​ ಈಗಾಗಲೇ ಬಿಡುಗಡೆಗೊಂಡಿದ್ದು, ರೇಣುಕಾಸ್ವಾಮಿ ಕೊಲೆಯ ಕತೆಯನ್ನೇ ಆಧರಿಸಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು.ಈ ಟೀಸರ್​ ವೀಕ್ಷಿಸಿದ ಬಳಿಕ ವಿಜಯಲಕ್ಷ್ಮೀ ಸಿನಿಮಾ ರಿಲೀಸ್​ಗೆ ತಡೆ ನೀಡುವಂತೆ ಆಗ್ರಹಿಸಿ ಬೆಂಗಳೂರಿನ 17ನೇ ಸಿಟಿ ಸಿವಿಲ್​ ಕೋರ್ಟ್ ಮೊರೆ ಹೋಗಿದ್ದರು.

ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಎಂ.ಅನಿತಾ, ಸಿನಿಮಾ ರಿಲೀಸ್​ ಸೇರಿದಂತೆ ಹಂಚಿಕೆ, ಓಟಿಟಿ ಸ್ಟ್ರೀಮಿಂಗ್, ಮಾಧ್ಯಮಗೋಷ್ಠಿ, ಸಂದರ್ಶನಗಳು, ಪೋಸ್ಟರ್, ಟೀಸರ್ ಸೇರಿದಂತೆ ಯಾವುದೇ ರೀತಿಯ ಪ್ರಚಾರ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಈ ಪ್ರಕರಣ ಸಂಬಂಧ ಪ್ರೊಡಕ್ಷನ್ ಕಂಪನಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸೋಷಿಯಲ್ ಮೀಡಿಯಾ ಕಂಪನಿಗಳು ಹಾಗೂ ಖಾಸಗಿ ಚಾನಲ್‌ಗಳಿಗೆ ಸಮನ್ಸ್‌ ಮತ್ತು ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಯನ್ನು ಮೇ 2ರಂದು ಮುಂದೂಡಲಾಗಿದೆ.

ಇದನ್ನೂ ಓದಿ: 25 ವರ್ಷಗಳ ಬಳಿಕ ಮತ್ತೆ ಬರ್ತಿದ್ದಾನೆ ‘ಕೋಟಿಗೊಬ್ಬ’: ದಾದಾ ಕ್ರೇಜ್‌ಗೆ ಶೋಗಳು ವಾರಕ್ಕೂ ಮುನ್ನವೇ ಹೌಸ್‌ಫುಲ್

ರೇಣುಕಸ್ವಾಮಿ ಕೊಲೆ ಪ್ರಕರಣವು ವಿಚಾರಣೆಯ ಹಂತದಲ್ಲಿದೆ. ಈ ಸಂದರ್ಭದಲ್ಲಿ ಇದೇ ಪ್ರಕರಣ ಆಧಾರಿತ ಸಿನಿಮಾ ಬಿಡುಗಡೆಯಾದರೆ ನಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ಉಂಟಾಗಲಿದೆ. ಪರೋಕ್ಷವಾಗಿ ನಮ್ಮ ಕುಟುಂಬಕ್ಕೆ ಸಂಬಂಧಿಸಿದ ಕೆಲವು ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ವಿಜಯಲಕ್ಷ್ಮೀ ದರ್ಶನ್​ ಕೋರ್ಟ್ ಎದುರು ತಮ್ಮ ಅಳಲು ತೋಡಿಕೊಂಡಿದ್ದರು. ವಿಜಯಲಕ್ಷ್ಮೀ ಮನವಿ ಪುರಸ್ಕರಿಸಿದ ಕೋರ್ಟ್​ ಇದೀಗ ಬಾಸ್​ ಸಿನಿಮಾಗೆ ತಡೆ ನೀಡಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories