ಕುಂದಾಪುರ: 50 ಪವನ್ ಚಿನ್ನ, 20 ಲಕ್ಷ ರೂ.ವರದಕ್ಷಿಣೆ ಕಿರುಕುಳ, ಪ್ರಕರಣ ದಾಖಲು

2026ರ ಫೆಬ್ರವರಿ 12ರಂದು ಆರೋಪಿ ಜುನೈದ್, ನಾನು ಹೊಸದಾಗಿ ಪೆಟ್ರೋಲ್ ಬಂಕ್ ಮಾಡುತ್ತಿದ್ದೇನೆ, ಮನೆಯಿಂದ 10 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಎಂದು ಪೀಡಿಸಿದ್ದಾನೆ.

ಕುಂದಾಪುರ ( Kundapura News) : ಮದುವೆಯ ವೇಳೆಯಲ್ಲಿ 50 ಪವನ್ ಚಿನ್ನ ಮತ್ತು 2 ಲಕ್ಷ ರೂಪಾಯಿಗಳ ಹಣ ಪಡೆದಿದ್ದರೂ ಕೂಡ, ಹೆಚ್ಚಿನ ವರದಕ್ಷಿಣೆಗಾಗಿ ನೀಡುವಂತೆ ಪೀಡಿಸಿ, ಮಹಿಳೆಯ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿದ ಆರೋಪದ ಹಿನ್ನೆಲೆಯಲ್ಲಿ ಪತಿ ಹಾಗೂ ಕುಟುಂಬಸ್ಥರ ವಿರುದ್ದ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ನಿವಾಸಿ ತಸ್ಮಾ (25 ವರ್ಷ) ಎಂಬಾಕೆಯೇ ಈ ದೌರ್ಜನ್ಯಕ್ಕೊಳಗಾಗಿದ್ದು, ತಮ್ಮ ಪತಿ ಹಾಗೂ ಕುಟುಂಬದವರ ವಿರುದ್ಧ ದೂರು ನೀಡಿದ್ದಾರೆ. ತಸ್ಮಾ ಅವರ ವಿವಾಹವು 2022ರ ಫೆಬ್ರವರಿ 24ರಂದು ಸಾಗರದ ಆವಿನಹಳ್ಳಿಯ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಜುನೈದ್ ಎಂಬವರೊಂದಿಗೆ ನೆರವೇರಿತ್ತು. ಮದುವೆಗೂ ಮುನ್ನವೇ ಆರೋಪಿಗಳು ಹಣ ಮತ್ತು ಚಿನ್ನಕ್ಕೆ ಬೇಡಿಕೆ ಇಟ್ಟಿದ್ದು, ಮದುವೆ ಸಮಯದಲ್ಲಿ 2 ಲಕ್ಷ ರೂಪಾಯಿ ಹಾಗೂ 50 ಪವನ್ ಚಿನ್ನಾಭರಣ ನೀಡಲಾಗಿತ್ತು.

ಮದುವೆಯಾದ ಬಳಿಕ ಆರೋಪಿಗಳು ನೀಡಿದ ಚಿನ್ನ ಮತ್ತು ಹಣ ಸಾಲದು ಎಂದು ಹಂಗಿಸಿ, ತಸ್ಮಾ ಅವರಿಗೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಪತಿ ಜುನೈದ್ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ದೌರ್ಜನ್ಯ ಎಸಗಿದ್ದಾನೆ. ಆರೋಪಿಗಳು ವಿವಿಧ ನೆಪಗಳನ್ನು ಒಡ್ಡಿ ತಸ್ಮಾ ಅವರಿಂದ ಹಣ ಹಾಗೂ ಚಿನ್ನಾಭರಣವನ್ನು ಸುಲಿಗೆ ಮಾಡಿದ್ದಾರೆ.

2022ರ ಸೆಪ್ಟೆಂಬರ್‌ನಲ್ಲಿ ಮನೆಗೆ ಬಂದ ಜುನೈದ್, ತಸ್ಮಾ ಅವರ 25 ಪವನ್ ಚಿನ್ನಾಭರಣವನ್ನು ಹೆದರಿಸಿ ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾನೆ.ಮತ್ತೆ ಪುನಃ 5 ಲಕ್ಷ ರೂಪಾಯಿ ನೀಡಬೇಕು, ಇಲ್ಲವಾದರೆ ಸಂಬಂಧ ಇಲ್ಲಿಗೆ ಮುಗಿಯುತ್ತದೆ ಎಂದು ಬೆದರಿಕೆ ಹಾಕಿದಾಗ, ತಸ್ಮಾ ಅವರ ತಂದೆ ಬ್ಯಾಂಕ್‌ನಲ್ಲಿ ಸಾಲ ಮಾಡಿ ಹಣ ನೀಡಿದ್ದರು. ನಂತರವೂ ಮತ್ತೆ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಾಗ ಮತ್ತೊಮ್ಮೆ ಸಾಲ ಮಾಡಿ ಹಣ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Also Read : Udupi: ಉಡುಪಿಯ ಕುಖ್ಯಾತ ‘ಗರುಡ ಗ್ಯಾಂಗ್’ ಸದಸ್ಯನಿಗೆ ಗೂಂಡಾ ಕಾಯ್ದೆ

2026ರ ಫೆಬ್ರವರಿ 12ರಂದು ಆರೋಪಿ ಜುನೈದ್, ನಾನು ಹೊಸದಾಗಿ ಪೆಟ್ರೋಲ್ ಬಂಕ್ ಮಾಡುತ್ತಿದ್ದೇನೆ, ಮನೆಯಿಂದ 10 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಎಂದು ಪೀಡಿಸಿದ್ದಾನೆ. ತಸ್ಮಾ ನಿರಾಕರಿಸಿದಾಗ ಮನೆಯವರ ಎದುರೇ ಆಕೆಯ ಮೇಲೆ ಹಲ್ಲೆ ನಡೆಸಲಾಗಿದ್ದು, ಇತರ ಆರೋಪಿಗಳು ಬೆಂಬಲವಾಗಿ ನಿಂತು ಹೊಡೆಯುವಂತೆ ಹುರಿದುಂಬಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳ ಕಿರುಕುಳ ಮಿತಿಮೀರಿದ್ದು, 2026ರ ಮಾರ್ಚ್ 8ರಂದು ತಸ್ಮಾ ಅವರ ಮನೆಗೆ ಬಂದ ಆರೋಪಿಗಳು, 10 ಲಕ್ಷ ರೂಪಾಯಿ ನೀಡದಿದ್ದರೆ ತಲಾಖ್ ನೀಡಬೇಕು ಅಥವಾ ಕೊಂದು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. ನಂತರ ಮೇ 2ರಂದು ಸಾಗರದಲ್ಲಿರುವ ಅಜ್ಜಿ ಮನೆಗೆ ಹೋದಾಗಲೂ ಆರೋಪಿಗಳು ತಸ್ಮಾ ಅವರಿಗೆ ಬೆದರಿಕೆ ಮುಂದುವರಿಸಿದ್ದಾರೆ. ಈ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Also Read : ಹೆಂಡತಿಯ ಕಾಯಿಲೆ ಗುಣಪಡಿಸುವ ಆಸೆ ತೋರಿಸಿ 12 ಲಕ್ಷ ರೂ. ಪಂಗನಾಮ: ಉಡುಪಿಯಲ್ಲಿ ನಡೆದ ಈ ಘಟನೆ ನಿಮಗೊಂದು ಪಾಠ

kundapura dowry harassment case

Related Stories