ನಿಮ್ಮ ಬ್ಯಾಂಕ್ ಕೆಲಸ ಬಾಕಿ ಇದೆಯೇ? ಮೇ 25 ಕ್ಕಿಂತ ಮೊದಲೇ ಪೂರೈಸಿಕೊಳ್ಳಿ – ಎಸ್ಬಿಐ ನೌಕರರ ಮುಷ್ಕರ ಫಿಕ್ಸ್
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್ಬಿಐ ನೌಕರರ ಒಕ್ಕೂಟವು ಮೇ 25 ಮತ್ತು 26 ರಂದು ಎರಡು ದಿನಗಳ ಕಾಲ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ.

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಾಗಿದ್ದರೆ, ನಿಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಇಂದೇ ಯೋಜಿಸಿಕೊಳ್ಳುವುದು ಉತ್ತಮ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್ಬಿಐ ನೌಕರರ ಒಕ್ಕೂಟವು ಮೇ 25 ಮತ್ತು 26 ರಂದು ಎರಡು ದಿನಗಳ ಕಾಲ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ.
ಎಸ್ಬಿಐ ನೌಕರರ 2 ದಿನಗಳ ಮುಷ್ಕರದಿಂದಾಗಿ ಬ್ಯಾಂಕ್ ಸೇವೆಯಲ್ಲಿ 4 ದಿನಗಳ ವ್ಯತ್ಯಯ ಕಂಡುಬರಲಿದೆ. ಹೌದು..! ಮೇ 23ರಂದು ನಾಲ್ಕನೇ ಶನಿವಾರ ಹಾಗೂ ಮೇ 24ರಂದು ಭಾನುವಾರ ಇರುವುದರಿಂದ ಬ್ಯಾಂಕುಗಳಿಗೆ ರಜೆ ಇರಲಿದೆ. ಇದರ ಬೆನ್ನಲ್ಲೇ ಮೇ 25 ಮತ್ತು 26ರಂದು ನೌಕರರು ಮುಷ್ಕರ ನಡೆಸುತ್ತಿರುವುದರಿಂದ, ಸತತ ನಾಲ್ಕು ದಿನಗಳ ಕಾಲ ಶಾಖೆಗಳಲ್ಲಿ ವಹಿವಾಟು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಒಂದು ವೇಳೆ ಮುಷ್ಕರದ ದಿನಗಳಲ್ಲಿ ರಜೆ ಬಂದರೆ, ಮೇ 27ರಂದು ಪ್ರತಿಭಟನೆ ಮುಂದುವರಿಯಲಿದೆ ಎಂದು ಆಲ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಫೆಡರೇಶನ್ ತಿಳಿಸಿದೆ.
ಇದನ್ನೂ ಓದಿ : ಮೈಸೂರು ಪಾಲಿಕೆಯ ‘ಕನ್ನಡಿ’ ತಂತ್ರ: ಬಹಿರಂಗ ಮೂತ್ರ ವಿಸರ್ಜಿಸುವವರಿಗೆ ಇನ್ನು ‘ಮುಖದರ್ಶನ’ ಭಾಗ್ಯ!
ಪ್ರತಿಭಟನೆಗೆ ಕಾರಣಗಳೇನು ಅನ್ನೋದನ್ನ ನೋಡೋದಾದ್ರೆ, ಕಳೆದ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸುಮಾರು 16 ಬೇಡಿಕೆಗಳ ಈಡೇರಿಕೆಗಾಗಿ ನೌಕರರು ಈ ಹಾದಿ ಹಿಡಿದಿದ್ದಾರೆ. ಪ್ರಮುಖವಾಗಿ ಕಳೆದ ಮೂರು ದಶಕಗಳಿಂದ ಸ್ಥಗಿತಗೊಂಡಿರುವ ಸಂದೇಶವಾಹಕರು ಹಾಗೂ ಸಶಸ್ತ್ರ ಕಾವಲುಗಾರರ ನೇಮಕಾತಿಯನ್ನು ತಕ್ಷಣವೇ ಆರಂಭಿಸಬೇಕು. ಶಾಶ್ವತ ಸ್ವರೂಪದ ಕೆಲಸಗಳನ್ನು ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು.ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ನಡುವಿನ ವೇತನ ಪರಿಷ್ಕರಣೆಯಲ್ಲಿನ ಅಸಮಾನತೆಯನ್ನು ಸರಿಪಡಿಸಬೇಕು.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಸುಧಾರಣೆಗಳನ್ನು ತರಬೇಕು ಎಂಬುದು ಎಸ್ಬಿಐ ನೌಕರರ ಆಗ್ರಹವಾಗಿದೆ.ಮುಷ್ಕರದಿಂದಾಗಿ ಬ್ಯಾಂಕ್ ಶಾಖೆಗಳಲ್ಲಿ ನಗದು ಜಮೆ, ವಿತ್ಡ್ರಾ ಹಾಗೂ ಚೆಕ್ ಕ್ಲಿಯರೆನ್ಸ್ನಂತಹ ಸೇವೆಗಳಲ್ಲಿ ವಿಳಂಬವಾಗಬಹುದು. ಆದರೆ, ಡಿಜಿಟಲ್ ಪಾವತಿಗಳಾದ ಯುಪಿಐ (UPI), ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.



