ಈ ಲಕ್ಷಣಗಳು ಕಂಡುಬಂದರೆ ಎಚ್ಚರ..! ಕಿಡ್ನಿ ಸ್ಟೋನ್‌ ಅಪಾಯದಿಂದ ಹೊರಬರಲು ಈ ಸಲಹೆ ಪಾಲಿಸಿ

ಕಿಡ್ನಿ ಸ್ಟೋನ್‌ ಅಥವಾ ಮೂತ್ರಪಿಂಡದ ಕಲ್ಲು ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಬಳಲುತ್ತಿರುವ ಗಂಭೀರ ಕಾಯಿಲೆ. ಆದ್ರೆ ಕಿಡ್ನಿ ಸ್ಟೋನ್‌ಗೆ ನಿಜವಾದ ಕಾರಣ ಹಾಗೂ ಪರಿಹಾರವೇನು? ಇಲ್ಲಿದೆ ಓದಿ.

ಒಂದು ಕಾಲದಲ್ಲಿ ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದ ಕಲ್ಲು ಪುರುಷರಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತಿದ್ದವು. ಅದರಲ್ಲೂ 50 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಹಾಗಲ್ಲ, ಎಲ್ಲ ವಯಸ್ಸಿನವರಲ್ಲೂ ಕಿಡ್ನಿ ಸ್ಟೋನ್‌ ಕಾಣಿಸಿಕೊಳ್ಳುತ್ತಿದೆ. ಮಹಿಳೆಯರಲ್ಲಿ ಇದರ ಸಮಸ್ಯೆ ತುಸು ಹೆಚ್ಚಾಗಿ ಕಂಡುಬರುತ್ತಿವೆ. ಮೇಲ್ನೋಟಕ್ಕೆ ಇದಕ್ಕೆ ಕಾರಣ ಬದಲಾದ ಜೀವನಶೈಲಿ ಎಂಬುದಾದರೂ ಸಮಸ್ಯೆ ಮಾತ್ರ ಗಂಭೀರವಾಗಿದೆ. ಆರೋಗ್ಯ ತಜ್ಞರ ಪ್ರಕಾರ ಮೂತ್ರನಾಳದ ಸೋಂಕು, ಮೂತ್ರಪಿಂಡದ ಕಾಯಿಲೆಗಳಿಂದ ಬಳಲುವುದು, ಥೈರಾಯ್ಡ್ ಸಮಸ್ಯೆಗಳಿರುವುದು, ಕಡಿಮೆ ನೀರು ಕುಡಿಯುವುದು, ಅತಿಯಾಗಿ ತಿನ್ನುವುದು, ಬಿಸಿ ವಾತಾವರಣದಲ್ಲಿ ವಾಸಿಸುವುದು, ಹೆಚ್ಚು ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇವಿಸುವುದು, ಹೆಚ್ಚು ವಿಟಮಿನ್ ಡಿ ತೆಗೆದುಕೊಳ್ಳುವುದು ಮತ್ತು ಹೆಚ್ಚು ಯೂರಿಕ್ ಆಮ್ಲವನ್ನು ಉತ್ಪಾದಿಸುವ ಆಹಾರವನ್ನು ಸೇವಿಸುವುದು ಹೀಗೆ ಮುಂತಾದ ಕಾರಣಗಳಿಂದ ಕಿಡ್ನಿ ಸ್ಟೋನ್‌ ಸಮಸ್ಯೆ ಉಂಟಾಗುತ್ತದೆ. ಅಸಾಧ್ಯ ನೋವನ್ನುಂಟು ಮಾಡುವ ಈ ಕಲ್ಲುಗಳ ಬಗ್ಗೆ ರೂಪುಗೊಳ್ಳುತ್ತವೆ? ಏನೇನು ಎಚ್ಚರಿಕೆ ವಹಿಸಬೇಕು ಎಂದು ನೋಡೋಣ.

ಕಿಡ್ನಿ ಸ್ಟೋನ್‌ ಹೇಗೆ ರೂಪುಗೊಳ್ಳುತ್ತದೆ?

ಕಿಡ್ನಿ ಸ್ಟೋನ್‌ ಸಾಮಾನ್ಯವಾಗಿ 4 ಬಗೆಯಲ್ಲಿ ಉಂಟಾಗುತ್ತದೆ. ಮೊದಲನೆಯದು ನಾವು ಸೇವಿಸುವ ಆಹಾರದಲ್ಲಿರುವ ಕ್ಯಾಲ್ಸಿಯಂನಿಂದ ರೂಪುಗೊಳ್ಳುತ್ತದೆ. ಎರಡನೇಯದು ಆಕ್ಸಲೇಟ್‌ ಮತ್ತು ಫಾಸ್ಫೇಟ್‌ಗಳಿಂದ ರೂಪುಗೊಳ್ಳುತ್ತವೆ. ಮೂರನೇಯದು ಕೆಲವು ಸಂದರ್ಭಗಳಲ್ಲಿ ಕ್ಯಾಲ್ಸಿಯಂ ಇತರ ಸಂಯುಕ್ತಗೊಳಿಂದಿಗೆ ಸೇರಿ ಕಲ್ಲುಗಳನ್ನು ರೂಪಿಸುತ್ತದೆ. ಕೊನೆಯದಾಗಿ ಕಿಡ್ನಿಯಲ್ಲಿ ತ್ಯಾಜ್ಯವು ದೀರ್ಘಕಾಲದ ವರೆಗೆ ಉಳಿದಾಗ ಅಲ್ಲಿನ ಮೂತ್ರದಲ್ಲಿರುವ ಎಲ್ಲಾ ವಸ್ತುಗಳು ಸೇರಿ ಘನ ವಸ್ತುವನ್ನು ರೂಪಿಸುತ್ತವೆ. ಅವು ಕಲ್ಲುಗಳಂತೆ ಕಾಣುತ್ತವೆ. ಕಿಡ್ನಿ ಸ್ಟೋನ್‌ಗಳು ಮರಳಿನ ಕಣದಷ್ಟು ಚಿಕ್ಕದರಿಂದ ಹಿಡಿದು ಗಾಲ್ಫ್‌ ಚೆಂಡಿನಷ್ಟು ದೊಡ್ಡ ಗಾತ್ರದವರೆಗೆ ಇರುತ್ತವೆ.

ಕಿಡ್ನಿ ಸ್ಟೋನ್‌ ಲಕ್ಷಣಗಳು ಏನು?

ಸಣ್ಣ ಕಲ್ಲುಗಳು ನಮ್ಮ ದೇಹದ ಮೇಲೆ ಯಾವುದೇ ಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಅವು ಸಾಮಾನ್ಯವಾಗಿ ಮೂತ್ರ ವಿಸರ್ಜನೆಯಲ್ಲಿ ಹೊರಬರುತ್ತವೆ. ಅದು ನಮಗೆ ಗೊತ್ತಾಗುವುದೂ ಇಲ್ಲ. ಆದರೆ ದೊಡ್ಡ ಕಲ್ಲುಗಳು ವಿಪರೀತ ನೋವನ್ನು ಉಂಟುಮಾಡುತ್ತವೆ. ಹೊಟ್ಟೆಯ ಕೆಳಗಿನ ಬಲ ಅಥವಾ ಎಡಭಾಗದಲ್ಲಿ ನೋವು ಇರುತ್ತದೆ. ಅದೇ ಪ್ರದೇಶದಲ್ಲಿ ಬೆನ್ನಿನಲ್ಲಿಯೂ ನೋವು ಇರುತ್ತದೆ. ಈ ನೋವು ಹೇಗಿರುತ್ತದೆ ಎಂದರೆ… ಆ ಪ್ರದೇಶವನ್ನು ಸೂಜಿ ಚುಚ್ಚಿದಂತೆ ಭಾಸವಾಗುತ್ತದೆ. ಈ ನೋವಿನ ಜೊತೆಗೆ, ಮೂತ್ರಪಿಂಡದ ಕಲ್ಲುಗಳಿರುವ ಜನರಲ್ಲಿ ಅನೇಕ ಲಕ್ಷಣಗಳು ಕಂಡುಬರುತ್ತವೆ. ವಾಕರಿಕೆ, ವಾಂತಿ, ಶೀತ ಮತ್ತು ಹೊಟ್ಟೆ ಉಬ್ಬರ ಇವುಗಳ ಲಕ್ಷಣಗಳಾಗಿವೆ. ಮೂತ್ರ ವಿಸರ್ಜಿಸುವಾಗ ನೋವು ಮತ್ತು ಸುಟ್ಟ ಅನುಭವವಾಗುತ್ತದೆ. ಕೆಲವರಿಗೆ ಮೂತ್ರದಲ್ಲಿ ರಕ್ತವೂ ಬರುತ್ತದೆ.

ಇದನ್ನೂ ಓದಿ : ತೂಕ ಹೆಚ್ಚಾಗುವ ಭಯದಿಂದ ಅನ್ನವನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗಿಲ್ಲ ; ಆದರೆ ಈ ಒಂದು ಕೆಲಸ ತಪ್ಪದೇ ಮಾಡಿ

ಏನು ಎಚ್ಚರಿಕೆ ತೆಗೆದುಕೊಳ್ಳಬೇಕು?

* ಮೂತ್ರಪಿಂಡದ ಕಲ್ಲುಅಥವಾ ಕಿಡ್ನಿ ಸ್ಟೋನ್ ಗಳಿರುವ ಜನರು ತಮ್ಮ ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳಬೇಕು ಮತ್ತು ತಮ್ಮ ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

* ವಿಶೇಷವಾಗಿ ಕ್ಯಾಲ್ಸಿಯಂ ಹೊಂದಿರುವ ಆಹಾರವನ್ನು ತ್ಯಜಿಸಬೇಕು ಅಥವಾ ಕಡಿಮೆ ಮಾಡಬೇಕು.

* ಕ್ಯಾಲ್ಸಿಯಂ ಭರಿತ ತರಕಾರಿಗಳು, ಟೊಮೆಟೊಗಳು, ಹಾಲು, ಹಾಲಿನ ಉತ್ಪನ್ನಗಳು, ಚಹಾ ಮತ್ತು ಕಾಫಿಯನ್ನು ಸೇವಿಸಬಾರದು.

* ಸಾಕಷ್ಟು ನೀರು ಕುಡಿಯಬೇಕು. ಬಾರ್ಲಿಯನ್ನು ನೀರಿನಲ್ಲಿ ಕುದಿಸಿ ಕುಡಿದರೆ, ಕಿಡ್ನಿ ಸ್ಟೋನ್‌ ಸಮಸ್ಯೆಯಿಂದ ಸುಲಭವಾಗಿ ಮುಕ್ತರಾಗಬಹುದು.

* ಮೂತ್ರವನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳಬಾರದು. ಹಾಗೆ ಮಾಡುವುದರಿಂದ ಕಲ್ಲುಗಳ ಅಪಾಯವು ಮತ್ತಷ್ಟು ಹೆಚ್ಚಾಗುತ್ತದೆ.

* ಮೂತ್ರಪಿಂಡದ ಕಲ್ಲುಗಳಿರುವ ಜನರು ವೈದ್ಯರ ಸೂಚನೆಗಳನ್ನು ಪಾಲಿಸದಿದ್ದರೆ, ಕಲ್ಲುಗಳು ದೊಡ್ಡದಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ವೈದ್ಯರ ಸಲಹೆ ಪಾಲಿಸುವುದು ಕಡ್ಡಾಯವಾಗಿದೆ.

*ಒಮ್ಮೆ ಕಲ್ಲುಗಳು ಹೊರಬಂದ ನಂತರ, ಅವು ಮತ್ತೆ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಕಲ್ಲುಗಳಿರುವವರು ತಮ್ಮ ಆಹಾರದ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು ಮತ್ತು ಆಗಾಗ ವೈದ್ಯರ ಸಲಹೆ ಹಾಗೂ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories