ಮದುವೆ ಮನೆಯಲ್ಲಿ ಸೂತಕದ ಛಾಯೆ: ಕೂಲರ್ ಗಾಳಿಗಾಗಿ ನಡೆದ ಜಗಳಕ್ಕೆ ಓರ್ವ ಬಲಿ!
ಮದುವೆ ಮನೆಯಲ್ಲಿ ತಂಗಿದ್ದ ಅತಿಥಿಗಳು ರಾತ್ರಿ ಕೂಲರ್ ಗಾಳಿಗಾಗಿ ಕಿತ್ತಾಡಿಕೊಂಡಿದ್ದು, ಈ ಜಗಳ ಓರ್ವನ ಸಾವಿನಲ್ಲಿ ಅಂತ್ಯಗೊಂಡಿದೆ

ದೇಶಾದ್ಯಂತ ಸೂರ್ಯನ ಪ್ರಖರತೆ ಮಿತಿಮೀರಿದೆ. ಹೀಗಾಗಿ ಇಡೀ ದಿನ ಸೆಖೆಯಲ್ಲಿ ಜನತೆ ಬೇಯುತ್ತಿದ್ದಾರೆ. ಆದರೆ ಇದೇ ಕಾರಣಕ್ಕೆ ಮದುವೆ ಮನೆಯೊಂದರಲ್ಲಿ ರಾದ್ಧಾಂತವೇ ನಡೆದು ಹೋಗಿದೆ. ಮದುವೆ ಮನೆಯಲ್ಲಿ ತಂಗಿದ್ದ ಅತಿಥಿಗಳು ರಾತ್ರಿ ಕೂಲರ್ ಗಾಳಿಗಾಗಿ ಕಿತ್ತಾಡಿಕೊಂಡಿದ್ದು, ಈ ಜಗಳ ಓರ್ವನ ಸಾವಿನಲ್ಲಿ ಅಂತ್ಯಗೊಂಡಿದೆ. ಉತ್ತರ ಪ್ರದೇಶದ ಅಜಮ್ಗಢದಲ್ಲಿ ಈ ಘಟನೆ ಸಂಭವಿಸಿದೆ. ಜಿಯಾನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಮದುವೆ ಸಮಾರಂಭ ನಡೆಯುತ್ತಿತ್ತು, ರಾತ್ರಿ ವೇಳೆ ಕೂಲರ್ ಗಾಳಿಗಾಗಿ ವಧು – ವರರ ಕುಟುಂಬಸ್ಥರ ನಡುವೆ ವಾಗ್ವಾದ ಏರ್ಪಟ್ಟಿದೆ ಎನ್ನಲಾಗಿದೆ .
ವಧು ಹಾಗೂ ವರ ಕಡೆಯವರು ಕೂಲರ್ ಗಾಳಿ ತಾವು ಮಲಗಿರುವ ಕಡೆ ಜಾಸ್ತಿ ಬರಬೇಕು ಎಂದು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ಜಗಳ ತಾರಕಕ್ಕೇರಿದ್ದು ಪರಸ್ಪರ ಕೈ ಮಿಲಾಯಿಸುವ ಹಂತ ತಲುಪಿದೆ. ಈ ಘರ್ಷಣೆಯಲ್ಲಿ 26 ವರ್ಷದ ಅಮೀರ್ ಚಂದ್ರ ಸಹಾನಿ ಎಂಬ ವ್ಯಕ್ತಿ ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಸಿಲಿಂಡರ್ ಬುಕ್ಕಿಂಗ್ಗೆ ಹೊಸ ರೂಲ್ಸ್: ಇಂದಿನಿಂದ ಜಾರಿಯಾಗಲಿರುವ ಈ 5 ನಿಯಮಗಳ ಬಗ್ಗೆ ನಿಮಗೆ ಗೊತ್ತಾ ?
ಈ ನಾಲ್ವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ . ಗಾಯಗೊಂಡವರನ್ನು ವರನ ಕಡೆಯವರಾದ ರಾಜ್ಕುಮಾರ್ ಸಹಾನಿ, ಅಭಿಲಾಷ್ ಸಹಾನಿ ಮತ್ತು ಸಾಹಿಲ್ ಯಾದವ್ ಎಂದು ಗುರುತಿಸಲಾಗಿದೆ.
ಅಜಮ್ಗಢ ಪೊಲೀಸರು ಈ ವಿಚಾರವಾಗಿ ಮಾತನಾಡಿದ್ದು, ಗಲಾಟೆಯಲ್ಲಿ ಭಾಗಿಯಾಗಿದ್ದ ಕೆಲವು ಜನರನ್ನು ಅವರು ಬಂಧಿಸಿದ್ದಾರೆ. ಮೃತರ ತಂದೆ ಕೂಡ ಎಫ್ಐಆರ್ ದಾಖಲಿಸಿದ್ದಾರೆ. ಈ ವಿಷಯದಲ್ಲಿ ತನಿಖೆ ನಡೆಯುತ್ತಿದೆ. ಸದ್ಯ ಘಟನಾ ಸ್ಥಳದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.



