ಸಿಲಿಂಡರ್ ಬುಕ್ಕಿಂಗ್‌ಗೆ ಹೊಸ ರೂಲ್ಸ್: ಇಂದಿನಿಂದ ಜಾರಿಯಾಗಲಿರುವ ಈ 5 ನಿಯಮಗಳ ಬಗ್ಗೆ ನಿಮಗೆ ಗೊತ್ತಾ ?
ಇಂದಿನಿಂದ ಅನ್ವಯಗೊಳ್ಳುವಂತೆ ದೇಶಾದ್ಯಂತ ಗೃಹಬಳಕೆಯ ಸಿಲಿಂಡರ್ ಹೊಂದಿರುವವರು ಈ 5 ಮಹತ್ವದ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ವಾಣಿಜ್ಯ ಸಿಲಿಂಡರ್ಗಳ ದರದಲ್ಲಿ ಏಕಾಏಕಿ ಏರಿಕೆ ಕಂಡುಬಂದಿರುವುದು ಒಂದೆಡೆಯಾದರೆ ಇತ್ತ ಗೃಹಬಳಕೆ ಸಿಲಿಂಡರ್ಗಳ ದರದಲ್ಲಿ ಏರಿಕೆ ಕಂಡುಬರದಿದ್ದರೂ ಇಂದಿನಿಂದ ಜಾರಿಯಾಗುವಂತೆ ಐದು ಕಡ್ಡಾಯ ನಿಯಮಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಇಂದಿನಿಂದ ಅನ್ವಯಗೊಳ್ಳುವಂತೆ ದೇಶಾದ್ಯಂತ ಗೃಹಬಳಕೆಯ ಸಿಲಿಂಡರ್ ಹೊಂದಿರುವವರು ಈ ಐದು ಮಹತ್ವದ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಸಂಭವಿಸಿದ ತೈಲ ಬಿಕ್ಕಟ್ಟು ಶಮನಕ್ಕಾಗಿ ದೇಶಾದ್ಯಂತ ಸಿಲಿಂಡರ್ ವಿತರಣೆಯಲ್ಲಿ ಪಾರದರ್ಶಕತೆ ತರಲಾಗುತ್ತಿದೆ . ಇದೇ ಉದ್ದೇಶದಿಂದ ಐದು ಮಹತ್ವದ ನಿಯಮಗಳು ಜಾರಿಗೆ ಬಂದಿದೆ.
ಎಲ್ಪಿಜಿ ಸಿಲಿಂಡರ್ ವಿತರಣೆಯಲ್ಲಿ ಸಂಪೂರ್ಣ ಡಿಜಿಟಲೀಕರಣ ಮಾಡಲಾಗಿದೆ. ಇನ್ಮುಂದೆ ಗ್ಯಾಸ್ ಸಿಲಿಂಡರ್ಗಳಿಗಾಗಿ ಗ್ಯಾಸ್ ಏಜೆನ್ಸಿಗೆ ಅಲೆಯುವ ಹಾಗಿಲ್ಲ. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ಅಥವಾ ವಾಟ್ಸಾಪ್ ಸಂದೇಶಗಳನ್ನು ಕಳಿಸುವ ಮೂಲಕವೇ ಗ್ಯಾಸ್ ಸಿಲಿಂಡರ್ ಬುಕ್ ಮಾಡಬೇಕು.
ಇದನ್ನೂ ಓದಿ : ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ! ವಾಣಿಜ್ಯ ಸಿಲಿಂಡರ್ ದರ ಹೆಚ್ಚಳ; ಅಕ್ರಮ ದಂಧೆಗೆ ಬೀಳಲಿದೆ ಬ್ರೇಕ್!
ಇನ್ನು ಒಟಿಪಿ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದ್ದು, ಇಂದಿನಿಂದ ಒಟಿಪಿ ಪ್ರಕ್ರಿಯೆ ಕಡ್ಡಾಯಗೊಂಡಿದೆ. ನಿಮ್ಮ ಮನೆ ಬಾಗಿಲಿಗೆ ಬರುವ ಸಿಲಿಂಡರ್ ವಿತರಕರಿಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದಿರುವ OTP ನೀಡದ ಹೊರತು ನಿಮಗೆ ಸಿಲಿಂಡರ್ ವಿತರಣೆ ಆಗುವುದಿಲ್ಲ.ಇನ್ನು ಎರಡು ಸಿಲಿಂಡರ್ಗಳ ನಡುವಿನ ಬುಕ್ಕಿಂಗ್ ಅವಧಿಯನ್ನೂ ಕಡ್ಡಾಯಗೊಳಿಸಲಾಗಿದೆ. ನಗರ ಪ್ರದೇಶದ ನಿವಾಸಿಗಳು 25 ದಿನಗಳ ಬಳಿಕ ಹಾಗೂ ಗ್ರಾಮೀಣ ಪ್ರದೇಶದ ನಿವಾಸಿಗಳು ಸಿಲಿಂಡರ್ ಪಡೆದ 45 ದಿನಗಳ ಬಳಿಕ ಮತ್ತೊಂದು ಸಿಲಿಂಡರ್ ಬುಕ್ ಮಾಡಬೇಕಿದೆ.
ಇನ್ನು ಪೈಪ್ಡ್ ಗ್ಯಾಸ್ ವ್ಯವಸ್ಥೆ ಹೊಂದಿರುವವರು ಯಾವುದೇ ಕಾರಣಕ್ಕೂ ಎಲ್ಪಿಜಿ ಸಿಲಿಂಡರ್ ಬಳಕೆ ಮಾಡುವಂತಿಲ್ಲ. ಎರಡು ಕನೆಕ್ಷನ್ ಹೊಂದಿರುವವರು ಎರಡರಲ್ಲಿ ಯಾವುದಾದರೊಂದು ಸಿಲಿಂಡರ್ ಕನೆಕ್ಷನ್ ಬಿಟ್ಟು ಕೊಡುವಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಸಿದೆ.
ಗ್ಯಾಸ್ ಗ್ರಾಹಕರು ತಮ್ಮ ಆಧಾರ್ ಕಾರ್ಡ್ ಅಥವಾ ಬಯೋಮೆಟ್ರಿಕ್ ವಿವರಗಳೊಂದಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇಲ್ಲವಾದಲ್ಲಿ ಗ್ಯಾಸ್ ಬುಕಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ಸಬ್ಸಿಡಿ ಹಣ ಕೂಡ ಬಂದ್ ಆಗಲಿದೆ.



