ಲಾಕ್ ಡೌನ್ ನಲ್ಲಿ ಸಿಲುಕಿರುವವರ ನೆರವಿಗೆ ರೈಲು ಸಂಚಾರ !

0

ನವದೆಹಲಿ : ಲಾಕ್ ಡೌನ್ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು, ವಿದ್ಯಾರ್ಥಿಗಳನ್ನು ಅವರ ಊರುಗಳಿಗೆ ತಲುಪಿಸೋ ನಿಟ್ಟಿನಲ್ಲಿ ರೈಲು ಸಂಚಾರ ಆರಂಭಗೊಂಡಿದೆ. ಕೇಂದ್ರ ಗೃಹ ಇಲಾಖೆಯ ಸೂಚನೆಯ ಮೇರೆಗೆ ತೆಲಂಗಾಣ ಹಾಗೂ ಜಾರ್ಖಂಡ್ ನಡುವೆ ಇಂದು ರೈಲು ಸಂಚರಿಸಿದ್ದು, ಕರ್ನಾಟಕ – ಕೇರಳ, ಕರ್ನಾಟಕ – ಮುಂಬೈ ಸೇರಿದಂತೆ ವಿವಿಧ ರಾಜ್ಯಗಳ ನಡುವೆ ರೈಲು ಸಂಚರಿಸಲಿದೆ. ಹೀಗಾಗಿ ಹೊರ ರಾಜ್ಯಗಳಲ್ಲಿ ಸಿಲುಕಿರುವವರು ನಿಟ್ಟುಸಿರು ಬಿಡುವಂತಾಗಿದೆ.

ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಹೀಗಾಗಿ ಕಾರ್ಮಿಕರು, ವಿದ್ಯಾರ್ಥಿಗಳು ಹೊರ ರಾಜ್ಯಗಳಲ್ಲಿ ಬಂಧಿಯಾಗಿದ್ದಾರೆ.

ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಅನುಕೂಲ ಕಲ್ಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಮಾಡಿದ್ದರು. ಇದೀಗ ಎರಡನೇ ಹಂತದ ಲಾಕ್ ಡೌನ್ ಆದೇಶ ಮುಕ್ತಾಯಗೊಳ್ಳುತ್ತಿರೋ ಬೆನ್ನಲೇ ಕೇಂದ್ರ ಸರಕಾರ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದೆ.

ಅದ್ರಲ್ಲೂ ಕರ್ನಾಟಕದ ಹಲವು ಮಂದಿ ಮುಂಬೈ, ಕೇರಳ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿಲುಕಿದ್ದಾರೆ. ಹೀಗಾಗಿ ರೈಲು ಸಂಚಾರ ನಡೆಸೋದಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಈ ಕುರಿತು ಕೇಂದ್ರ ಸರಕಾರ ರಾಜ್ಯ ಸರಕಾರಗಳ ಚರ್ಚೆ ನಡೆಸಿದೆ. ರೈಲುಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚನೆಯನ್ನು ನೀಡಿದ್ದಾರೆ.

Leave A Reply

Your email address will not be published.