ನ್ಯಾಯಾಂಗ ಹೋರಾಟದಲ್ಲಿ ದರ್ಶನ್ ಪತ್ನಿಗೆ ಗೆಲುವು: ರೇಣುಕಾಸ್ವಾಮಿ ಕೊಲೆಯಾಧಾರಿತ ಬಾಸ್ ಸಿನಿಮಾಗೆ ಕೋರ್ಟ್ ತಡೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ (Actor Darshan Wife Vijayalaxmi) ಕಾನೂನು ಹೋರಾಟದಲ್ಲಿ ಜಯ ದೊರಕಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಥಾಹಂದರವನ್ನೇ ಹೋಲುವಂತಿದ್ದ ಬಾಸ್ ಸಿನಿಮಾ ಟೀಸರ್ ಬೆನ್ನಲ್ಲೇ ಕೋರ್ಟ್ ಮೆಟ್ಟಿಲೇರಿದ್ದ ವಿಜಯಲಕ್ಷ್ಮೀ ನ್ಯಾಯಾಂಗ ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ. ಬಾಸ್ ಸಿನಿಮಾ ರಿಲೀಸ್ಗೆ ತಡೆ ನೀಡಿ ಕೋರ್ಟ್ ಆದೇಶಿಸಿದೆ.
ಬಾಸ್ ಸಿನಿಮಾ ಟೀಸರ್ ಈಗಾಗಲೇ ಬಿಡುಗಡೆಗೊಂಡಿದ್ದು, ರೇಣುಕಾಸ್ವಾಮಿ ಕೊಲೆಯ ಕತೆಯನ್ನೇ ಆಧರಿಸಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು.ಈ ಟೀಸರ್ ವೀಕ್ಷಿಸಿದ ಬಳಿಕ ವಿಜಯಲಕ್ಷ್ಮೀ ಸಿನಿಮಾ ರಿಲೀಸ್ಗೆ ತಡೆ ನೀಡುವಂತೆ ಆಗ್ರಹಿಸಿ ಬೆಂಗಳೂರಿನ 17ನೇ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು.
ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಎಂ.ಅನಿತಾ, ಸಿನಿಮಾ ರಿಲೀಸ್ ಸೇರಿದಂತೆ ಹಂಚಿಕೆ, ಓಟಿಟಿ ಸ್ಟ್ರೀಮಿಂಗ್, ಮಾಧ್ಯಮಗೋಷ್ಠಿ, ಸಂದರ್ಶನಗಳು, ಪೋಸ್ಟರ್, ಟೀಸರ್ ಸೇರಿದಂತೆ ಯಾವುದೇ ರೀತಿಯ ಪ್ರಚಾರ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಈ ಪ್ರಕರಣ ಸಂಬಂಧ ಪ್ರೊಡಕ್ಷನ್ ಕಂಪನಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸೋಷಿಯಲ್ ಮೀಡಿಯಾ ಕಂಪನಿಗಳು ಹಾಗೂ ಖಾಸಗಿ ಚಾನಲ್ಗಳಿಗೆ ಸಮನ್ಸ್ ಮತ್ತು ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಯನ್ನು ಮೇ 2ರಂದು ಮುಂದೂಡಲಾಗಿದೆ.
ಇದನ್ನೂ ಓದಿ: 25 ವರ್ಷಗಳ ಬಳಿಕ ಮತ್ತೆ ಬರ್ತಿದ್ದಾನೆ ‘ಕೋಟಿಗೊಬ್ಬ’: ದಾದಾ ಕ್ರೇಜ್ಗೆ ಶೋಗಳು ವಾರಕ್ಕೂ ಮುನ್ನವೇ ಹೌಸ್ಫುಲ್
ರೇಣುಕಸ್ವಾಮಿ ಕೊಲೆ ಪ್ರಕರಣವು ವಿಚಾರಣೆಯ ಹಂತದಲ್ಲಿದೆ. ಈ ಸಂದರ್ಭದಲ್ಲಿ ಇದೇ ಪ್ರಕರಣ ಆಧಾರಿತ ಸಿನಿಮಾ ಬಿಡುಗಡೆಯಾದರೆ ನಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ಉಂಟಾಗಲಿದೆ. ಪರೋಕ್ಷವಾಗಿ ನಮ್ಮ ಕುಟುಂಬಕ್ಕೆ ಸಂಬಂಧಿಸಿದ ಕೆಲವು ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ವಿಜಯಲಕ್ಷ್ಮೀ ದರ್ಶನ್ ಕೋರ್ಟ್ ಎದುರು ತಮ್ಮ ಅಳಲು ತೋಡಿಕೊಂಡಿದ್ದರು. ವಿಜಯಲಕ್ಷ್ಮೀ ಮನವಿ ಪುರಸ್ಕರಿಸಿದ ಕೋರ್ಟ್ ಇದೀಗ ಬಾಸ್ ಸಿನಿಮಾಗೆ ತಡೆ ನೀಡಿದೆ.



