ಹೇಗಿದೆ ದರ್ಶನ್​ ಅಭಿನಯದ ‘ದಿ ಡೆವಿಲ್​’ ಸಿನಿಮಾ : ನಾಯಕ – ವಿಲ್ಲನ್​ ಪಾತ್ರಗಳಲ್ಲಿ ಡಿ ಬಾಸ್​ ಅಭಿನಯ

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ದಿ ಡೆವಿಲ್​ ಸಿನಿಮಾಗಾಗಿ ಡಿ ಬಾಸ್​ ಅಭಿಮಾನಿಗಳು ಅತ್ಯಂತ ಕಾತುರದಿಂದ ಕಾಯುತ್ತಿದ್ದರು. ಕೊನೆಗೂ ಆ ದಿನ ಸಮೀಪಿಸಿದ್ದು ಇಂದು ರಾಜ್ಯಾದ್ಯಂತ ಬೆಳ್ಳಿ ತೆರೆಗಳ ಮೇಲೆ ದರ್ಶನ್​ ಅಬ್ಬರಿಸಿದ್ದಾರೆ. ನಿರೀಕ್ಷೆಯಂತೆಯೇ ಈ ಸಿನಿಮಾದಲ್ಲಿ ನಟ ದರ್ಶನ್​ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ನಟ ಹಾಗೂ ವಿಲ್ಲನ್​ ಎರಡೂ ಪಾತ್ರಗಳಲ್ಲಿ ದರ್ಶನ್​ ಅಭಿನಯಿಸಿದ್ದು, ನಿಮ್ಮ ನ್ಯೂಸ್​ ನೆಕ್ಸ್ಟ್​ನಲ್ಲಿ ದಿ ಡೆವಿಲ್​ ಸಿನಿಮಾದ ವಿಮರ್ಷೆ ಹೀಗಿದೆ ನೋಡಿ :

ಇದೇ ಮೊದಲ ಬಾರಿಗೆ ನಟ ದರ್ಶನ್​ ರಾಜಕೀಯ ಕಥಾಹಂದರವನ್ನು ಹೊಂದಿರುವ ಸಿನಿಮಾ ಒಂದಕ್ಕೆ ಬಣ್ಣ ಹಚ್ಚಿದ್ದಾರೆ. ದರ್ಶನ್​ಗೆ ದರ್ಶನ್​ರೇ ಎದುರಾಗಿ ನಿಲ್ಲುವುದೇ ಈ ಸಿನಿಮಾದ ಮೂಲ ಕತೆಯಾಗಿದೆ. ಮುಖ್ಯಮಂತ್ರಿ ರಾಜಶೇಖರ್ ( ಮಹೇಶ್​ ಮಂಜ್ರೇಕರ್​) ಭ್ರಷ್ಟಾಚಾರ ಆರೋಪಕ್ಕೆ ಸಿಲುಕಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಸಂದಿಗ್ಧ ಸ್ಥಿತಿಗೆ ಸಿಲುಕಿಬಿಡ್ತಾರೆ. ಆಗ ಹೇಗಾದರೂ ಮಾಡಿ ಮುಖ್ಯಮಂತ್ರಿ ಸ್ಥಾನವನ್ನು ತನ್ನ ಮನೆಯಿಂದ ಕದಲಲು ಬಿಡಬಾರದು ಎಂದು ಪ್ಲಾನ್​ ಮಾಡುವ ರಾಜಶೇಖರ್​ ತನ್ನ ಪುತ್ರ ಧನುಷ್​(ದರ್ಶನ್​)ಗೆ ಸಿಎಂ ಸ್ಥಾನ ಕೊಡಿಸುವ ಹುನ್ನಾರ ಮಾಡುತ್ತಾರೆ.

ಆದರೆ ಧನುಷ್​ ಖಳನಾಯಕ. ಹೀಗಾಗಿ ಧನುಷ್​ಗೆ ಹೋಲುವಂತ ವ್ಯಕ್ತಿ ಕೃಷ್ಣ(ದರ್ಶನ್​​)ರನ್ನು ಧನುಷ್​ರಂತೆ ವೇಷಭೂಷಣ ಬದಲಾಯಿಸಿ ಆತನೇ ಧನುಷ್​ ಎಂದು ಜನರಿಗೆ ಪರಿಚಯ ಮಾಡಿಕೊಡಲಾಗುತ್ತದೆ. ಜನರ ಎದುರು ಈ ನಾಟಕ ಎಷ್ಟು ದಿನಗಳ ಕಾಲ ನಡೆಯಿತು ? ಧನುಷ್​ ಹಾಗೂ ಕೃಷ್ಣ ಮುಖಾಮುಖಿ ಯಾವ ರೀತಿ ಇತ್ತು ? ಎಂಬುದೇ ದಿ ಡೆವಿಲ್​ ಸಿನಿಮಾದ ಮುಖ್ಯ ಕತೆಯಾಗಿದೆ.

ಸಂಪೂರ್ಣ ರಾಜಕೀಯವನ್ನೇ ಆಧರಿಸಿರುವ ದಿ ಡೆವಿಲ್​ ಸಿನಿಮಾದಲ್ಲಿ ನಟ ದರ್ಶನ್​ ನಾಯಕ ಹಾಗೂ ಖಳನಾಯಕ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆದರೆ ಖಳ ನಾಯಕನ ಪಾತ್ರದಲ್ಲಿ ತುಸು ಹೆಚ್ಚೇ ಮಿಂಚಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ನಟಿ ರಚನಾ ರೈ ಅವರ ಪಾತ್ರ ಕೂಡ ಮೆಚ್ಚುವಂತದ್ದೇ. ಶರ್ಮಿಳಾ ಮಾಂಡ್ರೆ ಕಡಿಮೆ ಅವಧಿಗೆ ತೆರೆಯಲ್ಲಿ ಕಾಣಿಸಿಕೊಂಡರೂ ಕೂಡ ಎಂದಿನಂತೆ ಸೈ ಎನಿಸಿದ್ದಾರೆ. ಸಂಪೂರ್ಣ ಸಿನಿಮಾದಲ್ಲಿ ಮುಖ್ಯಮಂತ್ರಿಯ ಸಲಹೆಗಾರನಾಗಿ ಪಾತ್ರ ನಿರ್ವಹಿಸಿರುವ ಅಚ್ಯುತ್​ ಕುಮಾರ್​ ಎಂದಿನಂತೆ, ಅಬ್ಬರಿಸಿದ್ದಾರೆ. ಇನ್ನು ಗಿಲ್ಲಿ ನಟ ಹಾಗೂ ಹುಲಿ ಕಾರ್ತಿಕ್​ ಅವರ ಕಾಮಿಡಿ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ.
ದಿ ಡೆವಿಲ್​ ಎಂದು ಹೆಸರು ಕೇಳಿದಾಕ್ಷಣ ಇದು ಸಂಪೂರ್ಣ ಆ್ಯಕ್ಷನ್​ ಕಟ್​ ಸಿನಿಮಾ ಎಂದುಕೊಂಡವರಿಗೆ ಕೊಂಚ ನಿರಾಶೆಯಾಗುವುದು ಪಕ್ಕಾ. ರಾಜಕೀಯಕ್ಕೆ ಹೆಚ್ಚು ಮಹತ್ವ ನೀಡಿರುವ ನಿರ್ದೇಶಕ ಪ್ರಕಾಶ್​ ವೀರ್​ ಆ್ಯಕ್ಷನ್​ ಸೀನ್​ಗಳಿಗೆ ಅತಿಯಾದ ಪ್ರಾಮುಖ್ಯತೆ ನೀಡಿಲ್ಲ. ಗಿಲ್ಲಿ ನಟ ಇರುವುದರಿಂದ ಸಿನಿಮಾದಲ್ಲಿ ಸಖತ್​ ಕಾಮಿಡಿ ಎಂದು ಭಾವಿಸಿದವರಿಗೂ ನಿರಾಶೆಯಾಗಿದೆ. ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿಲ್ಲ. ಇನ್ನುಳಿದಂತೆ ಕತೆಯಲ್ಲಿ ಗೊಂದಲ ಜಾಸ್ತಿ ಇರುವುದರಿಂದ ಕ್ಲೈಮಾಕ್ಸ್​ ಕೂಡ ಅಷ್ಟೊಂದು ತೃಪ್ತಿದಾಯಕವಾಗಿಲ್ಲ. ಹೇಳಿಕೊಳ್ಳುವಂತಾ ಹೊಸತನವೂ ಸಿನಿಮಾದಲ್ಲಿ ಮೂಡಿ ಬಂದಿಲ್ಲ.

ಇದನ್ನೂ ಓದಿ: New Serial: ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ‘ಜೈ ಲಲಿತಾ’ ಕಥೆ

ರಾಜಕೀಯ ಆಧಾರಿತ ಸಿನಿಮಾದಲ್ಲಿ ದರ್ಶನ್​ರ ಮೊದಲ ಪ್ರಯತ್ನ, ದ್ವಿಪಾತ್ರದಲ್ಲಿ ದಾಸನ ಅಬ್ಬರ ಕಣ್ತುಂಬಿಕೊಳ್ಳಬೇಕು ಎನ್ನುವವರು ಈ ಸಿನಿಮಾಗೆ ಹೋಗಿ ಬರಬಹುದು. ಸೀದಾ ಸಾದಾ ಕತೆಯನ್ನು ಹೊಂದಿರುವ ದಿ ಡೆವಿಲ್​ ಸಿನಿಮಾವನ್ನು ಒಂದು ಬಾರಿ ಚಿತ್ರಮಂದಿರಕ್ಕೆ ಹೋಗಿ ನೋಡಿ ಬರಬಹುದಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories