ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ: ಕಿವೀಸ್ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಮೊದಲ ಬ್ಯಾಟರ್!

Virat Kohli New Record: ಇಂದೋರ್: ಭಾರತದ ರನ್ ಮಷೀನ್ ವಿರಾಟ್ ಕೊಹ್ಲಿ ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಈ ಹಣಾಹಣಿಯಲ್ಲಿ ಕೊಹ್ಲಿ ಕೇವಲ 91 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಶತಕ ಪೂರೈಸಿದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದು ಕಿವೀಸ್ ವಿರುದ್ಧ ಏಕದಿನ ಮಾದರಿಯಲ್ಲಿ ಕೊಹ್ಲಿ ಸಿಡಿಸಿದ 7ನೇ ಶತಕವಾಗಿದೆ. ಈ ಮೊದಲು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಭಾರತದ ವೀರೇಂದ್ರ ಸೆಹ್ವಾಗ್ ತಲಾ 6 ಶತಕಗಳೊಂದಿಗೆ ಕೊಹ್ಲಿ ಜೊತೆ ಜಂಟಿ ಅಗ್ರಸ್ಥಾನದಲ್ಲಿದ್ದರು. ಆದರೆ ಈಗ ಕೊಹ್ಲಿ ಅವರೆಲ್ಲರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಅಷ್ಟೇ ಅಲ್ಲದೆ, ಎಲ್ಲಾ ಮಾದರಿಯ ಕ್ರಿಕೆಟ್ ಸೇರಿದಂತೆ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು (10) ಶತಕಗಳನ್ನು ಸಿಡಿಸಿದ ದಾಖಲೆಯನ್ನೂ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅವರು ಜಾಕ್ ಕಾಲಿಸ್ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಮೀರಿಸಿದ್ದಾರೆ.

ಕೊಹ್ಲಿ ಶತಕ ವ್ಯರ್ಥ, ನ್ಯೂಜಿಲೆಂಡ್‌ಗೆ ಐತಿಹಾಸಿಕ ಸರಣಿ ಜಯ:
ವಿರಾಟ್ ಕೊಹ್ಲಿ ಅವರ ಈ ಐತಿಹಾಸಿಕ 54ನೇ ಏಕದಿನ ಶತಕದ ಹೊರತಾಗಿಯೂ ಭಾರತ ತಂಡ 41 ರನ್‌ಗಳ ಸೋಲನ್ನು ಅನುಭವಿಸಿತು. ನ್ಯೂಜಿಲೆಂಡ್ ತಂಡವು ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್, ಡ್ಯಾರಿಲ್ ಮಿಚೆಲ್ (137) ಮತ್ತು ಗ್ಲೆನ್ ಫಿಲಿಪ್ಸ್ (106) ಅವರ ಭರ್ಜರಿ ಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 337 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ಶಿವಮೊಗ್ಗದಲ್ಲಿ ‘ಲಾಂಗ್’ ಹಿಡಿದು ಕಳ್ಳರ ಅಟ್ಟಹಾಸ: ಒಂದೇ ರಾತ್ರಿ 15 ಲಕ್ಷದ ಚಿನ್ನಾಭರಣ ದೋಚಿದ ಕಿಡಿಗೇಡಿಗಳು

ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 71 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ವಿರಾಟ್ ಕೊಹ್ಲಿ (124 ರನ್), ನಿತೀಶ್ ಕುಮಾರ್ ರೆಡ್ಡಿ (53) ಮತ್ತು ಹರ್ಷಿತ್ ರಾಣಾ (52) ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಭಾರತ ತಂಡ 46 ಓವರ್‌ಗಳಲ್ಲಿ 296 ರನ್‌ಗಳಿಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ಪರ ಜಾಕ್ ಫೋಲ್ಕ್ಸ್ ಮತ್ತು ಕ್ರಿಸ್ಟಿಯನ್ ಕ್ಲಾರ್ಕ್ ತಲಾ ಮೂರು ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories