ಕತ್ತು ಸೀಳಿದ ಗಾಳಿಪಟದ ದಾರ : ಹಬ್ಬಕ್ಕೆ ಮಗಳನ್ನು ಕರೆತರಲು ಹೊರಟಿದ್ದ ತಂದೆ ಮೃತ್ಯು
ಗಾಳಿಪಟ ಹಾರಿಸುತ್ತಿದ್ದ ಮಾಂಜಾ ದಾರ ಕತ್ತು ಸೀಳಿದ ಪರಿಣಾಮ ಬೈಕ್ನಲ್ಲಿ ಸಾಗುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ ದಾರುಣ ಘಟನೆಯು ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಬಳಿ ಸಂಭವಿಸಿದೆ. ನಡೆದಿದ್ದು, ಮೃತ ವ್ಯಕ್ತಿಯನ್ನು ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದ 48 ವರ್ಷದ ಸಜೀವ್ ಕುಮಾರ್ ಹೊಸಮನಿ ಎಂದು ಗುರುತಿಸಲಾಗಿದೆ.
ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಮನೆಗೆ ಕರೆದುಕೊಂಡು ಬರಲು ಸಜೀವ್ ಕುಮಾರ್ ಬೈಕ್ನಲ್ಲಿ ತೆರಳುತ್ತಿದ್ದ ಎನ್ನಲಾಗಿದೆ. ಈ ವೇಳೆ ಮಾಂಜಾ ದಾರ ಅವರ ಕುತ್ತಿಗೆ ಸೀಳಿದೆ. ನಿಯಂತ್ರಣ ತಪ್ಪಿ ಬೈಕ್ನಿಂದ ಬಿದ್ದ ಸಜೀವ್ ಕುಮಾರ್ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ: ಶಬರಿಮಲೆ ಯಾತ್ರೆಯಿಂದ ವಾಪಸ್ಸಾದ ದಿನವೇ ಪತ್ನಿಯನ್ನು ಕೊಂದ ಪಾಪಿ ಪತಿ
ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಜೀವ್ ಕುಮಾರ್ ಆ ನೋವಿನ ನಡುವೆಯೂ ಮಗಳಿಗೆ ಕರೆ ಮಾಡಿದ್ದರು ಎನ್ನಲಾಗಿದೆ. ಕೂಡಲೇ ಸ್ಥಳಕ್ಕೆ ಜಮಾಯಿಸಿದ ಸ್ಥಳೀಯರು ಕುತ್ತಿಗೆಗೆ ಮೇಲೆ ಬಟ್ಟೆ ಇಟ್ಟು ರಕ್ತಸ್ರಾವ ನಿಲ್ಲಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ಬಂದಿದ್ದರೆ ಸಜೀವ್ ಕುಮಾರ್ ಪ್ರಾಣ ಉಳಿಯುತ್ತಿತ್ತು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಮನ್ನಾ ಎಖೆಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



