ಮಕ್ಕಳಿಲ್ಲದ ಅನಾಥ ವೃದ್ದ ದಂಪತಿಯನ್ನು ದತ್ತು ಪಡೆದ ಪಿಎಸ್ಐ ಪ್ರದೀಪ್ ಪೂಜಾರಿ: ಜನಮೆಚ್ಚಿಗೆಗಳಿಸಿದೆ ಪೊಲೀಸ್ ಅಧಿಕಾರಿಯ ಮಾನವೀಯತೆಯ ಕಾರ್ಯ

0

ದೇವನಹಳ್ಳಿ : ಇಂದಿನ ಕಾಲದಲ್ಲಿ ಹೆತ್ತು, ಹೊತ್ತು ಸಾಕಿ ಸಲಹಿದ ತಂದೆ ತಾಯಿಯನ್ನೇ ಮಕ್ಕಳು ಮನೆಯಿಂದ ಹೊರ ಹಾಕುತ್ತಿದ್ದಾರೆ. ಇನ್ನು ಆಸ್ತಿ ಆಸೆಗೆ ಮಾತಾಪಿತರನ್ನೇ ಬಲಿಕೊಟ್ಟವರು ಅದೆಷ್ಟೋ ಮಂದಿ. ಇನ್ನೊಂದೆಡೆ ತುತ್ತು ಕೊಟ್ಟು ಸಾಕಿದವರನ್ನೇ ಇಳಿ ವಯಸ್ಸಿನಲ್ಲಿ ವೃದ್ದಾಶ್ರಮಕ್ಕೆ ತಳ್ಳುತ್ತಿರುವವರು ನಮ್ಮೊಂದಿಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಪೊಲೀಸ್ ಸಬ್ ಇನ್ಸಪೆಕ್ಟರ್ ಓರ್ವರು ಮಕ್ಕಳಿಲ್ಲ ಅನಾಥ ವೃದ್ದ ದಂಪತಿಯನ್ನು ದತ್ತು ಪಡೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಹೌದು. ಬೆಂಗಳೂರಿನ ದೇವನಹಳ್ಳಿ ತಾಲೂಕಿನ ಬಸವನಪುರ ಗ್ರಾಮದಲ್ಲಿ ನರಸಿಂಹಪ್ಪ ಹಾಗೂ ಗಂಗಮ್ಮ ದಂಪತಿ ವಾಸವಾಗಿದ್ರು. ನರಸಿಂಹಪ್ಪನಿಗೆ 80 ವರ್ಷವಾದ್ರೆ, ಗಂಗಮ್ಮನಿಗೆ 75 ವರ್ಷ ಪ್ರಾಯ. ತಾನು ಬ್ಯಾಂಕಿನ ಸಿಬ್ಬಂಧಿ ಅಂತಾ ಹೇಳಿಕೊಂಡು ವೃದ್ದ ದಂಪತಿಯ ಮನೆಗೆ ಬಂದಿದ್ದ ಅಪರಿಚಿತ ವ್ಯಕ್ತಿ ದಂಪತಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣ, ಮನೆಯಲ್ಲಿದ್ದ ಒಡವೆಯನ್ನು ಲಪಟಾಯಿಸಿದ್ದ. ಇದರಿಂದ ವೃದ್ದ ದಂಪತಿ ನೊಂದು ಹೋಗಿದ್ರು. ಬೇರೆ ದಾರಿಯೇ ಕಾಣದಾದಾಗ. ಗ್ರಾಮ ಪಂಚಾಯತ್ ಸದಸ್ಯರೋರ್ವರ ಸಹಾಯದಿಂದ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಪ್ರದೀಪ್ ಪೂಜಾರಿ ಅವರು, ವೃದ್ದ ದಂಪತಿಗಳ ಸಮಸ್ಯೆಯನ್ನು ಆಲಿಸಿದ್ರು. ಮಕ್ಕಳಿಲ್ಲದ ದಂಪತಿಯ ಜೀವನ ನಿರ್ವಹಣೆಯ ಜವಾಬ್ದಾರಿಯನ್ನು ತಾನೇ ಹೊತ್ತು ಕೊಳ್ಳುವ ಭರವಸೆಯನ್ನು ನೀಡಿದ್ದಾರೆ. ಮಾತ್ರವಲ್ಲ ಜೀವನ ಪರ್ಯಂತ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳುವುದಾಗಿಯೂ ಹೇಳಿದ್ದಾರೆ. ತಾವು ಹೇಳಿದಂತೆಯೇ ಪ್ರದೀಪ್ ಪೂಜಾರಿ ನಡೆದುಕೊಳ್ಳುತ್ತಿದ್ದಾರೆ.

ಇಳಿ ವಯಸ್ಸಿನ ವೃದ್ದ ದಂಪತಿಗಳಿಗೆ ಆಸರೆಯಾಗುವ ಮೂಲಕ ಮಾನವೀತೆಯನ್ನು ಮೆರೆದಿರುವ ಪಿಎಸ್ಐ ಪ್ರದೀಪ್ ಪೂಜಾರಿ ಅವರ ಕಾರ್ಯ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ವೃದ್ದ ದಂಪತಿಗಳ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಪ್ರದೀಪ್ ಪೂಜಾರಿ ಪ್ರಯತ್ನಿಸುತ್ತಿದ್ದಾರೆ. ವೃದ್ದ ದಂಪತಿಯ ಆರೋಗ್ಯ, ಮನೆ ಬಾಡಿಗೆ ಸೇರಿದಂತೆ ಎಲ್ಲಾ ಖರ್ಚು ವೆಚ್ಚಗಳನ್ನೂ ತಮ್ಮದೇ ವೇತನದಲ್ಲಿ ನೋಡಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ ದಂಪತಿಯನ್ನು ವಂಚಿಸಿರುವ ಆರೋಪಿಯನ್ನು ಶೀಘ್ರದಲ್ಲಿಯೇ ಪತ್ತೆ ಹೆಚ್ಚುವುದಾಗಿಯೂ ಭರವಸೆಯನ್ನು ನೀಡಿದ್ದಾರೆ.

ಅಷ್ಟಕ್ಕೂ ಪಿಎಸ್ಐ ಪ್ರದೀಪ್ ಪೂಜಾರಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆದಂಬಾಡಿಯ ಕೆಯ್ಯೂರಿನವರು. ಮಾಡಾವು ಗ್ರಾಮದ ಬಾಲಕೃಷ್ಣ ಪೂಜಾರಿ ಹಾಗೂ ಗುಣವತಿ ದಂಪತಿಗಳ ಮಗನೇ ಈ ಪ್ರದೀಪ್ ಪೂಜಾರಿ. ಇನ್ನು ಪ್ರದೀಪ್ ಪೂಜಾರಿ ಅವರ ತಂದೆ ಬಾಲಕೃಷ್ಣ ಪೂಜಾರಿ ಅವರು ಸರ್ವೆ ಸೂಪರ್ ವೈಸರ್ ಆಗಿ ಸೇವೆಯಿಂದ ನಿವೃತ್ತರಾಗಿದ್ದರು. ಬಾಲ್ಯದಿಂದಲೇ ಮಗನಿಗೆ ಶಿಸ್ತಿನ ಪಾಠವನ್ನು ಹೇಳಿಕೊಟ್ಟಿದ್ದರು.

ಪುತ್ತೂರಿನ ಫಿಲೋಮಿನಾ ಕಾಲೇಜು ಹಾಗೂ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಪಡೆದಿರುವ ಪ್ರದೀಪ್ ಪೂಜಾರಿ ಅವರು ಕಳೆದ 10 ವರ್ಷಗಳಿಂದಲೂ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಪಿಎಸ್ಐ ಪ್ರದೀಪ್ ಪೂಜಾರಿ ಅವರು ದಕ್ಷ ಅಧಿಕಾರಿ ಅನ್ನುವ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗಷ್ಟೇ ಪ್ರದೀಪ್ ಪೂಜಾರಿ ಅವರು ವಿಶ್ವನಾಥಪುರ ಪೊಲೀಸ್ ಠಾಣೆಯ ಸಬ್ ಇನ್ಸ್ ಸ್ಪೆಕ್ಟರ್ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

ಪಿಎಸ್ಐ ಪ್ರದೀಪ್ ಪೂಜಾರಿ ಅವರು ವೃದ್ದ ದಂಪತಿಗಳನ್ನು ದತ್ತು ಪಡೆಯುವ ಮೂಲಕ ಮಾನವೀಯತೆಯ ಸಂದೇಶವನ್ನು ಸಾರಿದ್ದಾರೆ. ಹೆತ್ತು ಹೊತ್ತು ಸಾಕಿ ಸಲಹಿದ ತಂದೆ ತಾಯಿಯನ್ನೇ ಮನೆಯಿಂದ ಹೊರದೂಡುವ ಮಕ್ಕಳಿಗೆ ಮಾದರಿಯಾಗಿದ್ದಾರೆ. ಒಟ್ಟಿನಲ್ಲಿ ಅಪರೂಪದ ಮಾನವೀಯ ಮೌಲ್ಯಗಳನ್ನು, ಜೀವನ ಆದರ್ಶನಗಳನ್ನು ಅಳವಡಿಸಿಕೊಂಡಿರುವ ಪ್ರದೀಪ್ ಪೂಜಾರಿ ಅವರಿಗೆ ನಮ್ಮದೊಂದು ಸಲಾಂ.

Leave A Reply

Your email address will not be published.