ತಬ್ರೇಕ್ ನೆಂಬ ಶ್ರವಣಕುಮಾರ ! 600 ಕಿ.ಮೀ. ಸೈಕಲ್ ತುಳಿದ 11ರ ಪೋರ

0
  • ಪಂಜು ಗಂಗೊಳ್ಳಿ


ಗಾಯಾಳು ಅಪ್ಪನನ್ನು ಹಿಂದೆ ಕುಳ್ಳಿರಿಸಿಕೊಂಡು 1,200 ಕಿ.ಮೀ. ಸೈಕಲ್ ತುಳಿದು ಮನೆಗೆ ಕರೆತಂದ 15 ವರ್ಷ ಪ್ರಾಯದ ಸೈಕಲ್ ಹುಡುಗಿ ಜ್ಯೋತಿ ಕುಮಾರಿ ದೇಶದಾದ್ಯಂತ ಸುದ್ದಿಯಾಗಿದ್ದಳು. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಇವಾಂಕಾ ಕೂಡಾ ಸೈಕಲ್ ಜ್ಯೋತಿಯ ಸಾಧನೆಯನ್ನು ಕೊಂಡಾಡಿದ್ದಳು. ಆದರೆ ಇದೇ ಸಮಯದಲ್ಲಿ ಅದೇ ಬಿಹಾರದ 11 ರ ಪ್ರಾಯದ ಪೋರನೊಬ್ಬ 9 ದಿನಗಳ ಕಾಲ ಮೂರು ಚಕ್ರದ ಸೈಕಲ್ ಗಾಡಿಯನ್ನು ತುಳಿದು ತನ್ನ ತಂದೆ ತಾಯಿಯನ್ನು ಮನೆಗೆ ಕರೆತಂದ ಸಾಹಸದ ಸುದ್ದಿ ಹೆಚ್ಚು ಬೆಳಕಿಗೆ ಬಂದಿರಲಿಲ್ಲ.

ಬಿಹಾರದ ಆರಾರಿಯಾ ಹಳ್ಳಿಯ 11 ಪ್ರಾಯದ ಮಹಮ್ಮದ್ ತಬ್ರೇಕ್ ಭೂರಹಿತ ಕುಟುಂಬ. ತಂದೆ, ತಾಯಿಯೊಂದಿಗೆ ಈತ ವಾಸವಾಗಿದ್ದ ಗುಡಿಸಲು ಇರುವ ಜಾಗವೂ ಕೂಡ ಬೇರೆಯವರದ್ದು. ತಬ್ರೇಕ್ ಅಣ್ಣ ತಮಿಳಿನಾಡಿನಲ್ಲಿ ಕೆಲಸ ಮಾಡುತ್ತಿದ್ರೆ, ತಂದೆ ಇಸ್ರಫಿಲ್ ಕಳೆದ 20 ವರ್ಷಗಳಿಂದ ವಾರಣಾಸಿಯ ಮಾರ್ಬಲ್ ಅಂಗಡಿಯೊಂದರಲ್ಲಿ ಕೆಲಸ ಮಾಡ್ತಿದ್ದಾರೆ. ಇನ್ನು ತಾಯಿ ಸೋಗ್ರಾ ಭತ್ತದ ಗದ್ದೆಯಲ್ಲಿ ಕಟಾವು ಕೆಲಸ ಮಾಡುತ್ತಿದ್ದಾಗ ತನ್ನ ಒಂದು ಕಣ್ಣನ್ನು ಕಳೆದುಕೊಂಡಿದ್ದಳು. ಜೊತೆಗೆ ಫೆಬ್ರವರಿ ತಿಂಗಳಲ್ಲಿ ಚಪ್ಪಡಿ ಬಿದ್ದು ತಂದೆ ಇಸ್ರಫಿಲ್ ನ ಕಾಲಿನ ಮೂಳೆಗೆ ಪೆಟ್ಟಾಗಿತ್ತು. ಹೀಗಾಗಿ ತಂದೆಯ ಚಿಕಿತ್ಸೆಗಾಗಿ ತಬ್ರೇಕ್ ತಾಯಿ ಸೋಗ್ರಾ ಜೊತೆಗೆ ವಾರಣಾಸಿಗೆ ವಾರಣಾಸಿಗೆ ತೆರಳಿದ್ದರು.

ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಹೇರಿಕೆಯಾಗಿತ್ತು. ಹೀಗಾಗಿ ಮಾರ್ಬಲ್ ಅಂಗಡಿ ಮುಚ್ಚಿದ್ದರಿಂದ ಇಸ್ರಫಿಲ್ ಕೆಲಸ ಕಳೆದುಕೊಂಡಿದ್ದನು. ಕೈಯಲ್ಲಿ ದುಡ್ಡಿಲ್ಲ. ಅನಿಶ್ಚಿತ ಭವಿಷ್ಯವನ್ನು ಎದುರು ನೋಡುತ್ತಾ ಆಸುಪಾಸಿನ ನೂರಾರು ವಲಸೆ ಕಾರ್ಮಿಕರು ತಮ್ಮೂರಿನತ್ತ ನಡೆಯುತ್ತಿದ್ದರು.

ಇದನ್ನು ನೋಡಿದ ತಬ್ರೇಕ್ ತನ್ನ ಮನೆಯಲ್ಲಿನ ಸಾಮಾನು, ಸ್ಟವ್, ಗ್ಯಾಸ್ ಸಿಲಿಂಡರ್, ಅಂಗಡಿ ಮಾಲೀಕ ಕೊಟ್ಟ ಆಹಾರ ವಸ್ತುಗಳನ್ನು ತಂದೆಯ ಮೂರು ಚಕ್ರದ ಗಾಡಿಗೆ ತುಂಬಿಸಿ ಕೊಂಡ. ತಂದೆ ತಾಯಿಯನ್ನೂ ಅದೇ ಗಾಡಿಯಲ್ಲಿ ಕುಳ್ಳಿರಿಸಿ ಸೂಮಾರು 600 ಕಿಮಿ ದೂರದಲ್ಲಿರುವ ತನ್ನ ಹಳ್ಳಿಯತ್ತ ಹೊರಟೇ ಬಿಟ್ಟನು !

ಸುಮಾರು 9 ದಿನಗಳ ಕಾಲ ತಬ್ರೇಕ್ ಸೈಕಲ್ ಗಾಡಿಯ ಪೆಡಲ್ ತುಳಿಯುತ್ತಾ, ದಾರಿಯಲ್ಲಿಯೇ ಅಡುಗೆ ಮಾಡಿ ಉಂಡು ನಿದ್ರಿಸುತ್ತಾ ತಂದೆ ತಾಯಿಯನ್ನು ಮನೆಗೆ ತಲುಪಿಸಿದ್ದಾನೆ. ಆನೇಕ ದಾರಿ ಹೋಕರು ಇವರಿಗೆ ತಮ್ಮಿಂದಾದ ಸಹಾಯ ನೀಡಿದ್ದಾರೆ. ಒಮ್ಮೆಯಂತೂ ಇಡೀ ಕುಟುಂಬ ಲಾರಿಯಡಿ ಸಿಕ್ಕಿ ಸಾಯುವುದರಲ್ಲಿತ್ತು ! ಆದರೂ ಜಗ್ಗದೇ 9ರ ಪೋರ ಮಾಡಿದ ಸಾಧನೆ ನಿಜಕ್ಕೂ ಅಸಾಮಾನ್ಯವಾದದು.

ಶ್ರವಣಕುಮಾರನಂತೆ ತಂದೆ ತಾಯಿಯನ್ನು ಮನೆಗೆ ತಲುಪಿಸಿದ ಮಹಮ್ಮದ್ ತಬ್ರೇಕ್ ಸಾಧನೆಯನ್ನು ಮೆಚ್ಚಿ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಾಲಕನಿಗೆ 50 ಸಾವಿರ ರುಪಾಯಿ ಕಳಿಸಿಕೊಟ್ಟಿದ್ದಾರೆ. ಮಾತ್ರವಲ್ಲ ಮುಂಬೈಯ ಸಾಮಾಜಿಕ ಸಂಸ್ಥೆ ಯೊಂದು ತಬ್ರೇಕ್ ನನ್ನು ದತ್ತು ಪಡೆಯಲು ಮುಂದೆ ಬಂದಿದೆ. ಆದರೆ, ಬಿಹಾರದಲ್ಲಿ ಆಡಳಿತ ನಡೆಸುತ್ತಿರುವ ನಿತೀಶ್ ಕುಮಾರ್ ಸರ್ಕಾರಕ್ಕೆ ಬಾಲಕನ ಸಾಧನೆ, ಬಡ ಕುಟುಂಬದ ಕಷ್ಟ ಅರಿವಿಗೆ ಬಾರದಾಗಿದ್ದು ಮಾತ್ರ ದುರಂತ.

Leave A Reply

Your email address will not be published.