Agriculture Jobs 2026: ಕೃಷಿ ಇಲಾಖೆಯಿಂದ ಅತಿ ದೊಡ್ಡ ನೇಮಕಾತಿ: ಮೇ10 ರ ಮೊದಲು ಅರ್ಜಿ ಹಾಕಿ

ಕರ್ನಾಟಕ ರಾಜ್ಯದ ಕೃಷಿ ಇಲಾಖೆಯು ಕಲ್ಯಾಣ ಕರ್ನಾಟಕ ವೃಂದ ಹಾಗೂ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ.

KEA Agriculture Recruitment 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಕೆಇಎ ಒಟ್ಟು 890 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಈ ನೇಮಕಾತಿ ಅಭಿಯಾನದಲ್ಲಿ ಕಲ್ಯಾಣ ಕರ್ನಾಟಕ ಸೇರಿದಂತೆ ಎಲ್ಲಾ ಉಳಿಕೆ ಮೂಲ ವೃಂದದವರು ಅರ್ಜಿ ಸಲ್ಲಿಸಬಹುದಾಗಿದೆ. ಕೆಇಎ ಹೊರಡಿಸಿದ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 10 ಆಗಿದೆ ಮತ್ತು ಅರ್ಜಿ ಶುಲ್ಕ ಪಾವತಿಗೆ ಮೇ 12 ಕೊನೆಯ ದಿನವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? ಇಲ್ಲಿದೆ ಓದಿ.

ಶೈಕ್ಷಣಿಕ ಅರ್ಹತೆ

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಬಿಎಸ್‌ಸಿ (ಕೃಷಿ)/ ಬಿಎಸ್‌ಸಿ (ಆನರ್ಸ್) ಕೃಷಿ, ಶೇ 15 ರಷ್ಟು ಕೃಷಿ ಅಧಿಕಾರಿ ಹುದ್ದೆಗೆ ಬಿ.ಟೆಕ್‌ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ)/ ಬಿಎಸ್‌ಸಿ ಕೃಷಿಗೆ ಸಂಬಂಧಿಸಿ ಕೋರ್ಸ್‌ಗಳನ್ನು ಪೂರೈಸಿರಬೇಕು. ವಿವರವಾದ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ.

ಕಲ್ಯಾಣ ಕರ್ನಾಟಕ ವೃಂದದ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ.

ಉಳಿಕೆ ಮೂಲ ವೃಂದದ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ.

ವಯೋಮಿತಿ

ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು. ಗರಿಷ್ಠ ವಯೋಮಿತಿ 40 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ವೇತನ ಶ್ರೇಣಿ

ಈ ಹುದ್ದೆಗಳಿಗೆ 2024 ರ ಪರಿಷ್ಕೃತ ರಾಜ್ಯ ವೇತನ ಶ್ರೇಣಿ ಅನ್ವಯವಾಗಲಿದೆ.
ಕೃಷಿ ಅಧಿಕಾರಿ ಹುದ್ದೆಗಳಿಗೆ ವೇತನ ಶ್ರೇಣಿ : 69250-1650-74200-1900-85600-2300-99400-2700-115600-3100-134200

ಹಾಗೂ

ಸಹಾಯಕ ಕೃಷಿ ಅಧಿಕಾರಿಗಳಿಗೆ ವೇತನ ಶ್ರೇಣಿ : 65950-1650-74200-1900-85600-2300-99400-2700-115600-3100-124900

ಇದನ್ನೂ ಓದಿ: ಬಾರ್ಡರ್‌ ರೋಡ್ಸ್‌ ಆರ್ಗನೈಸೇಶನ್‌ನಲ್ಲಿ 899 ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಪರೀಕ್ಷೆ ಯಾವಾಗ?

ಉಳಿಕೆ ಮೂಲ ವೃಂದದ ಗ್ರೂಪ್- ಬಿ ಗೆ ಸೇರಿದ ಒಟ್ಟು 632 ಹುದ್ದೆಗಳಿಗೆ (81 ಕೃಷಿ ಅಧಿಕಾರಿ ಹಾಗೂ 551 ಸಹಾಯಕ ಕೃಷಿ ಅಧಿಕಾರಿ) ಜೂನ್ 7ರಂದು ಹಾಗೂ ಕಲ್ಯಾಣ ಕರ್ನಾಟಕ ವೃಂದದ ಒಟ್ಟು 258 ಹುದ್ದೆಗಳಿಗೆ (40 ಕೃಷಿ ಅಧಿಕಾರಿ ಹಾಗೂ 218 ಸಹಾಯಕ ಕೃಷಿ ಅಧಿಕಾರಿ) ಜೂನ್ 14ರಂದು ಲಿಖಿತ ಪರೀಕ್ಷೆ ಇರುತ್ತದೆ. ಎರಡೂ ವೃಂದದವರಿಗೆ ಕನ್ನಡ ಪರೀಕ್ಷೆ ಜೂನ್ 6ರಂದು ನಡೆಯಲಿದೆ.

ಅರ್ಜಿ ಶುಲ್ಕ

ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಸಾಮಾನ್ಯ ಮತ್ತು ಇತರೆ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 750 ರೂ. ಗಳನ್ನು ಪ.ಜಾ/ ಪ.ಪಂ/ ಪ್ರವರ್ಗ –1/ ಮಾಜಿ ಸೈನಿಕ/ತೃತೀಯ ಲಿಂಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು 500 ರೂ. ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ 250 ರೂ. ನಿಗದಿ ಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಇಎಯ ಅಧಿಕೃತ ವೆಬ್‌ಸೈಟ್‌ cetonline.karnataka.gov.in/kea/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories