ನಕಲಿ ಗ್ಯಾರಂಟಿ ಫಲಾನುಭವಿಗಳಿಗೆ ಬಿಗ್ ಶಾಕ್: ಇನ್ಮುಂದೆ ವೋಟರ್ ಐಡಿ ಇದ್ದವರಿಗಷ್ಟೇ ಉಚಿತ ಯೋಜನೆಗಳ ಲಾಭ!
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಮುಂದುವರಿಸಲು ಫಲಾನುಭವಿಗಳು ಕಡ್ಡಾಯವಾಗಿ ರಾಜ್ಯದ ಮತದಾರರ ಗುರುತಿನ ಚೀಟಿಯನ್ನು ಹೊಂದಿರಬೇಕಾಗುತ್ತದೆ.

ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳ ದುರ್ಬಳಕೆಗೆ ತಡೆ ಒಡ್ಡಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸದೊಂದು ಮಹತ್ವದ ನಿಯಮವನ್ನು ಪ್ರಕಟಿಸಿದ್ದಾರೆ. ಇನ್ಮುಂದೆ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಮುಂದುವರಿಸಲು ಫಲಾನುಭವಿಗಳು ಕಡ್ಡಾಯವಾಗಿ ರಾಜ್ಯದ ಮತದಾರರ ಗುರುತಿನ ಚೀಟಿಯನ್ನು ಹೊಂದಿರಬೇಕಾಗುತ್ತದೆ. ಈ ನಿರ್ಧಾರವು ಗ್ಯಾರಂಟಿ ಯೋಜನೆಗಳಲ್ಲಾಗುತ್ತಿದ್ದ ಭಾರಿ ಅಕ್ರಮಗಳಿಗೆ ಬ್ರೇಕ್ ಹಾಕುವ ನಿರೀಕ್ಷೆಯಿದೆ.
ಇತ್ತೀಚಿನ ದಿನಗಳಲ್ಲಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳು ವ್ಯಾಪಕವಾಗಿ ದುರ್ಬಳಕೆಯಾಗುತ್ತಿವೆ ಎಂಬ ದೂರುಗಳು ಸರ್ಕಾರದ ಗಮನಕ್ಕೆ ಬಂದಿದ್ದವು. ಅರ್ಹರಲ್ಲದವರು, ಮೃತರ ಹೆಸರಿನಲ್ಲಿ ಹಣ ಪಡೆಯುತ್ತಿರುವವರು ಹಾಗೂ ವಾಣಿಜ್ಯ ಉದ್ದೇಶಗಳಿಗೆ ಉಚಿತ ವಿದ್ಯುತ್ ಬಳಸಿಕೊಳ್ಳುತ್ತಿರುವ ಪ್ರಕರಣಗಳು ತನಿಖೆಯ ವೇಳೆ ಪತ್ತೆಯಾಗಿದ್ದವು. ಕೆಲವು ಕಡೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಸಿಗುವ ಮಾಸಿಕ ಧನಸಹಾಯವನ್ನು ನಕಲಿ ಫೈನಾನ್ಸ್ ದಂಧೆಗಳಿಗೆ ಮತ್ತು ಭಾರಿ ಬಡ್ಡಿಯ ವ್ಯವಹಾರಗಳಿಗೆ ಹೂಡಿಕೆ ಮಾಡುತ್ತಿರುವ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಯೋಜನೆಗಳನ್ನು ಕೇವಲ ಅರ್ಹ ಕನ್ನಡಿಗರಿಗೆ ಮಾತ್ರ ತಲುಪಿಸಲು ಸರ್ಕಾರ ಈ ಕಠಿಣ ಪರಿಷ್ಕರಣೆಗೆ ಮುಂದಾಗಿದೆ.
ಇದನ್ನೂ ಓದಿ : ಗೃಹಜ್ಯೋತಿ ಯೋಜನೆಗೆ ಇ-ಕೆವೈಸಿ ಕಡ್ಡಾಯ? ಅನರ್ಹರಿಗೆ ಸರ್ಕಾರದ ಬಿಗಿ ಕ್ರಮ
ಈ ಹೊಸ ನಿಯಮದ ಪ್ರಕಾರ, ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಸಂದರ್ಭದಲ್ಲಿ ಯಾರಾದರೂ ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡರೆ, ಅವರು ಗ್ಯಾರಂಟಿ ಯೋಜನೆಗಳ ಸೌಲಭ್ಯದಿಂದಲೂ ವಂಚಿತರಾಗಲಿದ್ದಾರೆ. ಹೊರರಾಜ್ಯದ ಜನರಿಗೆ ನಮ್ಮ ತೆರಿಗೆ ಹಣದಲ್ಲಿ ಉಚಿತ ಸೌಲಭ್ಯಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗಾಗಿ ಕೇವಲ ರಾಜ್ಯದ ಅಧಿಕೃತ ಮತದಾರರಿಗೆ ಮಾತ್ರ ‘ಸ್ಮಾರ್ಟ್ ಕಾರ್ಡ್’ ವಿತರಿಸುವ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸರ್ಕಾರದ ಈ ಕಟ್ಟುನಿಟ್ಟಿನ ಕ್ರಮದಿಂದಾಗಿ ಸಾರ್ವಜನಿಕ ಹಣ ಪೋಲಾಗುವುದು ತಪ್ಪಲಿದ್ದು, ಕೇವಲ ಅರ್ಹ ಬಡ ಕುಟುಂಬಗಳಿಗೆ ಮಾತ್ರ ಯೋಜನೆಗಳ ಲಾಭ ಸಿಗುವಂತಾಗುತ್ತದೆ.



