ಕಸ ಗುಡಿಸುವವನ ಬಳಿ 100 ಕೋಟಿ ರೂ. ಆಸ್ತಿ

ಕೊಪ್ಪಳ : ಕಸಗುಡಿಸುವ ಕೆಲಸ ಮಾಡ್ತಿದ್ದ (Koppala garbage Collector) ವ್ಯಕ್ತಿಯ ಬಳಿಯಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯ ಆಸ್ತಿ ಹೊಂದಿರುವ ಆರೋಪ ಕೇಳಿಬಂದಿದೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (KRIDL)ದ ಗುತ್ತಿಗೆ ನೌಕರನಾಗಿದ್ದ ಕಲಕಪ್ಪ ನಿಡಗುಂದಿ ಎಂಬಾತನೇ ಅಪಾರ ಆಸ್ತಿ ಗಳಿಸಿವನು ಎಂದು ಹೇಳಲಾಗಿದೆ.
ಆರಂಭದಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡಿದ್ದ ಕಲಕಪ್ಪ, ನಂತರ ಹೊರಗುತ್ತಿಗೆ ಆಧಾರದ ಮೇಲೆ ಕಚೇರಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. 2003ರಿಂದ 2024ರ ಅವಧಿಯಲ್ಲಿ ಈತ ಅಪಾರ ಪ್ರಮಾಣದ ಅಕ್ರಮ ಆಸ್ತಿಯನ್ನು ಗಳಿಸಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತನಿಖೆಗೆ ಆರಂಭಿಸಿದ್ದು, ಕಳಕಪ್ಪ ಬಳಿಯಲ್ಲಿ ನೂರಾರು ಕೋಟಿ ರೂಪಾಯಿ ಆಸ್ತಿ ಪತ್ತೆಯಾಗಿದೆ.
Also Read : ಭಟ್ಕಳದಲ್ಲಿ ಮೀನುಗಾರಿಕಾ ದೋಣಿ ಮುಳುಗಡೆ : ನಾಲ್ವರು ಮೀನುಗಾರರು ನಾಪತ್ತೆ
100 ಕೋಟಿಯ ಒಡೆಯ ಕಳಕಪ್ಪ
ಕಲಕಪ್ಪ ನಿಡಗುಂದಿ ಅವರ ಬಳಿಯಲ್ಲಿ ಅಂದಾಜು ₹100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಹಾಗಾದ್ರೆ ಲೋಕಾಯುಕ್ತರು ಪತ್ತೆ ಮಾಡಿರುವ ಆಸ್ತಿಯ ವಿವರ ಇಲ್ಲಿದೆ.
ಮನೆಗಳು: ಕೊಪ್ಪಳ ಮತ್ತು ಭಾಗ್ಯನಗರದಲ್ಲಿ 24 ಮನೆಗಳು.
ಜಮೀನು: ಬಂಡಿ, ಹಿಟ್ನಾಳ್, ಹುಲಿಗಿ ಮತ್ತು ಯಲಬುರ್ಗಾದಲ್ಲಿ ಅವರ ಪತ್ನಿ, ತಮ್ಮ ಮತ್ತು ಭಾವಮೈದುನನ ಹೆಸರಿನಲ್ಲಿ 40 ಎಕರೆ ಜಮೀನು.
ನಿವೇಶನ: ಸುಮಾರು 50 ನಿವೇಶನಗಳು.
ಇತರ ಆಸ್ತಿಗಳು: ಎರಡು ಕಾರುಗಳು, ಎರಡು ಬೈಕ್‌ಗಳು, 350 ಗ್ರಾಂ ಬಂಗಾರ ಮತ್ತು 1.5 ಕೆಜಿ ಬೆಳ್ಳಿ.
ಈ ಆಸ್ತಿಯ ಜೊತೆಗೆ, ಹಲವಾರು ಬೇನಾಮಿ ಆಸ್ತಿಗಳನ್ನೂ ಹೊಂದಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.
Also Read : ಧರ್ಮಸ್ಥಳ : 6ನೇ ಪಾಯಿಂಟ್‌ನಲ್ಲಿ ಸಿಕ್ಕ ಅಸ್ತಿಪಂಜರದ ಅವಶೇಷ ಯಾರದ್ದು ?
ಕಳಕಪ್ಪ ನೂರಾರು ಕೋಟಿ ಆಸ್ತಿ ಸಂಪಾದಿಸಿದ್ದು ಹೇಗೆ ?
ಕಸಗುಡಿಸುವ ಕೆಲಸ ಮಾಡ್ತಿದ್ದ ಕಳಕಪ್ಪ ನಿಡಗುಂದಿ ಅವರು ಇಷ್ಟೊಂದು ಹಣ ಸಂಪಾದಿಸಿದ್ದು ಹೇಗೆ ಎಂದು ಕೊಪ್ಪಳದ ಜನರಲ್ಲಿ ಮತ್ತು ಲೋಕಾಯುಕ್ತ ಅಧಿಕಾರಿಗಳಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದೆ.
ಕಳಕಪ್ಪನವರು ಸಾರ್ವಜನಿಕ ಕೆಲಸಗಳ ಗುತ್ತಿಗೆದಾರರು ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡು ಈ ಅಕ್ರಮ ಸಂಪಾದನೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಆರಂಭದಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿದ್ದ ಅವರು, ನಂತರ ಗುತ್ತಿಗೆದಾರರು ಮತ್ತು ಪ್ರಭಾವಿ ಅಧಿಕಾರಿಗಳೊಂದಿಗೆ ಒಡನಾಟ ಬೆಳೆಸಿಕೊಂಡು ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿದ್ದ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.
ಅವರು KRIDL ನಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರು. ಕೆಲವು ಮೂಲಗಳ ಪ್ರಕಾರ, ಕಾಮಗಾರಿಗಳ ಬಿಲ್ ಪಾವತಿ, ಕೆಲಸಗಳ ಅಪ್ರೂವಲ್ ಮತ್ತು ಇತರ ಸರ್ಕಾರಿ ಕೆಲಸಗಳಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರು.
ಗುತ್ತಿಗೆದಾರರಿಂದ ಮತ್ತು ಸರ್ಕಾರಿ ಅಧಿಕಾರಿಗಳಿಂದ ದೊಡ್ಡ ಪ್ರಮಾಣದ ಕಮಿಷನ್ ಪಡೆಯುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿವೆ. ಈ ಕಮಿಷನ್ ಹಣವನ್ನು ಬೇನಾಮಿ ಹೆಸರಿನಲ್ಲಿ ಆಸ್ತಿಗಳನ್ನಾಗಿ ಖರೀದಿಸುತ್ತಿದ್ದರು ಎಂದು ಹೇಳಲಾಗಿದೆ.
ಕಳಕಪ್ಪ ನಿಡಗುಂದಿಯವರ ಆಸ್ತಿಯ ಮೂಲವನ್ನು ಕಂಡುಹಿಡಿಯಲು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬ್ಯಾಂಕ್ ಖಾತೆಗಳು, ಆಸ್ತಿ ದಾಖಲೆಗಳು, ಮತ್ತು ವ್ಯವಹಾರಗಳ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ. ಈ ತನಿಖೆಯಿಂದ ಮತ್ತಷ್ಟು ಆಘಾತಕಾರಿ ವಿಷಯಗಳು ಹೊರಬರಬಹುದು ಎಂದು ನಿರೀಕ್ಷಿಸಲಾಗಿದೆ.
Koppala garbage Collector has 100 crore rupees illegal Property found Kannada News



