ರಾಜ್ಯದಲ್ಲಿ 13 ಕಂಪನಿಗಳಿಂದ ₹27 ಸಾವಿರ ಕೋಟಿ ಹೂಡಿಕೆಗೆ ಅಸ್ತು: ಎಂ ಬಿ ಪಾಟೀಲ
ಬೆಂಗಳೂರು: M B Patil: ಕರ್ನಾಟಕದಲ್ಲಿ ಬರೋಬ್ಬರಿ 27,607.26 ಕೋಟಿ ಬಂಡವಾಳ ಹೂಡಿಕೆ ಮಾಡಲು ಒಪ್ಪಿಗೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌದದ ಸಮ್ಮೇಳನ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಯೋಜನಾ ಮಂಜೂರಾತಿ ಸಮಿತಿ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 11 ಹೊಸ ಕೈಗಾರಿಕಾ ಯೋಜನೆಗಳು ಮತ್ತು 2 ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು ಸೇರಿವೆ ಎಂದು ಸಭೆ ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಒಟ್ಟು13 ಯೋಜನೆಗಳಿಂದ ಬರೋಬ್ಬರಿ 8,704 ನೇರ ಉದ್ಯೋಗ ಸೃಷ್ಟಿಯಾಗಲಿವೆ. 11 ಹೊಸ ಹೂಡಿಕೆ ಯೋಜನೆಗಳ ಪೈಕಿ ವಾಯು ಅಸೆಟ್ಸ್ 1,251 ಕೋಟಿ ರೂ., ಜಿಂದಾಲ್ ಸ್ಟೀಲ್ಸ್ 1,300.57 ಕೋಟಿ ರೂ, ತೇಜಸ್ ನೆಟ್ವರ್ಕ್ಸ್ 542.19 ಕೋಟಿ ರೂ, ಜಿಂದಾಲ್ ಎಲೆಕ್ಟ್ರಿಕಲ್ ಸ್ಟೀಲ್ 7,102 ಕೋಟಿ ರೂ. ಹೂಡಿಕೆ ಮಾಡಲಿದೆ.
Also Read: Mysore: ಐಷಾರಾಮಿ ಬಂಗಲೆಯಲ್ಲಿ ಹೆಣ್ಣು ಭ್ರೂಣ ಲಿಂಗ ಹತ್ಯೆ : ಆರೋಪಿಗಳು ಅಂದರ್
ಗ್ರಾಸಿಂ ಇಂಡಸ್ಟ್ರೀಸ್1,386 ಕೋಟಿ ರೂ, ಎಸ್ಎಫ್ಎಕ್ಸ್ ಇಂಡಿಯಾ 9,298 ಕೋಟಿ ರೂ, ಸ್ನೀಡರ್ ಎಲೆಕ್ಟ್ರಿಕ್ ಐಟಿ ಬಿಝಿನೆಸ್, ಎಚ್ಎಸ್ಎಸ್ ಟೆಕ್ಸ್ಟೈಲ್ಸ್ 740 ಕೋಟಿ ರೂ, ಸ್ನೈಡರ್ ಎಲೆಕ್ಟ್ರಿಕ್ ಬಿಸಿನೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 1,520.75 ಕೋಟಿ ರೂ, ಕ್ಯೂಪಿಐಎಐ ಇಂಡಿಯಾ 1,136 ಕೋಟಿ ರೂ ಬಂಡವಾಳ ಹೂಡಲಿದೆ.
ಇನ್ನು ರಿಲಯನ್ಸ್ ಕನ್ಸೂಮರ್ ಪ್ರಾಡಕ್ಟ್ಸ್ 1,622 ಕೋಟಿ ರೂ.ಹಾಗೂ ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಲಿಮಿಟೆಡ್ 1,330 ಕೋಟಿ ರೂ. ಹೂಡಿಕೆ ಮಾಡಲಿವೆ. ಉಳಿದಂತೆ ಎಂಬೆಸಿ ಇಂಡಸ್ಟ್ರಿಯಲ್ ಪಾರ್ಕ್ ಹಾಗೂ ಬಾಲಾಜಿ ವೇಫರ್ಸ್ ಕಂಪನಿ ಕ್ರಮವಾಗಿ 80 ಮತ್ತು 298.75 ಕೋಟಿ ರೂ. ಹೆಚ್ಚುವರಿ ಬಂಡವಾಳವನ್ನು ತೊಡಗಿಸಲಿವೆ ಎಂದಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಇಂಧನ ಸಚಿವ ಕೆ ಜೆ ಜಾರ್ಜ್, ಕಾನೂನು ಸಚಿವ ಎಚ್.ಕೆ.ಪಾಟೀಲ, ಐಟಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಉಪಸ್ಥಿತರಿದ್ದರು.



