ರಾಜ್ಯದ ಕಡಲೆ ಬೆಳೆಗಾರರ ಸಂಕಷ್ಟಕ್ಕೆ ನಿಂತ ಕೇಂದ್ರ ಸರ್ಕಾರ : 1 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ನಿರ್ಧಾರ
ರಾಜ್ಯದ ಕಡಲೆ ಬೆಳೆಗಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಕರ್ನಾಟಕದ 1 ಲಕ್ಷ ಮೆಟ್ರಿಕ್ ಟನ್ ಕಡಲೆ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಸಮ್ಮತಿ ನೀಡಿದೆ.
ರಾಜ್ಯದಲ್ಲಿ ಒಟ್ಟೂ 1,01,340 ಮೆಟ್ರಿಕ್ ಟನ್ ಕಡಲೆ ಬೆಳೆಯನ್ನು ಕೇಂದ್ರ ಸರ್ಕಾರವು ಕನಿಷ್ಟ ಬೆಂಬಲ ಬೆಲೆ 5875 ರೂಪಾಯಿಗಳ ದರದಲ್ಲಿ ಖರೀದಿ ಮಾಡಲಿದೆ. ಈ ವಿಚಾರವಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಸಚಿವ ಪ್ರಲ್ಹಾದ ಜೋಶಿ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಕಡಲೆಬೆಳೆಗಾರರ ಪರವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗಮನ ಸೆಳೆದಿದ್ದರು. ಕರ್ನಾಟಕದ ಪ್ರಮುಖ ದ್ವಿದಳ ಧಾನ್ಯಗಳಲ್ಲಿ ಕಡ್ಲೆಯೂ ಒಂದಾಗಿದ್ದು, ಸುಮಾರು 9.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಉತ್ಪಾದನೆ ಹೊಂದಿದೆ. ಆದರೆ, ಪ್ರಸ್ತುತ ಮಾರುಕಟ್ಟೆ ಬೆಲೆಗಿಂತ ತೀರಾ ಕಡಿಮೆ ಬೆಲೆಯಿಂದಾಗಿ ಕಡಲೆ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಕಡಲೆ ಬೆಳೆಗಾರರಿಗೆ ಬೆಂಬಲ ಬೆಲೆಯ ಅಗತ್ಯವಿದೆ ಎಂಬುದನ್ನು ಕೇಂದ್ರಕ್ಕೆ ಪತ್ರದ ಮುಖೇನ ಮನವರಿಕೆ ಮಾಡಿದ್ದರು.
ಇದನ್ನೂ ಓದಿ: PM Kisan Samman Nidhi: 2ರಿಂದ 4ಸಾವಿರಕ್ಕೆ ಹೆಚ್ಚುತ್ತಾ ಕಿಸಾನ್ ಸಮ್ಮಾನ್ ನಿಧಿ ಹಣ?
ಕಡಲೆಗೆ ಪ್ರತಿ ಕ್ವಿಂಟಲ್ಗೆ 5875 ರೂಪಾಯಿ ಬೆಂಬಲ ಬೆಲೆ ಘೋಷಿಸಲಾಗಿದ್ದು ಮಾರುಕಟ್ಟೆ ಬೆಲೆ ಇದಕ್ಕಿಂತ ತೀರಾ ಕಡಿಮೆಯಿದೆ. ಮುಂದಿನದ ದಿನಗಳಲ್ಲಿ ಈ ದರ ಇನ್ನಷ್ಟು ಕಡಿಮೆಯಾಗಲಿದೆ. ಹೀಗಾಗಿ ರಾಜ್ಯದ ಕಡಲೆಬೆಳೆಯನ್ನು ಆದ್ಯತೆಯ ಮೇಲೆ ಖರೀದಿಸುವಂತೆ ಮನವಿ ಮಾಡಿದ್ದರು.
ಪ್ರಹ್ಲಾದ್ ಜೋಶಿ ಅವರ ಈ ಮನವಿಗೆ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವರು ರಾಜ್ಯದ ರೈತರ ಹಿತದೃಷ್ಟಿಯಿಂದ 1 ಲಕ್ಷ ಮೆಟ್ರಿಕ್ ಟನ್ ಗೂ ಹೆಚ್ಚು ಕಡಲೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ರಾಜ್ಯ ಸರ್ಕಾರಕ್ಕೆ ಅನುಮೋದನೆ ನೀಡುವ ಮೂಲಕ ರಾಜ್ಯದ ರೈತರ ಸಂಕಷ್ಟ ಪರಿಹರಿಸಿದ್ದಾರೆ.



