ಯಕ್ಷಗಾನ ಕಲಾವಿದರನ್ನು ಸಲಿಂಗಿಗಳು ಎಂದ ಪ್ರೊ.ಪುರುಷೋತ್ತಮ ಬಿಳಿಮಲೆ ಅವರ ವಿರುದ್ಧ ವಿಜಯೇಂದ್ರ ಆಕ್ರೋಶ
ಕರಾವಳಿ ಭಾಗದ ಗಂಡುಕಲೆ ಎಂದೇ ಖ್ಯಾತಿಪಡೆದ ಯಕ್ಷಗಾನದ ಕಲಾವಿದರಿಗೆ ಅಪಮಾನವಾಗುವಂತಹ ಹೇಳಿಕೆ ನೀಡಿದ್ದ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ಈ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾತನಾಡಿದ ಅವರು, ಬಹುತೇಕ ಯಕ್ಷಗಾನ ಕಲಾವಿದರು ಸಲಿಂಗಕಾಮಿಗಳು ಎಂದು ಹೇಳುವ ಮೂಲಕ ಪುರುಷೋತ್ತಮ ಬಿಳಿಮಲೆ ಕರಾವಳಿಯ ಕಲೆ, ಸಂಸ್ಕೃತಿ ಹಾಗೂ ಹಿಂದು ಸಮಯದಾಯಕ್ಕೆ ಅಪಮಾನಗೈದಿದ್ದಾರೆ. ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿದ ಬಿಳಿಮನೆಯನ್ನು ಕೂಡಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ರಾಜ್ಯ ಸರ್ಕಾರ ಕಿತ್ತೆಸೆಯಬೇಕು. ಒಂದು ವೇಳೆ ಸರ್ಕಾರ ಈ ಕ್ರಮ ಕೈಗೊಳ್ಳದೇ ಇದ್ದರೆ ರಸ್ತೆಗಿಳಿದು ಹೋರಾಟ ನಡೆಸುವುದಾಗಿ ಬಿ.ವೈ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಪುರುಷೋತ್ತಮ ಬಿಳಿಮಲೆ ಯಕ್ಷಗಾನ ಕಲಾವಿದರ ವಿರುದ್ಧ ನಾಲಗೆ ಹರಿಬಿಟ್ಟಿದ್ದರು. ಯಕ್ಷಗಾನ ಕಲೆಯಲ್ಲಿ ಬಹುತೇಕರು ಸಲಿಂಗಕಾಮಿಗಳು. ಸ್ತ್ರೀ ವೇಷಧಾರಿಗಳು ಸಲಿಂಗಕಾಮ ನಿರಾಕರಿಸಿದರೆ ಭಾಗವತರು ಅವರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದರು. ಸಲಿಂಗಕಾಮ ನಿರಾಕರಿಸಿದ ಸ್ತ್ರೀ ವೇಷಧಾರಿಗಳಿಗೆ ಭಾಗವತರು ಪದ್ಯಗಳಲ್ಲಿ ಅವಕಾಶವೇ ಕೊಡುತ್ತಿರಲಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಯಕ್ಷಗಾನ ಕಲಾವಿದರ ಬಗ್ಗೆ ನಾಲಗೆ ಹರಿಬಿಟ್ಟಿದ್ದ ಪುರುಷೋತ್ತಮ ಬಿಳಿಮನೆಯಿಂದ ಕ್ಷಮೆಯಾಚನೆ
ವರ್ಷದಲ್ಲಿ ಆರೇಳು ತಿಂಗಳು ಮೇಳಕ್ಕೆಂದು ಮನೆಯಿಂದ ಹೊರಗೇ ಇರುತ್ತಿದ್ದ ಯಕ್ಷಗಾನ ಕಲಾವಿದರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಹೀಗಾಗಿ ಮೇಳಗಳ ಸ್ತ್ರೀ ವೇಷಧಾರಿಗಳ ಮೇಲೆ ಮೋಹ ಇರುತ್ತಿತ್ತು. ನಮಗೂ ಕೂಡ ಚಿಕ್ಕಂದಿನಲ್ಲಿ ಈಗಿನಂತೆ ದೀಪಿಕಾ ಪಡುಕೋಣೆಯೆಲ್ಲ ಕ್ರಶ್ ಆಗಿರಲಿಲ್ಲ. ನಮಗೂ ಆಗ ಯಕ್ಷಗಾನ ಸ್ತ್ರೀ ವೇಷಧಾರಿಗಳೇ ಮೊದಲ ಕ್ರಶ್ ಆಗಿದ್ದರು. ಯಕ್ಷಗಾನ ಮುಗಿಸಿ ಮನೆಗೆ ಹೋದ ಅನೇಕರಿಗೆ ಮನೆಯೇ ಇರುತ್ತಿರಲಿಲ್ಲ. ಅಂತಹ ಅನೇಕ ದುರಂತಗಳು ಸಂಭವಿಸಿವೆ. ಆದರೆ ಸಮಾಜಕ್ಕೆ ಅದನ್ನು ಗ್ರಹಿಸುವ ಶಕ್ತಿ ಇಲ್ಲ ಎಂದಿದ್ದರು.



