CAA : ಮೇ ಮೊದಲ ವಾರ ದೇಶಕ್ಕೆ ನಿರ್ಣಾಯಕ; ಏನಾಗಲಿದೆ ಸಿಎಎ ಭವಿಷ್ಯ? ಇಲ್ಲಿದೆ ಸಂಪೂರ್ಣ ವಿವರ!

ನವದೆಹಲಿ: ದೇಶದ ಕಣ್ಣೆಲ್ಲಾ ಈಗ ಸುಪ್ರೀಂ ಕೋರ್ಟ್ ಮೇಲೆ! ಹೌದು, ಆ ಒಂದು ದಿನಾಂಕ ಘೋಷಣೆಯ ಬೆನ್ನಲ್ಲೇ ಇಡೀ ಜನಸಮೂಹ ತಮ್ಮ ಕಿವಿಗಳನ್ನೆಲ್ಲಾ ನ್ಯಾಯಸೌಧದ ಮೆಟ್ಟಲಿಗೆ ವರ್ಗಾಯಿಸಿದ್ದಾರೆ. ಹೌದು, ಮೇ ದೇಶಕ್ಕೆ ನಿರ್ಣಾಯಕ ತಿಂಗಳಾಗಲಿದೆ. ಪೌರತ್ವ (ತಿದ್ದುಪಡಿ) ಕಾಯ್ದೆ, 2019 (CAA) ಕುರಿತಾದ ಕಾನೂನು ಹೋರಾಟವು ಅಂತಿಮ ಹಂತಕ್ಕೆ ತಲುಪಿದ್ದು, ಸುಪ್ರೀಂ ಕೋರ್ಟ್ ಮೇ 2026 ರಲ್ಲಿ ಅಂತಿಮ ವಿಚಾರಣೆ ನಡೆಸಲು ಸಿದ್ಧವಾಗಿದೆ. ಈ ಕಾಯ್ದೆಯು ಭಾರತದ ಸಾಂವಿಧಾನಿಕ ಚೌಕಟ್ಟಿನಲ್ಲಿ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಈ ಕೆಳಗಿನ ಪ್ರಮುಖ ಕಾನೂನು ಅಂಶಗಳು ಚರ್ಚೆಯ ಕೇಂದ್ರಬಿಂದುವಾಗಿವೆ.
CAA : 243 ಕ್ಕೂ ಹೆಚ್ಚು ಅರ್ಜಿಗಳ ಸವಾಲು
ಪೌರತ್ವ (ತಿದ್ದುಪಡಿ) ಕಾಯ್ದೆ, 2019 ಮತ್ತು ಅದರ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ 243ಕ್ಕೂ ಹೆಚ್ಚು ಅರ್ಜಿಗಳ ಅಂತಿಮ ವಿಚಾರಣೆಗೆ ಸುಪ್ರೀಂ ಕೋರ್ಟ್ ಫೆಬ್ರವರಿ 19 ರಂದು ದಿನಾಂಕವನ್ನು ನಿಗದಿಪಡಿಸಿದೆ. ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ.ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠವು ವಿಚಾರಣೆ ಮಾಡಲಿದೆ.
Aslo Read: ಚಿಕ್ಕಮಗಳೂರು: ದೇವಸ್ಥಾನದ ಭಜನೆ, ಜಾಗಟೆ ಶಬ್ದದಿಂದ ಕಿರಿಕಿರಿ : ಪೊಲೀಸ್ ಠಾಣೆ ಮೆಟ್ಟಿಲೇರಿದ ಅನ್ಯಕೋಮಿನ ವ್ಯಕ್ತಿ
ಹೇಗೆ ನಡೆಯಲಿದೆ ವಿಚಾರಣೆ?
ಮೇ 5 ರ ಪೂರ್ಣದಿನ ಮತ್ತು ಮೇ 6 ಮೊದಲಾರ್ಧ ಅರ್ಜಿದಾರರಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ – IUML ಪರ ವಾದ ಮಂಡನೆಯಾಗಲಿದೆ .ಮೇ 6 ರ ಮಧ್ಯಾಹ್ನದ ಮೇಲೆ ಹಾಗೂ ಮೇ 7 ರಂದು ಕೇಂದ್ರ ಸರ್ಕಾರದ ಪರ ವಾದ ಮಂಡನೆ ಮಾಡಲಾಗುತ್ತಿದೆ. ಮೇ 12ರಂದು ಮರು-ವಾದಗಳು (Rejoinders) ಮತ್ತು ವಿಚಾರಣೆಯ ಮುಕ್ತಾಯ. ಇದರ ನಂತರ ತೀರ್ಪನ್ನು ಕಾಯ್ದಿರಿಸಲಾಗುವುದು. ನ್ಯಾಯಾಲಯವು ಮೊದಲು ಅಖಿಲ ಭಾರತ ಮಟ್ಟದ ಅರ್ಜಿಗಳನ್ನು (Pan-India cases) ಆಲಿಸಲಿದೆ. ತದನಂತರ ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳಿಗೆ ಸಂಬಂಧಿಸಿದ ವಿಶೇಷ ಅರ್ಜಿಗಳ ಬ್ಯಾಚ್ ಅನ್ನು ವಿಚಾರಣೆಗೆ ತೆಗೆದುಕೊಳ್ಳಲಿದೆ.
ಕಳೆದೆರೆಡು ವರ್ಷಗಳಿಂದ ತಡೆಯಾಜ್ಞೆ
CAA ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಡಿಸೆಂಬರ್ 31, 2014 ಕ್ಕಿಂತ ಮೊದಲು ಭಾರತಕ್ಕೆ ಬಂದ ಮುಸ್ಲಿಮೇತರ ವಲಸಿಗರಿಗೆ (ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್) ತ್ವರಿತವಾಗಿ ಪೌರತ್ವ ನೀಡಲು ಅವಕಾಶ ಕಲ್ಪಿಸುತ್ತದೆ. ಈ ಕಾಯ್ದೆಯ ನಿಯಮಗಳನ್ನು ಮಾರ್ಚ್ 11, 2024 ರಂದು ಅಧಿಸೂಚಿಸಲಾಗಿತ್ತು. ಈ ಹಿಂದೆ 2024 ರಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಕಾಯ್ದೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.
ಇದೇ ಅರ್ಜಿದಾರರ ಗುರಾಣಿ!
ಅರ್ಜಿದಾರರ ಪರ ವಾದದ ಮುಖ್ಯ ಅಸ್ತ್ರವೆಂದರೆ ಸಂವಿಧಾನದ 14ನೇ ವಿಧಿ. ಇದು ಕಾನೂನಿನ ಮುಂದೆ ಎಲ್ಲರಿಗೂ ಸಮಾನ ರಕ್ಷಣೆ ನೀಡುತ್ತದೆ. ಧರ್ಮದ ಆಧಾರದ ಮೇಲೆ ವಲಸಿಗರನ್ನು ವರ್ಗೀಕರಿಸುವುದರಲ್ಲಿ ಯಾವುದೇ ತರ್ಕವಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಕೇವಲ ಮೂರು ದೇಶಗಳ ಆರು ಧರ್ಮಗಳ ಜನರಿಗೆ ಮಾತ್ರ ಪೌರತ್ವ ಸೀಮಿತಗೊಳಿಸಿರುವುದು ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ ಎಂಬುದು ಅವರ ನಿಲುವು.
ಈಶಾನ್ಯ ರಾಜ್ಯಗಳ ಆತಂಕ ಮತ್ತು ಅಸ್ಸಾಂ ಒಪ್ಪಂದ
1985ರ ಅಸ್ಸಾಂ ಒಪ್ಪಂದದ ಪ್ರಕಾರ, ಮಾರ್ಚ್ 24, 1971ರ ನಂತರ ಬಂದವರನ್ನು ಅಕ್ರಮ ವಲಸಿಗರೆಂದು ಪರಿಗಣಿಸಬೇಕು. ಆದರೆ CAA ಈ ಗಡುವನ್ನು 2014ಕ್ಕೆ ವಿಸ್ತರಿಸುವ ಮೂಲಕ ಅಸ್ಸಾಂನ ಜನಸಂಖ್ಯಾ ಸ್ವರೂಪ ಮತ್ತು ಸಾಂಸ್ಕೃತಿಕ ಗುರುತಿಗೆ ಅಪಾಯ ತಂದೊಡ್ಡಿದೆ ಎಂದು ಈಶಾನ್ಯ ರಾಜ್ಯಗಳ ಸಂಘಟನೆಗಳು ವಾದಿಸಿವೆ. ಸಂವಿಧಾನದ 6ನೇ ಅನುಸೂಚಿಯ ಉಳಿವಿಗೆ ಇದು ಸವಾಲಾಗಲಿದೆ
ಕೇಂದ್ರದ ಪ್ರತಿವಾದ ಹೇಳೋದೇನು?
ಇದಕ್ಕೆ ವಿರುದ್ಧವಾಗಿ, ಕೇಂದ್ರ ಸರ್ಕಾರವು ಪೌರತ್ವ ನೀಡುವುದು ಸಂವಿಧಾನದ 246ನೇ ವಿಧಿಯಡಿ ಕೇಂದ್ರದ ಸಾರ್ವಭೌಮ ಅಧಿಕಾರ ಎಂದು ಸಮರ್ಥಿಸಿಕೊಂಡಿದೆ. ನೆರೆಯ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವುದು ಮಾನವೀಯ ಹೊಣೆಗಾರಿಕೆಯಾಗಿದೆಯೇ ಹೊರತು ಯಾರ ಹಕ್ಕನ್ನೂ ಕಿತ್ತುಕೊಳ್ಳುವ ಉದ್ದೇಶವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸರ್ಕಾರದ ಉನ್ನತ ಕಾನೂನು ಸಲಹೆಗಾರರಾದ ಆರ್. ವೆಂಕಟರಮಣಿ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸರ್ಕಾರದ ಪರ ವಾದ ಮಂಡಿಸಲಿದ್ದಾರೆ.



