ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಸಾಂಕೇತಿಕ ಭಾಷಣ : ಕಾಂಗ್ರೆಸ್​ ಸದಸ್ಯರ ವಿರುದ್ಧ ಬಿಜೆಪಿ ಆಕ್ರೋಶ

ನರೇಗಾ ರದ್ದತಿ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆರಂಭಗೊಂಡಿದ್ದ ರಾಜ್ಯ ಸರ್ಕಾರದ ಸಮರ ಇದೀಗ ರಾಜ್ಯಪಾಲರ ವಿರುದ್ಧ ತಿರುಗಿದೆ. ರಾಜ್ಯ ಸರ್ಕಾರ ನೀಡಿದ ಭಾಷಣದಲ್ಲಿ 11 ಅಂಶಗಳ ಬದಲಾವಣೆಗೆ ಸೂಚಿಸಿದ್ದ ರಾಜ್ಯಪಾಲರಾದ ಥಾವರ್​ಚಂದ್​ ಗೆಹ್ಲೋಟ್​ ಇಂದು ಜಂಟಿ ಅಧಿವೇಶನಕ್ಕೆ ಗೈರಾಗುತ್ತಾರೆ ಎಂದೇ ಊಹಿಸಲಾಗಿತ್ತು. ಆದರೆ ಸದನಕ್ಕೆ ಬಂದ ರಾಜ್ಯಪಾಲರು ಭಾಷಣದ ಮೊದಲ ಪುಟ ಹಾಗೂ ಕೊನೆಯ ಪುಟದ 2 ಸಾಲುಗಳನ್ನು ಮಾತ್ರ ಓದುವ ಮೂಲಕ ಕಾಂಗ್ರೆಸ್​ ಸರ್ಕಾರದ ಕಣ್ಣು ಕೆಂಪಗಾಗಿಸಿದ್ದಾರೆ.

ಈ ಸಂದರ್ಭದಲ್ಲಿ ಪೂರ್ತಿ ಭಾಷಣ ಓದುವಂತೆ ಸಚಿವರಾದ ಎಚ್​.ಕೆ ಪಾಟೀಲ ಹಾಗೂ ಪ್ರಿಯಾಂಕ್​ ಖರ್ಗೆ ಪಟ್ಟು ಹಿಡಿದರು. ರಾಜ್ಯಪಾಲರ ಎದುರಿಗೆ ಬಂದು ನಿಂತ ಮಾಗಡಿ ಬಾಲಕೃಷ್ಣ ಹಾಗೂ ಶರತ್​ ಬಚ್ಚೇಗೌಡ ರಾಜ್ಯಪಾಲರ ಮೇಲೆ ಒತ್ತಡ ಹೇರಿದ ಪ್ರಸಂಗ ನಡೆದಿದೆ.
ರಾಜ್ಯಪಾಲರು ಸದನಕ್ಕೆ ಬಂದು ಕ್ಷಮೆ ಕೇಳಬೇಕು. ರಾಷ್ಟ್ರಗೀತೆ ಹೇಳದೇ ಹೋಗಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ನಿರ್ಣಯ ಮಂಡಿಸಿದ ಎಚ್​.ಕೆ ಪಾಟೀಲ್​ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಪೀಕರ್​ಗೆ ಬಿಜೆಪಿ ನೋಟಿಸ್​ ನೀಡಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್​. ಅಶೋಕ್​, ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿ ಇಂದು ಅತ್ಯಂತ ಕರಾಳ ದಿನ. ರಾಜ್ಯಪಾಲರಾದ ಥಾವರ್​ ಚಂದ್ ಗೆಹ್ಲೋಟ್​ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಹಾಜರಾಗಿ ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿಭಾಯಿಸಿದ್ದಾರೆ.
ಆದರೆ ಕಾಂಗ್ರೆಸ್​ ಪಕ್ಷದ ಶಾಸಕರು ಬೀದಿ ರೌಡಿಗಳಂತೆ ವರ್ತಿಸುವ ಮೂಲಕ ಸಂವಿಧಾನಕ್ಕೆ, ರಾಜ್ಯಪಾಲರಿಗೆ ಹಾಗೂ ಸದನಕ್ಕೆ ಅಗೌರವ ತೋರಿದ್ದಾರೆ. . ಸದನದ ಸಂಪ್ರದಾಯ ಹಾಗೂ ನಿಯಮಾವಳಿಗಳನ್ನ ಗಾಳಿಗೆ ತೂರಿ ರಾಜ್ಯಪಾಲರ ಭಾಷಣಕ್ಕೆ ಮೂಲಕ ಅಡ್ಡಿ ಪಡಿಸುವ ಮೂಲಕ ಸದನಕ್ಕೆ ಅಪಮಾನ ಎಸಗಿದ್ದಾರೆ.

ಸದನದ ಹಿರಿಯ ಸದಸ್ಯರು ಹಾಗೂ ಕಾನೂನು ಸಚಿವರಾದ ಎಚ್​.ಲೆ ಪಾಟೀಲರೇ ಅವರೇ ಸ್ವತಃ ಈ ಕೆಟ್ಟ ಸಂಪ್ರದಾಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿರುವುದು ನಿಜಕ್ಕೂ ನಾಚಿಕೆಗೇಡು ಮತ್ತು ಖಂಡನೀಯ. ಕಾನೂನು ಸಚಿವ ಶ್ರೀ ಹೆಚ್.ಕೆ.ಪಾಟೀಲರಿಗೆ ಆ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರೆಯುವ ಅರ್ಹತೆ ಇಲ್ಲ.

ಇಷ್ಟಕ್ಕೂ ರಾಜ್ಯಪಾಲರು ಈ ರೀತಿ ತಮ್ಮ ಭಾಷಣವನ್ನ ಪೂರ್ತಿ ಓದದೆ ಕೇವಲ ಸಾಂಕೇತಿಕವಾಗಿ ಮಂಡಿಸಿ ಹೊರಟಿರುವುದು ಇದೇನು ಮೊದಲಲ್ಲ. ಈ ಹಿಂದೆ ಮಾಜಿ ರಾಜ್ಯಪಾಲರುಗಳಾದ ಶ್ರೀ ಖುರ್ಷಿದ್ ಆಲಂ ಖಾನ್ ಹಾಗೂ ಶ್ರೀ ಹಂಸರಾಜ್ ಭಾರಧ್ವಾಜ್ ಅವರು ಈ ರೀತಿ ಮಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಸರ್ಕಾರಕ್ಕೆ ರಾಜ್ಯಪಾಲರ ಸೆಡ್ಡು : ಜಂಟಿ ಅಧಿವೇಶನದಲ್ಲಿ ಭಾಷಣಕ್ಕೆ ನಕಾರ

ಇನ್ನು ವಿಧಾನ ಪರಿಷತ್ ನಲ್ಲಿ ಸದಸ್ಯರಾದ ಬಿ.ಕೆ ಹರಿಪ್ರಸಾದ್​ ಅವರು ಒಬ್ಬ ಪುಡಿ ರೌಡಿ ರೀತಿ ನಡೆದುಕೊಂಡಿರುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಗೆ ಕನ್ನಡಿ ಹಿಡಿದಂತಿತ್ತು. ಇಂದಿನ ಘಟನಾವಳಿಗಳು ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನವಾಗಿದ್ದು, ಸದನದ ಗೌರವಕ್ಕೆ ಚ್ಯುತಿ ತರುವ ರೀತಿ ಗೂಂಡಾ ವರ್ತನೆ ತೋರಿದ ಕಾಂಗ್ರೆಸ್ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಪೀಕರ್​ಗೆ ಮನವಿ ಮಾಡಿರುವುದಾಗಿ ಆರ್​.ಅಶೋಕ್​ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories