ಪರಿಷತ್ ಚುನಾವಣೆ ದಿನಾಂಕ ಪ್ರಕಟಕ್ಕೂ ಮೊದಲೇ ಬಿಜೆಪಿ ಅಭ್ಯರ್ಥಿ ಪ್ರಕಟ : ಜೆಡಿಎಸ್ಗೆ ಒಂದು ಸ್ಥಾನ
ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವ ಬಿಜೆಪಿ, ಇನ್ನುಳಿದ ಮೂರು ಈಶಾನ್ಯ ಶಿಕ್ಷಕರ ಕ್ಷೇತ್ರ, ಪೂರ್ವ ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ರಾಜ್ಯದಲ್ಲಿ 4 ಕ್ಷೇತ್ರಗಳಲ್ಲಿ ವಿಧಾನಪರಿಷತ್ ಚುನಾವಣೆ ಹಾಗೂ 2 ಕ್ಷೇತ್ರಗಳಿಗೆ ವಿಧಾನಸಭಾ ಉಪಚುನಾವಣೆ ನಡೆಯಬೇಕಿದೆ. ಆದರೆ ಈ ಯಾವುದೇ ಚುನಾವಣೆಗಳಿಗೆ ದಿನಾಂಕ ಪ್ರಕಟಗೊಂಡಿಲ್ಲ. ಇದಕ್ಕೂ ಮುನ್ನವೇ ಬಿಜೆಪಿ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ನಾಳ್ಕು ಸ್ಥಾನಗಳ ಪೈಕಿ 3 ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು 1 ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಈ ಮೂಲಕ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಕಮಲಪಾಳಯ ಖಾತರಿಪಡಿಸಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವ ಬಿಜೆಪಿ, ಇನ್ನುಳಿದ ಮೂರು ಈಶಾನ್ಯ ಶಿಕ್ಷಕರ ಕ್ಷೇತ್ರ, ಪೂರ್ವ ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಸುಶೀಲ್ ನಮೋಶಿ, ಪೂರ್ವ ಪದವೀಧರ ಕ್ಷೇತ್ರಕ್ಕೆ ಎಸ್.ವಿ ಸಂಕನೂರ್ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದ ಟಿಕೆಟ್ ಕೆ.ಎಂ.ಸುರೇಶ್ ಅವರ ಹೆಸರನ್ನು ಬಿಜೆಪಿ ಘೋಷಣೆ ಮಾಡಿದೆ.
ಇದನ್ನೂ ಓದಿ: ಬಿಎಂಟಿಸಿ, ನಮ್ಮ ಮೆಟ್ರೋ ಪ್ರಯಾಣಕ್ಕೆ ಇನ್ಮುಂದೆ ಒಂದೇ ಸ್ಮಾರ್ಟ್ ಕಾರ್ಡ್ : ಯಾರಿಗೆಲ್ಲ ಲಾಭ ?
ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ಯಾರನ್ನು ಕಣಕ್ಕಿಳಿಸಲಿದೆ ಎನ್ನುವುದುಸದ್ಯದ ಕುತೂಹಲದ ಪ್ರಶ್ನೆಯಾಗಿದೆ. ಸದ್ಯ ಈ ಕ್ಷೇತ್ರವನ್ನು ಕಾಂಗ್ರೆಸ್ನ ಪುಟ್ಟಣ್ಣ ಪ್ರತಿನಿಧಿಸುತ್ತಿದ್ದಾರೆ. ಜೆಡಿಎಸ್ ಪರಿಷತ್ ಚುನಾವಣೆಯಲ್ಲಿ 4 ಕ್ಷೇತ್ರಗಳ ಪೈಕಿ 2 ಕ್ಷೇತ್ರ ತನಗೆ ಬಿಟ್ಟುಕೊಡಬೇಕೆಂದು ಬೇಡಿಕೆ ಇಟ್ಟಿತ್ತು. ಬೆಂಗಳೂರು ಜೊತೆಯಲ್ಲಿ ಆಗ್ನೇಯ ಪದವಿಧರರ ಕ್ಷೇತ್ರಕ್ಕೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಜೆಡಿಎಸ್ ಹೇಳಿತ್ತು. ಆದರೆ ಇದಕ್ಕೆ ಒಪ್ಪದ ಬಿಜೆಪಿ ಕೇವಲ 1 ಕ್ಷೇತ್ರವನ್ನು ಮಾತ್ರ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ.



