ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದ ಸಂಕ್ರಾಂತಿ ಕ್ರಾಂತಿ : ಸಿಎಂ, ಡಿಸಿಎಂಗೆ ದೆಹಲಿಗೆ ಬುಲಾವ್
ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ನವೆಂಬರ್ ಕ್ರಾಂತಿ ಚಳಿಗಾಲದ ಅಧಿವೇಶನದ ಬಳಿಕ ತಣ್ಣಗಾಗಿತ್ತು. ಆದರೂ ತೆರೆ ಮರೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಲೇ ಇದ್ದರು. ಇದೀಗ ಮತ್ತೊಮ್ಮೆ ರಾಜ್ಯದಲ್ಲಿ ಸಂಕ್ರಾಂತಿ ಕ್ರಾಂತಿ ಸದ್ದು ಮಾಡುತ್ತಿದ್ದು ಮುಂದಿನ ವಾರದಿಂದ ಮತ್ತೊಮ್ಮೆ ಅಧಿಕಾರ ಹಸ್ತಾಂತರ ವಿಚಾರ ದೆಹಲಿಯಲ್ಲಿ ಸದ್ದು ಮಾಡಲಿದೆ ಎನ್ನಲಾಗಿದೆ.
ಸದ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಿ ಪ್ರವಾಸದಲ್ಲಿದ್ದಾರೆ. ರಾಹುಲ್ ಗಾಂಧಿ ಭಾರತಕ್ಕೆ ಮರಳುತ್ತಿದ್ದಂತೆಯೇ ಪವರ್ ಶೇರಿಂಗ್ ವಿಚಾರದ ಬಗ್ಗೆ ಇತ್ಯರ್ಥ ನಡೆಯಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಂದಿನ ವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಬುಲಾವ್ ನೀಡಲಿದೆ. ಕಾಂಗ್ರೆಸ್ ವರಿಷ್ಠರ ಸಮ್ಮುಖದಲ್ಲಿ ಪವರ್ ಶೇರಿಂಗ್ ಕಗ್ಗಂಟು ಬಗೆಹರಿಸುವ ಪ್ರಯತ್ನ ನಡೆಯಲಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಸ್ವತಃ ಶ್ರೀರಾಮನಿದ್ದಂತೆ! ಕಾಂಗ್ರೆಸ್ ನಾಯಕನಿಂದ ಹೊಸ ವಿವಾದ
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಈಗಾಗಲೇ ಅನೇಕ ಬಾರಿ ದೆಹಲಿಗೆ ಭೇಟಿ ನೀಡಿದ್ದಾರೆ. ಆದರೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಸಿಡಬ್ಲುಸಿ ಸಭೆಯಲ್ಲಿ ಸಿದ್ದರಾಮಯ್ಯ – ರಾಹುಲ್ ಭೇಟಿಯಾಗಿದ್ದರೂ ವೈಯಕ್ತಿಕ ಮಾತುಕತೆ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಈ ಗೊಂದಲಕ್ಕೆ ತೆರೆ ಎಳೆಯಲು ರಾಹುಲ್ ಗಾಂಧಿ ಮುಂದಾಗಿದ್ದು ಜನವರಿ 8 ಅಥವಾ 9ರಂದು ದೆಹಲಿಗೆ ಆಹ್ವಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಂಧಾನ ಸಭೆಯಲ್ಲಿ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದರ ಕುರಿತು ಸ್ಪಷ್ಟ ಸಂದೇಶ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.



