Virat Kohli Rohit Sharma : ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಮಧ್ಯೆ ಕೋಲ್ಡ್ ವಾರ್ ಇದ್ಯಾ..? ಹಾಗಾದ್ರೆ ಇದೇನು ?

ಹೈದರಾಬಾದ್: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli Rohit Sharma) ಭಾರತ ತಂಡದ ಬ್ಯಾಟಿಂಗ್ ಆಧಾರಸ್ಥಂಭಗಳು. ಕಳೆದ 13-14 ವರ್ಷಗಳಿಂದ ಜೊತೆಯಾಗಿ ಆಡುತ್ತಿರುವ ಇಬ್ಬರ ಮಧ್ಯೆ ಶೀತಲ ಸಮರ ನಡೆದದ್ದೂ ಇದೆ. ಈ ಬಗ್ಗೆ ಇಬ್ಬರೂ ಆಟಗಾರರ ಅಭಿಮಾನಿ ಗಳ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪೈಪೋಟಿ ನಡೆದದ್ದೂ ಆಗಿದೆ.

ಹೊರ ಜಗತ್ತಿನಲ್ಲಿ ಏನ್ ನಡೀತಾ ಇದ್ಯೋ ಗೊತ್ತಿಲ್ಲ, ಆದ್ರೆ ನಾವಿಬ್ಬರೂ ಟೀಮ್ ಇಂಡಿಯಾದ ಜೋಡೆತ್ತುಗಳು ಎಂಬುದನ್ನು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪದೇ ಪದೇ ಸಾಬೀತು ಪಡಿಸುತ್ತಿದ್ದಾರೆ. ಇದಕ್ಕೆ ಮತ್ತೊಂದು ಸಾಕ್ಷಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟಿ20 ಪಂದ್ಯದ ವೇಳೆ ನಡೆದ ಅದೊಂದು ಘಟನೆ.

ಹೈದರಾಬಾದ್’ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸರಣಿ ನಿರ್ಣಾಯಕ 3ನೇ ಪಂದ್ಯದಲ್ಲಿ (India Vs Australia T20 Series) ಆಸ್ಟ್ರೇಲಿಯಾ ವಿರುದ್ಧ ಭಾರತ 6 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿ 3 ಪಂದ್ಯಗಳ ಸರಣಿಯನ್ನು 2-1ರಲ್ಲಿ ಗೆದ್ದುಕೊಂಡಿತು. ಭಾರತ ಪಂದ್ಯ ಗೆಲ್ಲುತ್ತಲೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸಂಭ್ರಮಿಸಿದ ರೀತಿ ಇಬ್ಬರೂ ಆಟಗಾರರ ಅಭಿಮಾನಿಗಳ ಕಣ್ಣಿಗೆ ಹಬ್ಬದಂತಿತ್ತು. ಪಂದ್ಯದ ಅಂತಿಮ ಕ್ಷಣಗಳಲ್ಲಿ ಪೆವಿಲಿಯನ್’ನ ಮೆಟ್ಟಿಲುಗಳ ಮೇಲೆ ಕೂತಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ಭಾರತ ಗೆಲ್ಲುತ್ತಿದ್ದಂತೆ ಒಬ್ಬರನ್ನೊಬ್ಬರು ಸಂಭ್ರಮಿಸುತ್ತಾ, ಪರಸ್ಪರ ತಬ್ಬಿಕೊಂಡು ಗೆಲುವನ್ನು ಆನಂದಿಸಿದರು. ಆ ವೀಡಿಯೊವನ್ನು ಟ್ವಿಟರ್’ನಲ್ಲಿ ಪ್ರಕಟಿಸಿರುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ, “ಇದು ಇವರಿಬ್ಬರ ಮಧ್ಯೆ ಇರುವ ಬಾಂಧವ್ಯ. ಅಭಿಮಾನಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಬರೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ನಿಗದಿತ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಭಾರತ 19.5 ಓವರ್’ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 187 ರನ್ ಗಳಿಸಿ ಸರಣಿ ಕೈವಶ ಮಾಡಿಕೊಂಡಿತು. ಆರಂಭಿಕರಾದ ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ 30 ರನ್’ಗಳ ಒಳಗೆ ಪೆವಿಲಿಯನ್ ಸೇರಿಕೊಂಡಾಗ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಶತಕದ ಜೊತೆಯಾಟವಾಡಿ ತಂಡದ ಗೆಲುವಿಗೆ ಕಾರಣರಾದರು. ವಿರಾಟ್ ಕೊಹ್ಲಿ 48 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್’ಗಳ ಸಹಿತ 63 ರನ್ ಗಳಿಸಿದ್ರೆ, ಸ್ಫೋಟಕ ಆಟವಾಡಿದ ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ಸ್ ನೆರವಿನಿಂದ 69 ರನ್ ಬಾರಿಸಿ ಪಂದ್ಯಶ್ರೇಷ್ಠರಾಗಿ ಮೂಡಿಬಂದರು. ಆಸ್ಟ್ರೇಲಿಯಾ ವಿರುದ್ಧದ ಸರಣಿ ಕೈವಶ ಮಾಡಿಕೊಂಡಿರುವ ಭಾರತ, ಸೆಪ್ಟೆಂಬರ್ 28ರಿಂದ ಆರಂಭ ಆಗಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Kohli Breaks Dravid Record : ರಾಹುಲ್ ದ್ರಾವಿಡ್ ಎದುರಲ್ಲೇ ದಿ ವಾಲ್ ರೆಕಾರ್ಡ್ ಬ್ರೇಕ್ ಮಾಡಿದ ವಿರಾಟ್ ಕೊಹ್ಲಿ

ಇದನ್ನೂ ಓದಿ : Arjun Tendulkar Yograj Singh : ಸಚಿನ್ ತೆಂಡೂಲ್ಕರ್ ಪುತ್ರನಿಗೆ ಯುವರಾಜ್ ಸಿಂಗ್ ತಂದೆಯೇ ಕೋಚ್

Virat Kohli and Rohit Sharma Cold war Special Video India Vs Australia T20 Series

Comments are closed.