ಸಂಚಾರ ಉಲ್ಲಂಘನೆ ದಂಡ ಪಾವತಿಗೆ ರಿಯಾಯಿತಿ ಬೆನ್ನಲ್ಲೇ ಜಲಮಂಡಳಿಯಿಂದ ಹೊಸ ಆಫರ್ : ಗ್ರಾಹಕರಿಗೆ ಸುವರ್ಣಾವಕಾಶ
ಕೆಲವು ದಿನಗಳ ಹಿಂದೆಯಷ್ಟೇ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಬಾಕಿ ಇರುವವರಿಗೆ ಭರ್ಜರಿ ಆಫರ್ ನೀಡಲಾಗಿತ್ತು. ದಂಡ ಪಾವತಿಗೆ 50 ಪರ್ಸೆಂಟ್ ರಿಯಾಯಿತಿ ನೀಡಿದ ಕಾರಣ ಜನರು ಸಾಗರೋಪಾದಿಯಲ್ಲಿ ಟ್ರಾಫಿಕ್ ಫೈನ್ ಪಾವತಿ ಮಾಡಿದ್ದರು. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೇ ಆದಾಯ ಹರಿದು ಬಂದಿತ್ತು.
ಇದೀಗ ಇಂತಹದ್ದೇ ಒಂದು ಪ್ಲಾನ್ನ್ನು ಬೆಂಗಳೂರಿನ ಜಲಮಂಡಳಿ ಮಾಡಿದೆ. ಬಾಕಿ ಇರುವ ಬಿಲ್ ಪಾವತಿಗೆ ಗ್ರಾಹಕರಿಗೆ ಹೊಸದೊಂದು ಸುವರ್ಣಾವಕಾಶ ನೀಡಿದೆ. ಆದರೆ ಟ್ರಾಫಿಕ್ ಫೈನ್ನಂತೆ 50 ಪರ್ಸೆಂಟ್ ರಿಯಾಯಿತಿ ನೀಡಲಾಗಿಲ್ಲ. ಬದಲಿಗೆ ವರ್ಷಗಟ್ಟಲೇ ನೀರಿನ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡವರಿಗೆ ಅದರ ಮೇಲೆ ಹೇರಲಾದ ಬಡ್ಡಿ ಹಾಗೂ ದಂಡವನ್ನು ಮನ್ನಾ ಮಾಡುವುದಾಗಿ ಜಲಮಂಡಳಿ ಮಾಹಿತಿ ನೀಡಿದೆ.
ಈ ರೀತಿ ಒನ್ ಟೈಮ್ ಸೆಟಲ್ಮೆಂಟ್ಗೆ ರಾಜ್ಯ ಸರ್ಕಾರ ಕೂಡ ಒಪ್ಪಿಗೆ ನೀಡಿದೆ ಎನ್ನಲಾಗಿದ್ದು, ಜನವರಿ ಆರಂಭದಿಂದಲೇ ಈ ಆಫರ್ ಜಾರಿಗೆ ಬರಲಿದೆ. ಆದರೆ ಇಲ್ಲಿ ಅಸಲು ಪೂರ್ತಿ ಕಟ್ಟಬೇಕು. ಇದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ಬಿಲ್ ಪಾವತಿ ಮಾಡದೇ ಇರುವುದಕ್ಕೆ ವಿಧಿಸಲಾದ ದಂಡ ಹಾಗೂ ಬಡ್ಡಿ ಇದು ಮಾತ್ರ ಸಂಪೂರ್ಣವಾಗಿ ಮನ್ನಾ ಆಗಲಿದೆ.
ಇದನ್ನೂ ಓದಿ: ಬೀದಿ ನಾಯಿಗಳಿಗೆ ಶೀಘ್ರದಲ್ಲೇ ಬಿರಿಯಾನಿ ಭಾಗ್ಯ : ಜಿಬಿಎ ಶ್ವಾನಗಳ ನಿರ್ವಹಣೆಗೆ ಪ್ರಾಣಿದಯಾ ಸಂಘ ಅಸಮಾಧಾನ
ಅನೇಕರಿಗೆ ನೀರಿನ ಬಾಕಿ ಬಿಲ್ಗಿಂತ ಅದರ ಮೇಲೆ ಹಾಕಲಾದ ಬಡ್ಡಿ ಮೊತ್ತವೇ ಜಾಸ್ತಿಯಾಗಿತ್ತು. ಈ ರೀತಿಯ ಸಂಕಷ್ಟದಲ್ಲಿ ಇದ್ದವರಿಗೆ ಜಲಮಂಡಳಿ ನೀಡಿರುವ ಈ ಆಫರ್ ಖಂಡಿತ ವರದಾನವಾಗಲಿದೆ. ಕೇವಲ ಮೂರು ತಿಂಗಳ ಅವಧಿಗೆ ಮಾತ್ರ ಈ ಆಫರ್ ನೀಡಲಾಗಿದ್ದು ಗ್ರಾಹಕರಿಗೆ ಹೆಚ್ಚಿನ ಲಾಭ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಸದ್ಯಕ್ಕೆ ಈ ಸುವರ್ಣಾವಕಾಶ ಕೇವಲ ಬೆಂಗಳೂರಿಗರಿಗೆ ಮಾತ್ರ ಸೀಮಿತವಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಜಾರಿಗೆ ಬರುವ ನಿರೀಕ್ಷೆ ಇದೆ.



