ರಾಜ್ಯದಲ್ಲಿ ಮುಂದುವರಿದ ಶೀತಗಾಳಿಯ ಅಬ್ಬರ : ಭಾರೀ ಚಳಿಗೆ ಕರ್ನಾಟಕ ಗಢ ಗಢ
ಇಷ್ಟು ದಿನ ವರುಣನ ನರ್ತನಕ್ಕೆ ತತ್ತರಿಸಿದ್ದ ರಾಜ್ಯದ ಜನತೆ ಈಗ ಕುಸಿಯುತ್ತಿರುವ ತಾಪಮಾನದಿಂದಾಗಿ ಗಢ ಗಢ ನಡುಗುವಂತಾಗಿದೆ. ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಲೇ ಇದ್ದು ಮೈನಡುಗಿಸುವ ಚಳಿಗೆ ತತ್ತರಿಸಿದ್ದಾರೆ. ಈ ಎಲ್ಲದರ ನಡುವೆ ರಾಜ್ಯದಲ್ಲಿ ಇನ್ನೂ 2 ದಿನಗಳ ಕಾಲ ಶೀತಗಾಳಿ ಇದೇ ರೀತಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಲ್ಲಿ ಮುಂದಿನ 2 ದಿನಗಳ ಶೀತ ಅಲೆ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಶೀತ ಅಲೆ ವ್ಯಾಪಕವಾಗಿ ಪರಿಣಾಮ ಬೀರಲಿರುವ ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಬದಲಾಗಲಿದೆಯಾ ಶಾಲಾ ಆರಂಭದ ಸಮಯ? ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಆಗ್ರಹ
ಇನ್ನುಳಿದಂತೆ ಬಾಗಲಕೋಟೆ, ಬೆಳಗಾವಿ, ಧಾರಾವಾಡ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಶೀತ ಅಲೆ ಇರಲಿದ್ದು, ಹೀಗಾಗಿ, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇತ್ತ ಕರಾವಳಿ ಭಾಗದಲ್ಲಿಯೂ ಚಳಿ ಮುಂದುವರಿದಿದೆ. ಬಹಳ ವರ್ಷಗಳ ಬಳಿಕ ಕರಾವಳಿ ಜಿಲ್ಲೆಗಳಲ್ಲಿ ಈ ಪ್ರಮಾಣದಲ್ಲಿ ಶೀತ ಅಲೆ ಕಾಣಿಸಿಕೊಂಡಿದೆ. ಮುಂಜಾನೆ ಹಾಗೂ ರಾತ್ರಿ ಸಮಯದಲ್ಲಿ ಚಳಿಯ ಪ್ರಮಾಣ ಅತ್ಯಧಿಕವಾಗಿದ್ದು ಗ್ರಾಮೀಣ ಭಾಗಗಳಲ್ಲಿ 18 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗುತ್ತಿದೆ.



