ಬಿಪಿಎಲ್ ಕಾರ್ಡ್ ನಿಯಮಾವಳಿಗಳಲ್ಲಿ ಮತ್ತಷ್ಟು ಕಠಿಣತೆ : ಈ ದಾಖಲೆಗಳನ್ನು ಸಲ್ಲಿಸಿದರೆ ಮಾತ್ರ ಹೆಸರು ಸೇರ್ಪಡೆಗೆ ಅವಕಾಶ
ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳ ವಿರುದ್ಧ ಸಮರ ಸಾರಿರುವ ರಾಜ್ಯ ಆಹಾರ ಇಲಾಖೆ ಈಗಾಗಲೇ ಲಕ್ಷಾಂತರ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಿದೆ. ಅರ್ಹ ಫಲಾನುಭವಿಗಳಿಗೆ ಆಹಾರ ಭದ್ರತೆ ದೊರಕಲಿ ಎಂಬ ಉದ್ದೇಶದಿಂದ ಬಿಪಿಎಲ್ ಕಾರ್ಡ್ ನಿಯಮಾವಳಿಗಳನ್ನು ಮತ್ತಷ್ಟು ಕಠಿಣಗೊಳಿಸಲಾಗುತ್ತಿದೆ. ಇದೀಗ ಬಿಪಿಎಲ್ ಕಾರ್ಡ್ಗೆ ಹೊಸ ಸದಸ್ಯರ ಸೇರ್ಪಡೆಗೂ ಹಲವು ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಬಿಪಿಎಲ್ ಪಡಿತರ ಚೀಟಿಯಲ್ಲಿ ಇನ್ಮುಂದೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು, ಜಾತಿ, ಆದಾಯ, ಆಧಾರ್ ಹಾಗೂ ವಿವಾಹ ನೋಂದಣಿ ಪ್ರಮಾಣ ಪತ್ರ ಸೇರಿದಂತೆ ಇನ್ನೂ ಅನೇಕ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಇನ್ನು ಆರು ವರ್ಷ ಮೇಲ್ಪಟ್ಟವರನ್ನು ಪಡಿತರ ಕಾರ್ಡ್ಗೆ ಸೇರ್ಪಡೆ ಮಾಡಲು ಮಕ್ಕಳ ಜನನಪ್ರಮಾಣ ಪತ್ರ, ಆಧಾರ್ ಕಾರ್ಡ್, ಪೋಷಕರ ಆಧಾರ್ ಕಾರ್ಡ್ ಹಾಗೂ ತಂದೆ – ತಾಯಿ ಪಡಿತರ ಚೀಟಿಯ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಆಹಾರ ಇಲಾಖೆ ಮಾಹಿತಿ ನೀಡಿದೆ.
ಇನ್ನು ಬೇರೆಡೆಗೆ ಮದುವೆಯಾಗಿ ಬರುವ ಮಹಿಳೆಯರು ಈ ಎಲ್ಲಾ ದಾಖಲೆಗಳ ಜೊತೆಗೆ ಹಳೆಯ ಕಾರ್ಡ್ನಿಂದ ತಮ್ಮ ಹೆಸರನ್ನು ತೆಗೆಸಿರುವ ದಾಖಲೆಯನ್ನು ಸಲ್ಲಿಸುವುದು ಕೂಡ ಕಡ್ಡಾಯವಾಗಿರಲಿದೆ. ಬೆಂಗಳೂರು ಒನ್, ಅಥವಾ ಸೈಬರ್ ಸೆಂಟರ್ಗಳಲ್ಲಿ ಸೂಕ್ತ ದಾಖಲೆಗಳನ್ನು ಸಲ್ಲಿಸುವ ಮೂಲಕ ಸ್ವಯಂ ಅರ್ಜಿ ಸಲ್ಲಿಕೆಗೂ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಮನುಷ್ಯರಂತೆ ಪ್ರಾಣಿಗಳಿಗೂ ಇನ್ಮುಂದೆ ಆಧಾರ್ ಕಾರ್ಡ್ : ಕ್ಯೂಆರ್ ಕೋಡ್ನಲ್ಲಿರಲಿದೆ ಸಂಪೂರ್ಣ ಮಾಹಿತಿ
ಅನರ್ಹ ಬಿಪಿಎಲ್ ಕಾರ್ಡ್ದಾರರನ್ನು ಪತ್ತೆ ಮಾಡುವ ಕ್ರಮವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅರ್ಹರಿಗೆ ಸರ್ಕಾರದ ಸೌಲಭ್ಯಗಳು, ಆಹಾರ ಭದ್ರತೆ ದೊರಕಬೇಕು ಎಂದು ಆಹಾರ ಇಲಾಖೆ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬಿಪಿಎಲ್ ಕಾರ್ಡ್ ನಿಯಮಾವಳಿಗಳಲ್ಲಿ ದಿನದಿಂದ ದಿನಕ್ಕೆ ಕಠಿಣತೆ ತರಲಾಗುತ್ತಿದೆ.



