ಎಲ್ಲಾ ಎಲಾನ್ ಅಣ್ಣನ ಪವಾಡ, ಇನ್ಮೇಲೆ ನಿಮ್ಮೆಲ್ಲ ಪ್ರಶ್ನೆಗೂ ಉತ್ತರ ಸಿಗುತ್ತಂತೆ!
ಈಗಿನ ಜಮಾನಾ ಹೇಗ್ ಆಗ್ಬಿಟ್ಟಿದೆಯೆಂದರೆ ಎಲಾನ್ ಮಸ್ಕ್ ಏನು ಯೋಚನೆ ಮಾಡ್ತಾನೋ, ಏನ್ ಹೊಸಾ ಸ್ಕೀಮ್ ಹಾಕ್ತಾನೋ ಅನ್ನೋ ಕುತೂಹಲದ ಕಣ್ಣು ಹೊಂದಿ ಕಾಯ್ತಾ ಇದೆ. ಅದೂ ಕೂಡ ಹಳ್ಳಿಯಿಂದ ಹಾಲಿವುಡ್ ವರೆಗೆ!
ಬಂತು ಗ್ರೋಕಿಪೀಡಿಯಾ! ತಂತು ಹೊಸ ಹೊಸ ವಿಷಯ
ಇಂತಹ ಸಮಯದಲ್ಲಿ ತನ್ನ ಕುತೂಹಲ ರಸಿಕ ಜನರಿಗೆ ಎಲಾನ್ ನಿರಾಸೆ ಏನು ಮಾಡೋಲ್ಲ! ಈಗ ಆತ ಮತ್ತೆ ಸುದ್ದಿಯಲ್ಲಿದ್ದಾನೆ! ವಿಕಿಪೀಡಿಯಾ ಗೊತ್ತಲ್ವ ? ರೀಲ್ಸ್ ಮಾಡೋ ಜನ ಅಲ್ಲ ಮಾರ್ರೇ, ವಿಕಿಪೀಡಿಯಾ ತಂತ್ರಾಂಶ ಅದಕ್ಕೆ ಪೈಪೋಟಿ ಕೊಡೋಕೆ ಹೊಸ ತಂತ್ರಾಂಶ ಲಾಂಚ್ ಮಾಡಿದಾನೆ. ಇದರ ಹೆಸರು ಏನು ಗೊತ್ತಾ? ಗ್ರೋಕಿಪೀಡೀಯಾ! ನಿನ್ನೆಯಿಂದ ಇದು ಕಾರ್ಯಾರಂಭಗೊಂಡಿದೆ.
ಎಕ್ಸ್ ನ ಪ್ರೀಮಿಯಂ ಬಳಕೆದಾರರಿಗೆ ಮಾತ್ರ!
ಇನ್ನೊಂದ್ ವಿಷಯ ಏನಪ್ಪ ಅಂದ್ರೆ ಇದು ಎಲ್ರಿಗೂ ಸಿಗೋ ವ್ಯವಸ್ಥೆ ಅಲ್ಲ, ಯಾರು ಎಕ್ಸ್ ಅಕೌಂಟ್ ಪ್ರೀಮಿಯಮ್ ಹೊಂದಿರುತ್ತಾರೋ ಅವರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗುತ್ತೆ. ಈಗ ಎಲಾನ್ ಗ್ರೋಕಿಪೀಡಿಯಾ 0.1 ಲಾಂಚ್ ಮಾಡಿದಾನೆ. ಈ ಗ್ರೋಕೀಪೀಡಿಯಾ ವನ್ನ ಆತ ತನ್ನ ಎಕ್ಸ್ ಎಐ ನ ಗ್ರೋಕ್ ಮೂಲಕ ನಿಯಂತ್ರಿಸುತ್ತಿದ್ದಾನೆ. ಇದನ್ನು ಒಂದು ಸ್ವತಂತ್ರ ಟೀಂ ನಿರ್ವಹಣೆ ಮಾಡುತ್ತಿದೆ. ಮತ್ತೆ ಈಗಾಗಲೇ ಇದರಲ್ಲಿ 8,85,279 ಲೇಖನಗಳಿವೆ. ಆದರೆ ವಿಕಿಪೀಡಿಯ ದಂತೆ ಇದರಲ್ಲಿ ಬಳಕೆದಾರರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಈಗ ಗ್ರೋಕಿಪೀಡಿಯಾ ಒಂದು ಸಣ್ಣ ಸರ್ಚ್ ಬಾರ್ ಒಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಆದರೆ ಎಲಾನ್ ಯೋಜನೆಗಳ ಪ್ರಕಾರ ಆತ ಗ್ರೋಕಿಪೀಡಿಯಾ 1.0 ತರಲಿದ್ದಾನೆ. ಇದು ಏನೆಂದರೆ ಈಗ ನಾವು ಹೊಂದಿರುವ ಮಾನವ ಮನಸ್ಸಿನ ಸರಿ-ತಪ್ಪುಗಳ ಗೊಂದಲ ಬಗೆಹರಿಸಿ ಸತ್ಯಾನ್ವೇಷಣೆಯ ಮೂಲಕ ಉತ್ತರ ಕೊಡಲಿದೆ!
ಗ್ರೋಕಿ-ವಿಕಿ ತಿಕ್ಕಾಟ ಓದುಗರಿಗೆ ಹಬ್ಬದೂಟ!
ಉದಾಹರಣೆಗೆ ದೇವರು ಇದ್ದಾನೋ ಇಲ್ವೋ? ಎನ್ನೋದು ತುಂಬಾ ದೊಡ್ಡ ಪ್ರಶ್ನೆ ಇಂತಹ ಪ್ರಶ್ನೆಗೆ ಸವಿವರ ಉತ್ತರ ಕೊಡುತ್ತಂತೆ ಗ್ರೋಕಿಪಿಡಿಯಾ 1.0 ಅದಕ್ಕಿನ್ನೂ ಸಮಯವಿದೆ ಬಿಡಿ…!ಈಗಾಗಲೇ ವೀಕಿಪೀಡಿಯಾದಲ್ಲಿ 7 ಮಿಲಿಯನ್ ಪುಟಗಳಿವೆ. ಅದಕ್ಕೆ ಇದು ಟಕ್ಕರ್ ಕೊಡುತ್ತಾ ಅಂತ ಯೋಚಿಸುವಾಗಲೇ ಒಂದೇ ಒಂದು ಲಾಂಚ್ ಗೆ 8 ಲಕ್ಷ ಚಿಲ್ಲರೆ ಮಾಹಿತಿ ಪುಟಗಳನ್ನು ತಯಾರಿಸಿದ ಈ ಸಂಸ್ಥೆ ಮುಂದೆ ವಿಕಿಪೀಡಿಯಾ ಜಾಗ ಆಕ್ರಮಿಸುವುದರಲ್ಲಿ ಸಂಶಯವಿಲ್ಲ. ಆದರೆ ಕಾಪಿ ರೈಟ್ ವಿಷಯಕ್ಕೆ ಸಂಬಂಧಿಸಿದಂತೆ ಅಲ್ಲಲ್ಲಿ ಗ್ರೋಕಿ ವಿಕಿಯ ಮಾಹಿತಿ ಕದ್ದಿದೆ ಎಂಬ ಆರೋಪವೂ ಕೇಳಿಬರುತ್ತಿದೆ! ಇದಕ್ಕೆ ಮಸ್ಕ್ ಏನು ಹೇಳುತ್ತಾನೋ? ಕಾದು ನೋಡಬೇಕಿದೆ. ಒಟ್ಟಾರೆ ಎರಡು ಆನೆಗಳು ಗಂಧದ ಮರಕ್ಕೆ ತಿಕ್ಕಾಡಿದ ಹಾಗೆ ಈ ಕಾಳಗ, ಹೇಗೆ ಪೈಪೋಪಿ ಹೆಚ್ಚಿದರೂ ಬಳಕೆದಾರರಿಗೆ, ಓದುಗರಿಗೆ ಭರಪೂರಿ ಲಾಭವಂತೂ ನಿಕ್ಕಿ.


