ಕಾರ್ಕಳ: ಗಂಡ-ಹೆಂಡತಿ ಜಗಳ ಬಿಡಿಸಿ ಬರುತ್ತಿದ್ದ ಪೊಲೀಸರಿಗೆ ಸಿಕ್ಕಿಬಿದ್ದ ಖತರ್ನಾಕ್ ಗೋಕಳ್ಳರು

ಕಾರ್ಕಳ : karkala illegal cow smuggling: ಕಸಾಯಿಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಜಾಲವೊಂದನ್ನು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಭೇದಿಸಿದ್ದಾರೆ. ರಾತ್ರಿ ವೇಳೆ ಗೂಡ್ಸ್ ವಾಹನದಲ್ಲಿ ಹಿಂಸಾತ್ಮಕವಾಗಿ ದನಗಳನ್ನು ಕಟ್ಟಿ ಸಾಗಿಸುತ್ತಿದ್ದ ದೃಶ್ಯ ಕಂಡು ಪೊಲೀಸರೇ ದಂಗಾಗಿದ್ದಾರೆ.

ಖತರ್ನಾಕ್ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ?

ಮಾರ್ಚ್ 1ರ ಭಾನುವಾರ ರಾತ್ರಿ ಕಾರ್ಕಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ನೀರೆ ಬೈಲೂರಿನ ಬಾರೆಜೆಡ್ಡುವಿನಲ್ಲಿ ಗಂಡ-ಹೆಂಡತಿ ನಡುವೆ ಜಗಳವಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ, ಹೆಡ್ ಕಾನ್ಸ್‌ಟೇಬಲ್ ಅವರ ಪೊಲೀಸ್ ಜೀಪಿನಲ್ಲಿ ತೆರಳಿ ಜಗಳ ಬಿಡಿಸಿದ್ದರು. ಬಳಿಕ ನೀರೆ ಬೈಲೂರು ಪರಿಸರದಲ್ಲಿ ಗಸ್ತು ಮುಗಿಸಿ, ರಾತ್ರಿ ಸುಮಾರು 10:00 ಗಂಟೆಗೆ ವಾಪಸ್ ಕಾರ್ಕಳದ ಕಡೆಗೆ ಬರುತ್ತಿದ್ದರು.

ಗೂಡ್ಸ್ ವಾಹನದಿಂದ ಇಳಿಯುತ್ತಿದ್ದ ನೀರು !

ಪೊಲೀಸ್ ಜೀಪು ಕಾರ್ಕಳ ತಾಲೂಕು ಕುಕ್ಕಂದೂರು ಗ್ರಾಮದ ಹಾರ್ಜೆಡ್ಡು ‘ಶ್ರೀ ದೇವಿ ಕೃಪಾ ಹಾಲ್’ ಎದುರುಗಡೆ ಬರುತ್ತಿದ್ದಂತೆ, ರಸ್ತೆ ಬದಿಯಲ್ಲಿ ಟಾಟಾ ಇಂಟ್ರಾ (Tata Intra) ಕಂಪನಿಯ ಗೂಡ್ಸ್ ವಾಹನವೊಂದು ಕಾರ್ಕಳದ ಕಡೆಗೆ ಮುಖ ಮಾಡಿ ನಿಂತಿರುವುದು ಕಂಡುಬಂದಿದೆ. ಪೊಲೀಸ್ ಜೀಪಿನ ಹೆಡ್‌ಲೈಟ್ ಬೆಳಕಿನಲ್ಲಿ ವಾಹನದ ಹಿಂಭಾಗದಿಂದ ನೀರು ಇಳಿಯುತ್ತಿರುವುದು ಸ್ಪಷ್ಟವಾಗಿ ಕಂಡಿದೆ. ಅಲ್ಲದೆ, ವಾಹನದ ಚಾಲಕ ತರಾತುರಿಯಲ್ಲಿ ತರ್ಪಾಲನ್ನು ಸರಿ ಮಾಡುತ್ತಿರುವುದನ್ನು ಗಮನಿಸಿದ ಪೊಲೀಸರಿಗೆ ಅನುಮಾನ ಶುರುವಾಗಿದೆ.

Also Read: Eta Irrigation Scheme: ಏತ ನೀರಾವರಿ ಯೋಜನೆ ವಿದ್ಯುತ್ ಸಂಪರ್ಕ ಕಡಿತ: ಸರ್ಕಾರದ ವಿರುದ್ಧ ವಿ. ಸುನಿಲ್ ಕುಮಾರ್ ವಾಗ್ದಾಳಿ

ತರ್ಪಾಲು ಸರಿಸಿದಾಗ ಕಂಡಿದ್ದು ಕರುಣಾಜನಕ ದೃಶ್ಯ!

ಅನುಮಾನಗೊಂಡ ಪೊಲೀಸರು ತಕ್ಷಣವೇ ವಾಹನದ ಬಳಿ ಹೋಗಿ ತರ್ಪಾಲನ್ನು ಸರಿಸಿ ನೋಡಿದ್ದಾರೆ. ಒಳಗೆ ಕಪ್ಪು-ಬಿಳಿ ಬಣ್ಣದ ಹಾಗೂ ಕಪ್ಪು-ಕಂದು-ಬಿಳಿ ಮಿಶ್ರಿತ ಬಣ್ಣದ ಎರಡು ದನಗಳನ್ನು ಹಗ್ಗದಿಂದ ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿರುವುದು ಕಂಡುಬಂದಿದೆ. ಈ ಗೋವುಗಳನ್ನು ಎಲ್ಲಿಂದಲೋ ಕಳವು ಮಾಡಿ, ಕಸಾಯಿಖಾನೆಗೆ ವಧೆ ಮಾಡಲು ಅತ್ಯಂತ ಕ್ರೂರವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.

ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಈ ಅಕ್ರಮ ಗೋಸಾಗಾಟ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಿದ ಕಾರ್ಕಳ ನಗರ ಪೊಲೀಸ್ ಠಾಣೆಯ ಸಿಹೆಚ್‌ಸಿ ಲೋಕೇಶ್ (52) ಅವರು ನೀಡಿದ ದೂರಿನ ಮೇರೆಗೆ ಇದೀಗ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

ಆರೋಪಿತರ ವಿರುದ್ಧ ಅಪರಾಧ ಕ್ರಮಾಂಕ 36/2026 ರ ಅಡಿಯಲ್ಲಿ, ನೂತನ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ರ ಕಲಂ 5, 12 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆ 11(1)(D) (Prevention Of Cruelty To Animals) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಕರಾವಳಿ ಭಾಗದಲ್ಲಿ ರಾತ್ರಿ ವೇಳೆ ಇಂತಹ ಅಕ್ರಮ ಗೋಸಾಗಾಟ ಪ್ರಕರಣಗಳು ಮರುಕಳಿಸುತ್ತಿದ್ದು, ಪೊಲೀಸರು ರಾತ್ರಿ ಗಸ್ತನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

karkala illegal cow smuggling case udupi crime news

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories