ನವರಾತ್ರಿಯ ೫ ನೇ ದಿನ – ಸ್ಕಂದನ ತಾಯಿಯಾಗಿ ಜಗನ್ಮಾತೆ ದರ್ಶನ- ಮಕ್ಕಳಿಗೆ ಬಾಳೆಹಣ್ಣು ನೀಡಿದ್ರೆ ದೇವಿ ಅನುಗ್ರಹ
Navaratri : ಸ್ಕಂದಮಾತಾ(Skandamata) ಇದು ನವರಾತ್ರಿಯ ಐದನೇ ರೂಪವಾಗಿದೆ. ತಾಯಿ ಸ್ವರೂಪದಲ್ಲಿಯೇ ದರ್ಶನ ನೀಡುತ್ತಾಳೆ ಇಲ್ಲಿ ಪಾರ್ವತಿ ದೇವಿ, ಸ್ಕಂದನ ಮಾತೆಯಾಗಿ ಪುಟ್ಟ ಪುತ್ರನನ್ನು ಕೈಯಲ್ಲಿ ಹಿಡಿದ ರೀತಿಯಲ್ಲಿಯೇ ತಾಯಿ ಭಕ್ತರಿಂದ ಪೂಜೆಗೊಳುತ್ತಾಳೆ.
ಹೌದು ತಾಯಿ ಸ್ಕಂದ ಮಾತೆಯು ತಾರಕಾಸುರ ವಧೆ ಮಾಡಲು ಹುಟ್ಟಿದ ಸ್ಕಂದನ ಜೊತೆಯಲ್ಲಿ ಇಲ್ಲಿ ಅರ್ಚಿತಳಾಗುತ್ತಾಳೆ. ಈ ಮೂಲಕ ಇಲ್ಲಿ ಸ್ಕಂದನ ತಾಯಿಯಾಗಿ ತಾನು ಹುಟ್ಟಿನ ಕಾರಣ ಈಡೇರಿಸಿಕೊಂಡಿದ್ದಾಳೆ . ಸತಿ ದೇವಿಯು ದೇಹ ತ್ಯಜಿಸಿದ ನಂತರ ಕೊಬ್ಬಿಸ ತಾರಾಕಾಸುರನೆಂಬ ರಾಕ್ಷಸನು ಸತಿ ಹಾಗೂ ಶಿವನಿಗೆ ಜನಿಸಿದ ಪುತ್ರನಿಂದಲೇ ತನ್ನ ವಧಿಯಾಗಬೇಕು ಎಂದು ಬ್ರಹ್ಮನಿಂದ ಪಡೆಯುತ್ತಾನೆ.
ಆದರೆ ಸತಿ ದೇವಿಯ ದೇಹ ನಶಿಸಿ ಹೋದದ್ದರಿಂದ ಶಿವನ ಪುತ್ರ ಬರುವುದು ಸಾಧ್ಯವಿರಲಿಲ್ಲ. ಆದರೆ ದೇವತೆಗಳ ಒತ್ತಾಯದ ಮೇರೆಗೆ ಶಕ್ತಿ ಸ್ವರೂಪದಲ್ಲಿದ್ದ ಆ ಜಗಜ್ಜನನಿ ಮತ್ತೆ ಪಾರ್ವತಿಯಾಗಿ ಹುಟ್ಟಿ ಬಂದು ಶಿವನನ್ನು ವರಿಸಿದ ಕಥೆ ಗೊತ್ತೇ ಇದೆ.ಈಗ ತಾರಕಾಸುರನ ಉಪಟಳ ಜಾಸ್ತಿಯಾಗುತ್ತಿದ್ದಂತೆ ಶಿವ ಮತ್ತು ಶಕ್ತಿಯರ ಅಂಶದಿಂದ ಪುತ್ರನೊಬ್ಬ ಹುಟ್ಟಿ ಬರುತ್ತಾನೆ ಆತನೇ ಸ್ಕಂದ. ಸ್ಕಂದ ಎಂದರೆ ಶಕ್ತಿಶಾಲಿ ದೇಹ ಹೊಂದಿದವನು ಎಂದರ್ಥ. ಮುಂದೆ ಆತನೇ ತಾರಕಾಸುರನನ್ನು ವಧಿಸಿ ಲೋಕ ಕಲ್ಯಾಣಕ್ಕೆ ಕಾರಣನಾದ.
ಸ್ಕಂದನನ್ನು ತಾಯಿಯಾಗಿ ಪಡೆದ ಪಾರ್ವತಿಯಾಗಿ ಇಲ್ಲಿ ಜಗನ್ಮಾತೆ ಕಾಣಿಸಿಕೊಂಡಿದ್ದಾಳೆ. ಇಲ್ಲಿ ಹೆಣ್ಣೊಬ್ಬಳು ಪರಿಪೂರ್ಣವಾಗಿ ನಿಂತ ರೀತಿಯಲ್ಲಿಲ್ಲೇ, ತಾಯಿ ತನ್ನ ಕೈಯಲ್ಲಿ ತನ್ನ ಪುತ್ರನನ್ನು ಹಿಡಿದು ಮಾತೃ ಪ್ರೇಮವನ್ನು ಭಕ್ತರ ಮೇಲೆ ಹರಿಸುತ್ತಾಳೆ.
ಇದನ್ನೂ ಓದಿ : Navaratri: ನವರಾತ್ರಿ ೪ ನೇ ದಿನ – ಬ್ರಹ್ಮಾಂಡವನ್ನೇ ಒಡಲಲ್ಲಿ ಧರಿಸಿ ನಿಂತಿದ್ದಾಳೆ ತಾಯಿ- ಕುಷ್ಮಾಂಡ ದೇವಿಗೆ ಕುಂಬಳ ಕಾಯಿಯೇ ಪ್ರಿಯ
ಜಗಜ್ಜನನಿಯ ರೂಪ:
ಸಿಂಹಾಸನಗತಂ ನಿತ್ಯಂ ಪದ್ಮಾಂಚಿತ ಕರದ್ವಯೇ|.
ಶುಭದಾಸ್ತು ಸದಾ ದೇವಿ ಕಂದ ಮಾತೇ ಯಶಸ್ವಿನಿ ||.
ಶ್ಲೋಕವೇ ಹೇಳುವಂತೆ ಈಕೆ ಚತುರ್ಭುಜಯಾಗಿದ್ದಾಳೆ . ಒಂದು ಕೈಯಲ್ಲಿ ಸ್ಕಂದನನ್ನು, ಇನ್ನೊಂದು ಕೈಯಲ್ಲಿ ಅಭಯಮುದ್ರೆಯನ್ನು ಹಾಗೆ ಮತ್ತೆರಡು ಕೈಗಳಲ್ಲಿ ಕಮಲವನ್ನು ಹಿಡಿದಿದ್ದಾಳೆ. ಈಕೆಯ ಮೈಬಣ್ಣ ಬಿಳಿಯಾಗಿ, ಶಾಂತ ಸ್ವರೂಪಿಣಿಯಾಗಿ ಸಿಂಹದ ಮೇಲೆ ಕುಳಿತು ದರ್ಶನ ನೀಡುತ್ತಿದ್ದಾಳೆ. ಇನ್ನು ಸ್ಕಂದಮಾತೆ ಬುಧ ಗ್ರಹದ ಮೇಲೆ ಅಧಿಪತ್ಯ ಹೊಂದಿದ್ದಾಳೆ. ಬುಧ ಗ್ರಹವನ್ನು ರೋಗ ಕಾರಕ ಎಂದು ಕರೆಯಲಾಗುತ್ತದೆ.
ಈಕೆಯನ್ನು ಪೂಜಿಸಿದ್ರೆ ಸಂಪತ್ತು, ಹೆಸರು, ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಇನ್ನು ಈ ರೂಪದಲ್ಲಿ ಸ್ಕಂದನೂ ಇರೋದ್ರಿಂದ, ಸ್ಕಂದ ಮಂಗಳನ ಮೇಲೆ ಅಧಿಪತ್ಯ ಹೊಂದಿದ್ದಾನೆ. ಪುತ್ರ ಸಹಿತವಾಗಿ ಸ್ಕಂದಮಾತೆಯನ್ನು ಪೂಜಿಸುವುದರಿಂದ ಬುಧ ಹಾಗೂ ಮಂಗಳ ಗ್ರಹದ ತೊಂದರೆ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ : ಚಂದ್ರಘಂಟೇಯಾಗಿ ಪೂಜಿತಳಾಗುತ್ತಾಳೆ ತಾಯಿ : ನೀಲಿ ಬಣ್ಣದ ವಸ್ತ್ರ ಪೂಜೆಗೆ ಶ್ರೇಷ್ಠ
ಆರಾಧನಾ ರೀತಿ
ಸ್ಕಂದ ಮಾತೆ ಮೊದಲೇ ಹೇಳಿದಂತೆ ಶಾಂತ ಸ್ವರೂಪದಲ್ಲಿ ದರ್ಶನ ನೀಡುವ ಮಾತೆ. ಆಕೆ ಆರಾಧನೆಯಲ್ಲಿ ಸೌಮ್ಯ ಬಣ್ಣ ಹಾಗೂ ಹೂಗಳನ್ನು ಅರ್ಪಿಸಲಾಗುತ್ತದೆ. ತಾಯಿಗೆ ಕಮಲ, ಗುಲಾಬಿ ಹಾಗೂ ಬಿಳಿ ಸೇವಂತಿಗೆ ಹೂವು ಕೆಂಪು ಹೂವನ್ನು ಅರ್ಪಿಸಿ ಪೂಜಿಸಲಾಗುತ್ತದೆ. ಇನ್ನು ನೈವೇದ್ಯವಾಗಿ ಬಾಳೆಹಣ್ಣು ಹಾಗೂ ಬಾಳೆಹಣ್ಣಿನಿಂದ ಮಾಡಲ್ಪಟ್ಟ ಸಿಹಿಖಾದ್ಯವನ್ನು ಅರ್ಪಿಸುವ ಪದ್ಧತಿ ಇದೆ.
ಇಲ್ಲಿ ತಾಯಿ ಮಾತೃ ಸ್ವರೂಪಿಣಿ ಆಗಿರೋದ್ರಿಂದ ಮಕ್ಕಳಿಗೆ ಬಾಳೆಹಣ್ಣಿನ ಪ್ರಸಾದವನ್ನು ನೀಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಸಾಧಕರಿಗೆ ಸಾಧನೆ ಮಾಡಲು ತಾಯಿ ವಿಶುದ್ಧ ಚಕ್ರದಲ್ಲಿ ನೆಲೆ ನಿಂತಿರುತ್ತಾಳೆ. ಗಂಟಲಿನ ಬಳಿಯಲ್ಲಿ ಈ ಚಕ್ರ ಸ್ಥಿತವಾಗಿದ್ದು, ಇದನ್ನು ಊರ್ಜಿತ ಮಾಡಿದರೆ ಶುದ್ಧವಾಣಿ ಹಾಗು ಮನಸ್ಸಿನ ಮೇಲೆ ನಿಯಂತ್ರಣ ಬರುತ್ತದೆ ಎಂದು ನಂಬಲಾಗುತ್ತದೆ.



