ಬಂದೇ ಬಿಟ್ಟಿತು ಓಪನ್‌ಎಐ ನ ಚಾಟ್‌ಜಿಪಿಟಿ ಅಟ್ಲಾಸ್‌! ಗೂಗಲ್‌ ಕ್ರೋಮ್‌ನಿಂದ ಅದೆಷ್ಟು ಭಿನ್ನ?

ChatGPT Atlas: ಓಪನ್‌ಎಐ ತನ್ನದೇ ಆದ ವೆಬ್‌ ಬ್ರೌಸರ್‌ ‘ಚಾಟ್‌ ಜಿಪಿಟಿ ಅಟ್ಲಾಸ್‌’ ಅನ್ನು ಬಿಡುಗಡೆ ಮಾಡಿದೆ. ಇದು ಸದ್ಯದ ಹೊಸ ತಂತ್ರಜ್ಞಾನ ಎಐ ಚಾಲಿತ ವೆಬ್‌ ಬ್ರೌಸರ್‌ ಆಗಿದೆ.

ಗೂಗಲ್‌ ಕ್ರೋಮ್‌ ಮತ್ತು ಆ್ಯಪಲ್‌ನ ಸಫಾರಿ ಬ್ರೌಸರ್‌ಗೆ ಹೋಲಿಸಿದರೆ ಇದು ಸ್ಮಾರ್ಟ್‌–ಸೂಪರ್‌ ಅಸಿಸ್ಟೆಂಟ್‌ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರು ವೆಬ್ ಬ್ರೌಸರ್ ಬಳಸುವ ಅರ್ಥವನ್ನು ನಾವು ಮರು ವ್ಯಾಖ್ಯಾನಿಸಬಹುದಾದ ಸಮಯ ಇದು ಎಂದು ಈ ಬ್ರೌಸರ್‌ ಅನ್ನು ಪ್ರಾರಂಭಿಸುವಾಗ ಹೇಳಿದ್ದರು.

ಏನಿದು ಚಾಟ್‌ಜಿಪಿಟಿ ಅಟ್ಲಾಸ್‌?

ಚಾಟ್‌ಜಿಪಿಟಿ ಅಟ್ಲಾಸ್ ಒಂದು ಎಐ-ಚಾಲಿತ ಬ್ರೌಸರ್ ಆಗಿದೆ. ಇತರ ಬ್ರೌಸರ್‌ಗಳಲ್ಲಿ ಎಐ ಅನ್ನು ಆಡ್‌–ಇನ್‌ ವೈಶಿಷ್ಟ್ಯವಾಗಿ ನೀಡುತ್ತವೆ.

ಆದರೆ ಅಟ್ಲಾಸ್‌ ಬ್ರೌಸರ್‌ ಚಾಟ್‌ಜಿಪಿಟಿಯನ್ನು ವೆಬ್‌ ನ್ಯಾವಿಗೇಷನ್‌, ಸರ್ಚ್‌ ಮತ್ತು ಪ್ರೊಡಕ್ಟಿವಿಟಿಯನ್ನು ಕೇಂದ್ರದಲ್ಲಿರಿಸಿಕೊಂಡಿದೆ.

ಸದ್ಯ ಈ ಬ್ರೌಸರ್‌ ಅನ್ನು ಕಂಪನಿಯು macOS ಗಾಗಿ ಲಾಂಚ್ ಮಾಡಿದೆ. ಇದು ಫ್ರೀ, ಪ್ಲಸ್‌, ಪ್ರೋ ಮತ್ತು ಗೋ ಎಂಬ ಸಬ್‌ಸ್ಕ್ರಿಪ್ಷನ್‌ ಮೋಡ್‌ಗಳಲ್ಲಿ ಬಿಡುಗಡೆಗೊಳಿಸಿದೆ.

ಬಿಜಿನೆಸ್‌ ಬಳಕೆದಾರರಿಗೆ ಸದ್ಯ ಇದು ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಎಂಟರ್‌ಪ್ರೈಸ್ ಮತ್ತು ಶಿಕ್ಷಣ ಬಳಕೆದಾರರು ಇದನ್ನು ಐಚ್ಛಿಕವಾಗಿ ಪ್ರವೇಶಿಸಬಹುದು.

ಕಂಪನಿಯು ಶೀಘ್ರದಲ್ಲೇ ಇದನ್ನು ವಿಂಡೋಸ್, ಐಒಎಸ್ ಮತ್ತು ಆಂಡ್ರಾಯ್ಡ್‌ಗಳಿಗೆ ಪರಿಚಯಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಯೂನಿಕ್ ಡಿಸೈನ್‌ನ ರಿಯಲ್ ಮಿ 15 ಪ್ರೊ ಗೇಮ್ ಆಫ್ ಥೋನ್ಸ್ ಆವೃತ್ತಿಯ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ

ಗೌಪ್ಯತೆ ವೈಶಿಷ್ಟ್ಯ ಹೇಗಿದೆ?

ಈ ಬ್ರೌಸರ್‌ನಲ್ಲಿ ಓಪನ್‌ಎಐ ಗೌಪ್ಯತೆಯ ಬಗ್ಗೆ ವಿಶೇಷ ಗಮನವಹಿಸಿದೆ. ಬಳಕೆದಾರರು ತಮ್ಮ ವೆಬ್‌ ಹಿಸ್ಟರಿ ಅಥವಾ ಬ್ರೌಸಿಂಗ್‌ ಹಿಸ್ಟರಿಯನ್ನು ಕ್ಲಿಯರ್‌ ಮಾಡಬಹುದಾಗಿದೆ. ಇದರ ಜೊತೆಗೆ ಅತ್ಯಂತ ಸುರಕ್ಷಿತ ಎನ್ನುವ ಇನ್‌ಕಾಗ್ನಿಟೊ ವಿಂಡೋವನ್ನು ಸಹ ನೀಡಲಾಗಿದೆ.

ಬಳಕೆದಾರರು ಯಾವುದೇ ವೆಬ್‌ಸೈಟ್‌ಗೆ ChatGPT ಯ ಪ್ರವೇಶವನ್ನು ನಿರ್ಬಂಧಿಸಲು ಬಯಸಿದರೆ, ಅವರು ಟಾಗಲ್ ಸಹಾಯದಿಂದ ಅದನ್ನು ಕಾರ್ಯಗತಗೊಳಿಸಬಹುದಾಗಿದೆ.

ಮಕ್ಕಳಿಗೆ ಸುರಕ್ಷತೆಯನ್ನು ಒದಗಿಸಲು ಪೇರೆಂಟ್ ಕಂಟ್ರೋಲ್ ವೈಶಿಷ್ಟ್ಯವನ್ನು ಸಹ ನೀಡಿಲಾಗಿದೆ. ಇನ್ನು ಮಾಹಿತಿಯನ್ನು ಅರ್ಕೈವ್‌, ಡಿಲೀಟ್‌ ಮಾಡಬಹುದಾದ ಆಯ್ಕೆಯನ್ನು ನೀಡುತ್ತದೆ.

ಅಟ್ಲಾಸ್ ಬ್ರೌಸರ್‌ನ ವೈಶಿಷ್ಟ್ಯಗಳು

ಅಟ್ಲಾಸ್ ಬ್ರೌಸರ್‌ನ ಸೈಡ್‌ಬಾರ್‌ನಲ್ಲಿರುವ ಪ್ರತಿಯೊಂದು ವೆಬ್ ಪುಟದಲ್ಲಿ ChatGPT ಅನ್ನು ಸಕ್ರಿಯಗೊಳಿಸಲಾಗಿದೆ. ಇದು ವೆಬ್ ಪುಟದಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಬಳಕೆದಾರರು ವಿಷಯವನ್ನು ಕಾಪಿ ಮಾಡುವ ಅಗತ್ಯವಿಲ್ಲ.

ಅಟ್ಲಾಸ್ ಬ್ರೌಸರ್ ಅಂತರ್ನಿರ್ಮಿತ ChatGPT ಮೆಮೊರಿಯನ್ನು ಹೊಂದಿದ್ದು, ಇದು ಹಿಂದಿನ ಸಂಭಾಷಣೆಗಳು ಮತ್ತು ಬ್ರೌಸಿಂಗ್ ಇತಿಹಾಸವನ್ನು ಸೇವ್‌ ಮಾಡಿಟ್ಟುಕೊಳ್ಳುತ್ತದೆ. ಇದರಿಂದ ಬಳಕೆದಾರರು ಕೇವಲ ಪ್ರಾಂಪ್ಟ್ ಅನ್ನು ಟೈಪ್ ಮಾಡುವ ಮೂಲಕ ಹಿಂದಿನ ವೆಬ್ ಹಿಸ್ಟರಿಯನ್ನು ನೇರವಾಗಿ ಪ್ರವೇಶಿಸಬಹುದು.

ಇದರಲ್ಲಿ ಬಳಕೆದಾರರು ನೇರವಾಗಿ ಪ್ರಶ್ನೆಗಳನ್ನು ಕೇಳಬಹುದಾದ ಅಥವಾ ಯಾವುದಾದರೂ ವಿಷಯವನ್ನು ವೀಕ್ಷಿಸಲು URL ಗಳನ್ನು ನಮೂದಿಸಬಹುದಾದ ಸ್ಮಾರ್ಟ್ ಸರ್ಚ್‌ ಇದರಲ್ಲಿದೆ.

ಅಟ್ಲಾಸ್ ಬ್ರೌಸರ್ ಏಜೆಂಟ್ ಮೋಡ್ ವೈಶಿಷ್ಟ್ಯವನ್ನು ಒಳಗೊಂಡಿದ್ದು ಅದು ಬಳಕೆದಾರರಿಗೆ ವಿವಿಧ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: ಶಕ್ತಿಶಾಲಿ ಕ್ಯಾಮೆರಾ, ಸೂಪರ್ ಡಿಸ್ಸೇ ಇರುವ ವಿವೋ X300 ಸರಣಿ ಫೋನ್‌ಗಳು ಅನಾವರಣ

(OpenAI s new web browser ChatGPT Atlas how is different from google chrome)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories