India vs South Africa Results: ದಕ್ಷಿಣ ಆಫ್ರಿಕಾದ ವಿರುದ್ಧ ರೋಚಕವಾಗಿ ಗೆದ್ದ ಭಾರತ! ಮಿಂಚಿ ಮಿನುಗಿದ ಟೀಂ ಇಂಡಿಯಾ
ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧ ನಡೆದ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ (India vs South Africa Results) ಭಾರತ ‘ಎ’ ತಂಡವು ಕೊನೆಯ ಕ್ಷಣದವರೆಗೂ ಹೋರಾಡಿ ರೋಚಕ ವಿಜಯ ಸಾಧಿಸಿದೆ. ಈ ಜಯದೊಂದಿಗೆ ಭಾರತ ತಂಡ ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಗಳಿಸಿದೆ.
ಪಂದ್ಯದ ಗೆಲುವಿಗೆ 275 ರನ್‌ಗಳ ಸವಾಲಿನ ಗುರಿ ಪಡೆದ ಭಾರತ ‘ಎ’ ತಂಡ, ಅಂತಿಮ ದಿನದಾಟದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 32 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು. ಇಂತಹ ನಿರ್ಣಾಯಕ ಸನ್ನಿವೇಶದಲ್ಲಿ ಮೈದಾನಕ್ಕೆ ಇಳಿದ ನಾಯಕ ರಿಷಭ್ ಪಂತ್ (90 ರನ್) ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ಅವರು ಕೇವಲ 113 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 90 ರನ್ ಚಚ್ಚಿ ತಂಡಕ್ಕೆ ದೊಡ್ಡ ಆಸರೆಯಾದರು. ಪಂತ್ ಅವರ ಆಕ್ರಮಣಕಾರಿ ಆಟದಿಂದಾಗಿ ಗುರಿ ತಲುಪುವ ಭರವಸೆ ಹೆಚ್ಚಾಯಿತು.
ಪಂತ್ ಶತಕದ ಅಂಚಿನಲ್ಲಿ ಎಡವಿದರೂ, ತಂಡ ಗೆಲುವಿನ ಸನಿಹ ತಲುಪಿತ್ತು. ಕೊನೆಯ ಹಂತದಲ್ಲಿ ಬಾಲಂಗೋಚಿ ಬ್ಯಾಟರ್‌ಗಳ ಜೊತೆಗೂಡಿ ಸ್ಪಿನ್ನರ್ ತನುಷ್ ಕೋಟ್ಯಾನ್ ಜವಾಬ್ದಾರಿಯುತ ಆಟ ಪ್ರದರ್ಶಿಸಿ ಗೆಲುವಿನ ರನ್ ಗಳಿಸಿದರು. ಕೋಟ್ಯಾನ್ ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲದೆ, ಬೌಲಿಂಗ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಿಂದ ಒಟ್ಟು 8 ವಿಕೆಟ್‌ಗಳನ್ನು ಪಡೆದು ಮಿಂಚಿದರು.
ದಕ್ಷಿಣ ಆಫ್ರಿಕಾ ‘ಎ’ ತಂಡದ ಬೌಲರ್‌ಗಳು ಕೊನೆಯವರೆಗೂ ಹೋರಾಟ ಮುಂದುವರಿಸಿದರೂ, ಪಂತ್ ಅವರ ಆಕರ್ಷಕ ಆಟ ಮತ್ತು ಕೋಟ್ಯಾನ್ ಅವರ ಸಮಗ್ರ ಪ್ರದರ್ಶನದ ಮುಂದೆ ಶರಣಾಗಬೇಕಾಯಿತು. ಗಾಯದ ನಂತರ ಕ್ರಿಕೆಟ್‌ಗೆ ಮರಳಿದ ಪಂತ್ ನಾಯಕತ್ವದಲ್ಲಿ ಭಾರತ ‘ಎ’ ತಂಡ ಮೂರು ವಿಕೆಟ್‌ಗಳ ಅಂತರದಲ್ಲಿ ಅಮೂಲ್ಯ ಗೆಲುವು ಸಾಧಿಸಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.



